ಹೆಚ್ಚು ಉದ್ಯೋಗ ಸೃಷ್ಟಿಸಲಿದೆ ನಾಲ್ಕನೇ ಕೈಗಾರಿಕಾ ಕ್ರಾಂತಿ: ಮೋದಿ

ದೆಹಲಿ: ತಂತ್ರಜ್ಞಾನದ ಪರಿಣಾಮವಾಗಿ ಉದ್ಯೋಗ ಕಡಿತವಾಗಲಿದೆ ಎಂಬ ಸಾರ್ವತ್ರಿಕ ಆತಂಕ ನಿವಾರಣೆ ಮಾಡುವ ಮಾತುಗಳನ್ನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, “ಔದ್ಯೋಗಿಕ ಪರಿಕಲ್ಪನೆ ಬದಲಾಗುತ್ತಿರುವ ತಾಂತ್ರಿಕ ಜಗತ್ತಿನಲ್ಲಿ ನಾಲ್ಕನೇ ಕೈಗಾರಿಕಾ ಕ್ರಾಂತಿಯೂ ಹೆಚ್ಚು ಹೆಚ್ಚು ಉದ್ಯೋಗವಕಾಶಗಳನ್ನು ಸೃಷ್ಟಿ ಮಾಡಲಿದೆ,”ಎಂದು ಹೇಳಿದ್ದಾರೆ.

ನಾಲ್ಕನೇ ಕೈಗಾರಿಕಾ ಕ್ರಾಂತಿ ಅಂಗವಾಗಿ ವಿಶ್ವ ಆರ್ಥಿಕ ವೇದಿಕೆ ( WEF)ಗೆ ಚಾಲನೆ ನೀಡಿದ ಪ್ರಧಾನಿ, ನಾಲ್ಕನೇ ಕೈಗಾರಿಕಾ ಕ್ರಾಂತಿಯ ಲಾಭ ಪಡೆದುಕೊಳ್ಳಲು ಸದ್ಯದ ಎನ್​ಡಿಎ ಸರ್ಕಾರವೂ ನೀತಿಗಳ ಬದಲಾವಣೆಗೆ ಉದ್ದೇಶಿಸಿದೆ ಎಂದು ಹೇಳಿದರು.

” ನಮ್ಮಲ್ಲಿನ ವೈವಿಧ್ಯತೆ , ಮಾನವ ಸಂಪನ್ಮೂಲ, ವೇಗವಾಗಿ ವೃದ್ಧಿಸುತ್ತಿರುವ ಮಾರುಕಟ್ಟೆ ಜಾಲ, ಡಿಜಿಟಲ್​ ಸೌಲಭ್ಯವು ಭಾರತವನ್ನು ಸಂಶೋಧನೆ ಮತ್ತು ಅನುಷ್ಠಾನದಲ್ಲಿ ಜಾಗತಿಕ ಕೇಂದ್ರವನ್ನಾಗಿಸಲಿದೆ ,”ಎಂದು ಮೋದಿ ಹೇಳಿದರು.

ದೇಶದ ಮೊದಲ ಎರಡು ಕೈಗಾರಿಕಾ ಕ್ರಾಂತಿಗಳು ಘಟಿಸಿದಾಗ ಭಾರತ ಸ್ವಾತಂತ್ರ್ಯ ಗಳಿಸಿರಲಿಲ್ಲ.. ಮೂರನೇ ಕ್ರಾಂತಿ ನಡೆದಾಗ ದೇಶ ಸ್ವತಂತ್ರಗೊಂಡಿದ್ದರೂ, ಸವಾಲುಗಳು ಅಧಿಕವಾಗಿದ್ದವು. ಆದರೆ, ಭಾರತದ ಮುಂದಿನ ಕೈಗಾರಿಕಾ ಕ್ರಾಂತಿಯೂ ಅಭೂತಪೂರ್ವಕವಾಗಿರಲಿದೆ” ಎಂದರು.

ತಂತ್ರಜ್ಞಾನ ಉದ್ಯೋಗವಕಾಶಗಳನ್ನು ಕಸಿಯಲಿದೆ ಎಂಬ ಮಾತನ್ನು ತಳ್ಳಿಹಾಕಿರುವ ಪ್ರಧಾನಿ, ” ಕೃತಕ ಬುದ್ಧಿಮತ್ತೆ, ಮೆಷಿನ್​ ಲರ್ನಿಂಗ್​ ವ್ಯವಸ್ಥೆ, ಅಂತರ್ಜಾಲ ಸಂಗತಿ, ದತ್ತಾಂಶ ಸಂಗ್ರಹಣೆ ಪ್ರಕ್ರಿಯೆಗಳೆಲ್ಲವೂ ಭಾರತವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದೆ. ಟೆಲಿ ಸಾಂದ್ರತೆ ಎಂಬುದು ಇತ್ತೀಚಿನ ವರ್ಷಗಳಲ್ಲಿ 93% ಏರಿಕೆಯಾಗಿದೆ. ದೇಶದ 50 ಕೋಟಿ ಜನರ ಬಳಿ ಮೊಬೈಲ್​ಗಳಿವೆ,” ಎಂದರು. ಅಲ್ಲದೆ, “ನಾವಿನ್ನು ಮುಟ್ಟಲೂ ಸಾಧ್ಯವೇ ಆಗದ ವಲಯದಲ್ಲಿಯೂ ಉದ್ಯೋಗವಕಾಶಗಳನ್ನು ಸೃಷ್ಟಿಸುವಲ್ಲಿ ನಾಲ್ಕನೇ ಕೈಗಾರಿಕಾ ಕ್ರಾಂತಿಯೂ ನೆರವಾಗಲಿದೆ. ಔದ್ಯೋಗಿಕ ಪರಿಕಲ್ಪನೆಯೇ ಬದಲಾಗುತ್ತಿರುವ ಈ ಹೊತ್ತಿನಲ್ಲಿ ಹೊಸ ಹೊಸ ಉದ್ಯೋಗವಕಾಶಗಳನ್ನು ಸೃಷ್ಟಿಸಲು ನಾಲ್ಕನೇ ಕೈಗಾರಿಕಾ ಕ್ರಾಂತಿ ನೆರವಾಗಲಿದೆ,” ಎಂದರು.

ಈ ಮೂಲಕ ತಂತ್ರಜ್ಞಾನ ಆಧಾರಿತ ಉದ್ಯೋಗಗಳು ಭವಿಷ್ಯದಲ್ಲಿ ಸೃಷ್ಟಿಯಾಗಲಿವೆ ಎಂಬ ಭರವಸೆ ನೀಡಿದರು.