More

    ಉದ್ಯಮ ಶುಲ್ಕ ವಸೂಲಿಯಲ್ಲಿ ಹಿನ್ನಡೆ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸರ್ಕಾರವು ಮಹಾನಗರ ಪಾಲಿಕೆಯ ಆದಾಯ ಹೆಚ್ಚಿಸಲು ಹಲವು ರೀತಿಯ ಕಸರತ್ತು ನಡೆಸುತ್ತಿದ್ದರೆ, ಇತ್ತ ಆದಾಯ ವಸೂಲಾತಿಯಲ್ಲಿ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಪಾಲಿಕೆ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ಆಡಳಿತಾಧಿಕಾರಿ ಅವಧಿಯಲ್ಲಿಯೇ 22 ಲಕ್ಷ ರೂ. ಬಾಕಿ ಉಳಿದಿದೆ.

    ಬೆಳಗಾವಿ ನಗರದಲ್ಲಿ ಯಾವುದೇ ವಾಣಿಜ್ಯ ಉದ್ಯಮ ನಡೆಸಬೇಕೆಂದರೂ ಪಾಲಿಕೆಯಿಂದ ಉದ್ದಿಮೆ ಪರವಾನಗಿ ಪಡೆಯಬೇಕು. ಜತೆಗೆ ಪ್ರತಿ ವರ್ಷ ನವೀಕರಿಸಬೇಕು. ಆದರೆ, 2015 ರಿಂದ 2019ರ ನಡುವಿನ ಅವಧಿಯಲ್ಲಿ 80 ಲಕ್ಷ ರೂ. ವಸೂಲಾತಿ ಬಾಕಿ ಉಳಿದುಕೊಂಡಿದೆ. ಪ್ರತಿವರ್ಷ ಉದ್ದಿಮೆಗಳ ಪರವಾನಗಿ ನವೀಕರಣ ನಡೆದಿಲ್ಲ. ಮತ್ತೊಂದೆಡೆ ಅನಧಿಕೃತ ಕಟ್ಟಡಗಳು, ಪಬ್, ಬಾರ್, ರೆಸ್ಟೋರೆಂಟ್ ಸೇರಿ ವಸತಿ ಪ್ರದೇಶಗಳಲ್ಲಿ ಅಕ್ರಮವಾಗಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ಉದ್ದಿಮೆಗಳನ್ನು ಪತ್ತೆ ಹಚ್ಚದಿರುವುದೂ ಪಾಲಿಕೆಗೆ ಆದಾಯ ನಷ್ಟವಾಗಲು ಪ್ರಮುಖ ಕಾರಣವಾಗಿದೆ.

    ಪಾಲಿಕೆ ಆರೋಗ್ಯ ಅಧಿಕಾರಿಗಳು ಆಹಾರ ಪದಾರ್ಥಗಳ ತಯಾರಿಕೆ ಕಾರ್ಖಾನೆಗಳು, ಆಸ್ಪತ್ರೆಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್, ಕಲ್ಯಾಣ ಮಂಟಪ ಕಟ್ಟಡಗಳು, ಖಾಸಗಿ ವಸತಿ ನಿಲಯಗಳು, ಜ್ಯೂಸ್ ಸೆಂಟರ್, ಡೆಂಟಲ್ ಕ್ಲಿನಿಕ್, ತಜ್ಞರ ಕ್ಲಿನಿಕ್, ಮಳಿಗೆಗಳು ಸೇರಿ ಇತರ 8.5 ಸಾವಿರಕ್ಕೂ ಅಧಿಕ ಉದ್ದಿಮೆ ಪರವಾನಗಿ ನೀಡಿದ್ದಾರೆ. ಆದರೆ, ಪ್ರತಿವರ್ಷ ತೆರಿಗೆ ವಸೂಲಾತಿ ಆಗುತ್ತಿರುವುದು ಕೇವಲ 4 ರಿಂದ 5 ಸಾವಿರ ಉದ್ದಿಮೆಗಳಿಂದ ಮಾತ್ರ. ಇನ್ನುಳಿದ ಉದ್ದಿಮೆಗಳ ಪರವಾನಗಿ ನವೀಕರಣ ಇಲ್ಲ. ಜತೆಗೆ ಶುಲ್ಕ ವಸೂಲಾತಿ ಆಗುತ್ತಿಲ್ಲ.

    ಪಾಲಿಕೆಯಿಂದ ಪರವಾನಗಿ ಪಡೆದುಕೊಳ್ಳುವ ಉದ್ದಿಮೆಗಳಿಗೆ ಕುಡಿಯುವ ನೀರು, ವಿದ್ಯುತ್, ಒಳಚರಂಡಿ ಸೇರಿ ಮೂಲ ಸೌಕರ್ಯ ಕಲ್ಪಿಸಿಕೊಡಲಾಗುತ್ತಿದೆ. ಆದರೆ, ಸಮರ್ಪಕವಾಗಿ ಶುಲ್ಕ ವಸೂಲಾತಿ ಆಗುತ್ತಿಲ್ಲ. ವಾರ್ಷಿಕ ಕೋಟ್ಯಂತರ ರೂ. ಆದಾಯ ಗಳಿಸುತ್ತಿರುವ ಉದ್ದಿಮೆದಾರರು ಪಾಲಿಕೆಗೆ 2 ಸಾವಿರ ರೂ. ವರೆಗೆ ಪರವಾನಗಿ ಶುಲ್ಕ ಕಟ್ಟುತ್ತಿಲ್ಲ. ಇದರಿಂದ ಪಾಲಿಕೆಗೆ ವಾರ್ಷಿಕ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಹಾಗಾಗಿ, ಪರವಾನಗಿ ಶುಲ್ಕ ಪರಿಷ್ಕರಣೆ ಮಾಡುವುದು ಅವಶ್ಯವಿದೆ. ಆದರೆ, ಅಧಿಕಾರಿಗಳು ಪರಿಷ್ಕರಣೆ ಮಾಡುತ್ತಿಲ್ಲ.

    ಬೆಳಗಾವಿ ನಗರದಲ್ಲಿ 130ಕ್ಕೂ ಅಧಿಕ ಅತಿಥಿ ಗೃಹಗಳು (ಪಿಜಿ) ಕಾರ್ಯ ನಿರ್ವಹಿಸುತ್ತಿದ್ದು, ಪಾಲಿಕೆಯಿಂದ ಪರವಾನಗಿ ಪಡೆದುಕೊಂಡಿಲ್ಲ. ನಗರದಲ್ಲಿನ ಒಂದೊಂದು ಮಾಸಿಕ 50 ರಿಂದ 80 ಸಾವಿರ ರೂ.ವರೆಗೆ ಆದಾಯ ಗಳಿಸುತ್ತಿವೆ. ವಸತಿ ನಿವೇಶನ ಕಟ್ಟಡ ಪರವಾನಗಿ ಪಡೆದುಕೊಂಡು ಕೆಲವರು ಪಿಜಿಗಳನ್ನು ನಡೆಸುತ್ತಿದ್ದಾರೆ. ಇವುಗಳ ವಿರುದ್ಧ ಪಾಲಿಕೆ ಅಧಿಕಾರಿಗಳು ತಕ್ಷಣ ಕ್ರಮ ಜರುಗಿಸಬೇಕು ಎಂದು ಪಾಲಿಕೆಯ ಮಾಜಿ ಸದಸ್ಯರು ಆಗ್ರಹಿಸಿದ್ದಾರೆ.

    ಮಾರ್ಚ್ ಅಂತ್ಯದ ಒಳಗಾಗಿ ಉದ್ದಿಮೆ ಪರವಾನಗಿ ಶುಲ್ಕ, ಜಾಹೀರಾತು ಸೇರಿ ಇತರ ಶುಲ್ಕ ವಸೂಲಾತಿ ಮಾಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ವಸೂಲಿ ಮಾಡದೆ ಬಾಕಿ ಉಳಿಸಿಕೊಂಡರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.
    | ಕೆ.ಎಚ್. ಜಗದೀಶ ಪಾಲಿಕೆ ಆಯುಕ್ತ

    ಹೊಸ ಉದ್ದಿಮೆಗಳ ಪರವಾನಗಿ ಶುಲ್ಕ ವಸೂಲಿ ಮಾಡಲಾಗಿದೆ. ನಾಲ್ಕೈದು ವರ್ಷಗಳಿಂದ ಪರವಾನಗಿ ನವೀಕರಣ ಶುಲ್ಕ ವಸೂಲಾತಿ ಬಾಕಿ ಉಳಿದುಕೊಂಡಿದೆ. ಮಾ. 15ರಿಂದ ವಿಶೇಷ ಕಾರ್ಯಾಚರಣೆ ಆರಂಭಿಸಲಾಗುವುದು.
    | ಡಾ. ಸಂಜಯ ಡುಮ್ಮಗೋಳ ಪಾಲಿಕೆ ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts