ಶಿಬಿರದಿಂದ ಮಕ್ಕಳಲ್ಲಿ ಕೌಶಲ ಬೆಳವಣಿಗೆ

ಯಾದಗಿರಿ: ಮಕ್ಕಳು ಬೇಸಿಗೆ ಶಿಬಿರದಲ್ಲಿ ಭಾಗವಹಿಸುವುದರಿಂದ ಹೊಂದಾಣಿಕೆ, ತಂಡದಲ್ಲಿ ಹಂಚಿಕೊಳ್ಳುವುದು, ಸಮಯ ಪಾಲನೆ ಮತ್ತು ಭಾಗವಹಿಸುವಿಕೆ ಕೌಶಲಗಳು ಬೆಳೆಯುತ್ತವೆ. ಇದರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಾಗಲು ಸಾಧ್ಯ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜಿ.ಮಣ್ಣೂರ್ ಹೇಳಿದರು.

ನಗರದ ಸ್ತ್ರೀ ಶಕ್ತಿ ಭವನದಲ್ಲಿ ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಆಶ್ರಯದಲ್ಲಿ 6-14 ವರ್ಷದ ಮಕ್ಕಳಿಗೆ ಹಮ್ಮಿಕೊಂಡ ತಾಲೂಕು ಮಟ್ಟದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

ಬೇಸಿಗೆ ಶಿಬಿರ ಮಕ್ಕಳಿಗೆ ಉತ್ತಮ ವೇದಿಕೆಯಾಗಿದ್ದು, ತಮ್ಮಲ್ಲಿ ಅಡಗಿರುವ ಶಕ್ತಿ, ಕೌಶಲಗಳನ್ನು ಹೊರ ಹಾಕುವುದರಲ್ಲಿ ಉಪಯುಕ್ತವಾಗಿದೆ. ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಬಾಲ ಭವನ ಸೊಸೈಟಿಯ ಎಲ್ಲ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಬಾಲಭವನ ಸಂಯೋಜಕ ಅನಿಲ್ ಮಾತನಾಡಿ, ಬಾಲ ಭವನ ಸೊಸೈಟಿಯಲ್ಲಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ತಿಳಿಸುವುದರ ಜತೆಗೆ ಅವುಗಳಲ್ಲಿ ಮಕ್ಕಳು ಮತ್ತು ತಮ್ಮ ಗೆಳೆಯರಿಗೂ ತಿಳಿಸಿ ಭಾಗವಹಿಸಬೇಕು. ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆಯಬೇಕು ಎಂದು ಹೇಳಿದರು.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೇಲ್ಚಿಚಾರಕಿಯರು ಹಾಗೂ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಪುಷ್ಪಾ ಮತ್ತು ಅಬ್ದುಲ್ ಬಿ. ಅವರು ಉಪಸ್ಥಿತರಿದ್ದರು. ಮೇಲ್ವಿಚಾರಕಿ ಮಹಿಬೂಬಿ ಅವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *