ಕೈಗಾರಿಕಾ ಪ್ರದೇಶ ರಸ್ತೆ ಬದಿ ಗಿಡ

ವೇಣುವಿನೋದ್ ಕೆ.ಎಸ್. ಮಂಗಳೂರು
ಬೈಕಂಪಾಡಿಯ ಕೈಗಾರಿಕಾ ಪ್ರದೇಶಕ್ಕೆ ಹೋಗುವ ರಸ್ತೆಯ ಇಕ್ಕೆಲಗಳಲ್ಲೂ ಗಿಡ ನೆಡಲಾಗಿದೆ. ಅಷ್ಟೇ ಅಲ್ಲ, ಅವುಗಳಿಗೆ ಸುರಕ್ಷತೆ ಒದಗಿಸುವ ಮಾದರಿಯಲ್ಲಿ ಬೇಲಿಯನ್ನೂ ಹಾಕಲಾಗಿದೆ.

ಇದು ಬೈಕಂಪಾಡಿ ಕೈಗಾರಿಕೋದ್ಯಮಿಗಳು ಹಾಗೂ ಅರಣ್ಯ ಇಲಾಖೆ ಪರಸ್ಪರ ಸಹಕಾರದಲ್ಲಿ ಕೈಗೊಳ್ಳುತ್ತಿರುವ ಹೊಸ ಕಾರ್ಯಕ್ರಮ. ಬೈಕಂಪಾಡಿ ಹೆದ್ದಾರಿಯಿಂದ ಕೈಗಾರಿಕಾ ಪ್ರದೇಶಕ್ಕೆ ತೆರಳುವ ರಸ್ತೆಯ ಇಕ್ಕೆಲಗಳಲ್ಲಿ ಟ್ರಕ್, ಲಾರಿಗಳನ್ನು ನಿಲ್ಲಿಸಲಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲೂ ಜನ ತ್ಯಾಜ್ಯ ಎಸೆಯುತ್ತಿದ್ದರು.
ಇದನ್ನು ತಪ್ಪಿಸುವುದಕ್ಕಾಗಿ ಉದ್ಯಮಿಗಳು, ಅರಣ್ಯ ಇಲಾಖೆ ಚರ್ಚಿಸಿ ಗಿಡ ನೆಡುವ ಕಾರ್ಯಕ್ರಮ ರೂಪಿಸಿವೆ. ಇಡೀ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 1000 ಗಿಡಗಳನ್ನು ನೆಡಲಾಗುತ್ತಿದೆ. ಅನಧಿಕೃತ ಪಾರ್ಕಿಂಗ್ ತಪ್ಪಿಸುವ ಉದ್ದೇಶದಿಂದ ಅಂತಹ ಭಾಗಗಳಲ್ಲಿ ತಂತಿ ಬೇಲಿ ಹಾಕುವ ಕೆಲಸವೂ ನಡೆಯುತ್ತಿದೆ.

ಹೂ ಬರುವಂತಹ ಗಿಡಗಳನ್ನು ಹೆಚ್ಚಾಗಿ ಹಾಕಲಾಗಿದೆ. ಬಸವನ ಪಾದ, ರೆಂಜೆ, ಹೊಳೆ ದಾಸವಾಳ, ಮಹಾಗನಿಯಂತಹ ದೊಡ್ಡದಾಗಿ ಬೆಳೆಯದ, ಆದರೆ ಭೂಪ್ರದೇಶದ ಸೌಂದರ್ಯ ಹೆಚ್ಚಿಸುವಂತಹ ಗಿಡಗಳಿಗೆ ಒತ್ತು ನೀಡಲಾಗಿದೆ.

ನೋ ಪಾರ್ಕಿಂಗ್ ರೆನ್: 2015ರಲ್ಲೇ ಮಂಗಳೂರು ಆಯುಕ್ತರು ಈ ಬೈಕಂಪಾಡಿ ಕೈಗಾರಿಕಾ ಪ್ರದೇಶದ ರಸ್ತೆಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿವರೆಗೂ ನೋ ಪಾರ್ಕಿಂಗ್ ರೆನ್ ಎಂದು ಘೋಷಿಸಿದ್ದಾರೆ. ಆದರೆ ಇದನ್ನು ನಿರ್ಲಕ್ಷಿಸಿ ನೂರಾರು ಲಾರಿಗಳು ಇಕ್ಕೆಲಗಳಲ್ಲೂ ನಿಲ್ಲಿಸುತ್ತಿದ್ದವು.
ಜೋಕಟ್ಟೆ ರಸ್ತೆಯಲ್ಲೂ ಇದೇ ರೀತಿ ಬೇಲಿ ಹಾಕಿ ಗಿಡ ನೆಟ್ಟು ಕಸ ಹಾಕುವುದನ್ನು ನಿಯಂತ್ರಿಸುವ ಉದ್ದೇಶವಿದೆ. ಬೇಲಿ ಹಾಕಿದ ಕೂಡಲೇ ಅರಣ್ಯ ಇಲಾಖೆಯವರೇ ಕಸ ಎಸೆಯುವುದರ ವಿರುದ್ಧ ಎಚ್ಚರಿಕೆ ಫಲಕ ಹಾಕುತ್ತಾರೆ. ಆ ಬಳಿಕ ಅಲ್ಲಿ ಹೆಚ್ಚು ನಿಗಾ ಇರಿಸಲು ನಿರ್ಧರಿಸಲಾಗಿದೆ. ಗಿಡ ನೆಡುವುದು, ರಸ್ತೆಯನ್ನು ಬಿಟ್ಟು 1 ಮೀಟರ್ ಅಂತರದಲ್ಲಿ ಬೇಲಿ ಹಾಕುವ ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಂಡಿದ್ದರೆ, ಇದಕ್ಕೆ ಬೇಕಾದ ಸಹಕಾರವನ್ನು ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ನೀಡುತ್ತಿದೆ. ಬೇಲಿಗೆ ಬೇಕಾದ ಮುಳ್ಳು ತಂತಿಯನ್ನು ಒದಗಿಸಿಕೊಟ್ಟಿದೆ.

ನಮ್ಮ ಕೈಗಾರಿಕಾ ಪ್ರದೇಶದ ರಸ್ತೆ ಬದಿ ನಿರಂತರವಾಗಿ ಕಟ್ಟಡ ತ್ಯಾಜ್ಯ ಎಸೆಯಲಾಗುತ್ತಿತ್ತು, ಬೇಕಾಬಿಟ್ಟಿ ಪಾರ್ಕಿಂಗ್ ಮಾಡಲಾಗುತ್ತಿತ್ತು. ಅದನ್ನು ತಡೆಗಟ್ಟಲು, ಗಿಡ ನೆಟ್ಟು, ಅದರ ರಕ್ಷಣೆಗೆ ಬೇಲಿ ಹಾಕಿದ್ದೇವೆ. ಇನ್ನು ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.
-ಗೌರವ್ ಹೆಗ್ಡೆ, ಅಧ್ಯಕ್ಷ, ಕೆನರಾ ಸಣ್ಣ ಕೈಗಾರಿಕಾ ಸಂಘ

ಕಳೆದ ಬಾರಿ ಅದೇ ಜಾಗದಲ್ಲಿ ನೆಟ್ಟ ಗಿಡವನ್ನು ಹಾಳು ಮಾಡಿ ಹಾಕಿದ್ದರು, ಅದರ ಮೇಲೆಯೇ ಸಿಮೆಂಟ್ ಮಿಕ್ಸ್ ವೇಸ್ಟ್ ಹಾಕಿ ಗಿಡಗಳೆಲ್ಲ ಸತ್ತಿದ್ದವು, ಈ ಬಾರಿ ಕೆಎಸ್‌ಐಎ ಸಂಘ ಸಹಯೋಗದಲ್ಲಿ ಬೇಲಿ ಹಾಕಿದ್ದೇವೆ, ಸಿಸಿಟಿವಿ ಕ್ಯಾಮರಾ ಕೂಡ ಅಳವಡಿಸಿ ಗಿಡ ಕಾಪಾಡುವ ಯೋಜನೆ ಇದೆ.
-ಶ್ರೀಧರ್ ವಲಯ ಅರಣ್ಯಾಧಿಕಾರಿ, ಮಂಗಳೂರು

Leave a Reply

Your email address will not be published. Required fields are marked *