ದಿಲೇರ್ ಡೆಲ್ಲಿ ತಂಡಕ್ಕೆ ಸತತ 5ನೇ ಜಯ: ಇಂಡೋ-ಇಂಟರ್​ನ್ಯಾಷನಲ್ ಕಬಡ್ಡಿ

ಪುಣೆ: ಅನುಭವಿ ರೈಡರ್ ಸುನೀಲ್ ಜೈಪಾಲ್ (10 ಅಂಕ) ತೋರಿದ ಭರ್ಜರಿ ನಿರ್ವಹಣೆ ನೆರವಿನಿಂದ ದಿಲೇರ್ ಡೆಲ್ಲಿ ತಂಡ ಮೊದಲ ಆವೃತ್ತಿಯ ಇಂಡೋ ಇಂಟರ್​ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್​ನಲ್ಲಿ (ಐಐಪಿಕೆಎಲ್) ಸತತ 5ನೇ ಜಯ ದಾಖಲಿಸಿತು.

ಬಾಲೆವಾಡಿಯ ಒಳಾಂಗಣ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ 45-36 ಅಂಕಗಳಿಂದ ಮುಂಬೈ ಚೇ ರಾಜೇ ತಂಡವನ್ನು ಸೋಲಿಸಿತು. ಇದರೊಂದಿಗೆ ಡೆಲ್ಲಿ ತಂಡ ಬಿ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ಮೊದಲ ಕ್ವಾರ್ಟರ್​ನಲ್ಲೇ ಸುನೀಲ್ ಜೈಪಾಲ್ ತೋರಿದ ಆಕ್ರಮಣಕಾರಿ ಪ್ರದರ್ಶನದಿಂದಾಗಿ ಡೆಲ್ಲಿ ತಂಡ ಆರಂಭಿಕ ಮೇಲುಗೈ ಸಾಧಿಸಿತು. ಇದರ ಫಲವಾಗಿ ಡೆಲ್ಲಿ ತಂಡ ಮೊದಲಾರ್ಧದಲ್ಲೇ 28 -12 ರಿಂದ ಮುನ್ನಡೆ ಸಾಧಿಸಿತು. ಮತ್ತೊಂದೆಡೆ, ಹಿನ್ನಡೆ ನಡುವೆಯೂ ಮುಂಬೈ ಆಟಗಾರರು ತಿರುಗೇಟು ನೀಡಿದರು. 3ನೇ ಹಾಗೂ ನಾಲ್ಕನೇ ಕ್ವಾರ್ಟರ್​ನಲ್ಲಿ ಮುಂಬೈ ಬಿರುಸಿನ ಪ್ರದರ್ಶನ ತೋರಿದರೂ ಪ್ರಯೋಜನವಾಗಲಿಲ್ಲ.

2 ದಿನ ವಿಶ್ರಾಂತಿ

ಐಐಪಿಕೆಎಲ್​ಗೆ ಎರಡು ದಿನಗಳ ವಿಶ್ರಾಂತಿ ಇರಲಿದ್ದು. ಮೇ 24 ರಿಂದ ಮೈಸೂರಿನಲ್ಲಿ ಮುಂದಿನ ಚರಣ ನಡೆಯಲಿದೆ.

ಬೆಂಗಳೂರಿಗೆ 3ನೇ ಸೋಲು

ಅಂತಿಮ ಅವಧಿಯಲ್ಲಿ ತಿರುಗೇಟು ಅನುಭವಿಸಿದ ಬೆಂಗಳೂರು ರೈನೋಸ್ ತಂಡ ಸೋಮವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 33-40 ಅಂಕಗಳಿಂದ ಪುಣೆ ಪ್ರೖೆಡ್ ಎದುರು ಸೋಲು ಕಂಡಿತು. ಇದರೊಂದಿಗೆ ಲೀಗ್​ನಲ್ಲಿ 3ನೇ ಸೋಲು ಕಂಡಿತು. ಪುಣೆ ವಿರುದ್ಧವೇ ಬೆಂಗಳೂರು ತಂಡಕ್ಕೆ ಇದು 2ನೇ ಸೋಲಾಗಿದೆ. ಬೆಂಗಳೂರು ತಂಡದ ಪರ ವೈಭವ್ ಕದಂ (6ಅಂಕ) ಆಲ್ರೌಂಡ್ ನಿರ್ವಹಣೆ ತೋರಿದರೂ ಪ್ರಯೋಜನವಾಗಲಿಲ್ಲ. ಸತತ 5ನೇ ಜಯ ದಾಖಲಿಸಿದ ಪುಣೆ ತಂಡ ಎ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ಇದರೊಂದಿಗೆ ಪುಣೆ ತಂಡ ತವರು ಚರಣದಲ್ಲಿ ಅಜೇಯ ಸಾಧನೆ ಮಾಡಿತು.