ಇಂದಿರಾಗೆ ಮರುಜನ್ಮವಿತ್ತ ಕಾಫಿನಾಡು

ತುರ್ತು ಪರಿಸ್ಥಿತಿ ಘೋಷಿಸಿದ್ದು ಇಂದಿರಾ ಗಾಂಧಿಯವರಿಗೆ ದುಬಾರಿಯಾಗಿ ಪರಿಣಮಿಸಿ, ಪ್ರಧಾನಮಂತ್ರಿ ಸ್ಥಾನವನ್ನು ಕಸಿದುಕೊಂಡಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರಪ್ರದೇಶದ ರಾಯ್ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಂದಿರಾರನ್ನು ಎದುರಾಳಿ ರಾಜ್​ನಾರಾಯಣ್ ಮಣಿಸಿದ್ದರು. ಶತಾಯಗತಾಯ ಸಂಸತ್ ಪ್ರವೇಶಿಸಲೇಬೇಕಿದ್ದ ಅನಿವಾರ್ಯತೆಗೆ ಸಿಲುಕಿದ್ದರು ಇಂದಿರಾ. ‘ಆದರೆ ಹೇಗೆ?’ ಎಂಬ ಪ್ರಶ್ನೆ ಬೃಹದಾಕಾರವಾದಾಗ ಉತ್ತರವಾಗಿ ಕಂಡವರು ಡಿ.ಬಿ. ಚಂದ್ರೇಗೌಡರು. ತಾವು ಪ್ರತಿನಿಧಿಸುತ್ತಿದ್ದ ಚಿಕ್ಕಮಗಳೂರು ಸಂಸದ ಸ್ಥಾನಕ್ಕೆ ಗೌಡರು ರಾಜೀನಾಮೆ ನೀಡಿ, ಉಪಚುನಾವಣೆಗೆ ಅನುವುಮಾಡಿಕೊಟ್ಟರು. ಇಂದಿರಾ ಅಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ವಿಷಯ ತಿಳಿದಾಕ್ಷಣ, ಚಿಕ್ಕಮಗಳೂರಿನೆಡೆಗೆ ಒಂದಿಡೀ ದೇಶದ ಚಿತ್ತ ತಿರುಗಿತು. ಜನತಾ ಪರಿವಾರದಿಂದ ಅವರೆದುರು ಸ್ಪರ್ಧಿಸಿದ್ದು ವೀರೇಂದ್ರ ಪಾಟೀಲರು. ಆದರೆ ಜನ ಮಣೆಹಾಕಿದ್ದು ಇಂದಿರಾರಿಗೆ. ಗೆದ್ದು ಸಂಸತ್ ಪ್ರವೇಶಿಸಿದ ಅವರು, ತಮಗೆ ಮರುಹುಟ್ಟು ನೀಡಿದ ಕನ್ನಡನಾಡಿಗೆ ಕೃತಜ್ಞತೆ ಸಲ್ಲಿಸಲೋ ಎಂಬಂತೆ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು. ಮುಂದಿನದ್ದೆಲ್ಲ ಮತ್ತೊಂದು ಇತಿಹಾಸ…