ಹುದ್ದೆಯಿಂದ ಕೆಳಗಿಳಿದ ಪೆಪ್ಸಿಕೋ ಕಂಪನಿ ಸಿಇಒ ಇಂದ್ರಾ ನೂಯಿ

ನವದೆಹಲಿ: ದೀರ್ಘಕಾಲ ಸೇವೆ ಸಲ್ಲಿಸಿದ ನ್ಯೂಯಾರ್ಕ್​ನ ಪೆಪ್ಸಿಕೋ ಕಂಪನಿ ಸಿಇಒ ಇಂದ್ರಾ ನೂಯಿ ಅವರು ತಮ್ಮ ಸ್ಥಾನದಿಂದ ನಿವೃತ್ತರಾಗಲಿದ್ದಾರೆ ಎಂದು ಕಂಪನಿಯೇ ತಿಳಿಸಿದೆ.

ನೂಯಿ ಭಾರತ ಮೂಲದವರು. 12 ವರ್ಷಗಳಿಂದ ಪೆಪ್ಸಿಕೋ ಕಂಪನಿಯ ಸಿಇಒ ಆಗಿ ಚುಕ್ಕಾಣಿ ಹಿಡಿದಿದ್ದರು. ಈಗ ಅವರು ಆ ಸ್ಥಾನದಿಂದ ಕೆಳಗಿಳಿಯಲಿದ್ದು, ಪೆಪ್ಸಿಕೋ ಅಧ್ಯಕ್ಷ ರಾಮನ್ ಲಗುವರ್ಟಾ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಕಂಪನಿಯ ನಿರ್ದೇಶಕರು ನೂಯಿ ಅವರ ಸ್ಥಾನಕ್ಕೆ 54 ವರ್ಷದ ರಾಮನ್​ ಲಗುವರ್ಟಾ ಅವರನ್ನು ಆಯ್ಕೆ ಮಾಡಿದ್ದಾರೆ. ನೂಯಿ ಅವರು ಅಕ್ಟೋಬರ್​ 3ರಂದು ನಿವೃತ್ತರಾಗಲಿದ್ದಾರೆ. 24 ವರ್ಷಗಳಿಂದ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೂಯಿ 12 ವರ್ಷಗಳಿಂದ ಸಿಇಒ ಆಗಿದ್ದರು. 2019ರವರೆಗೂ ಚೇರ್ಮನ್​ ಆಗಿ ಮುಂದುವರಿಯಲಿದ್ದಾರೆ. ಲಗುರ್ಟಾ ಅವರು ಅಕ್ಟೋಬರ್​ವರೆಗೆ ಕಂಪನಿ ಆಡಳಿತ ಮಂಡಳಿ ನಿರ್ದೇಶಕರಾಗಿ ಇರಲಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಇಂದ್ರಾ ನೂಯಿ, ಪೆಪ್ಸಿಕೋ ಕಂಪನಿಯನ್ನು ಮುನ್ನಡೆಸಿದ್ದು ನನಗೆ ಒಂದು ಗೌರವನ್ನು ತಂದುಕೊಟ್ಟಿದೆ. 12 ವರ್ಷದಲ್ಲಿ ನಾವು ಷೇರುದಾರರು, ಪಾಲುದಾರರ ಹಿತಾಸಕ್ತಿಗೆ ಬದ್ಧವಾಗಿ ಕೆಲಸ ಮಾಡಿದ್ದೇವೆ. ಈ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.