ಕೆಸರುಮಯ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ನಗರ ಹೊರವಲಯದ ಇಂದಿರಾಗಾಂಧಿ ಬಡಾವಣೆಯ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿರುವುದನ್ನು ಖಂಡಿಸಿ ಮಂಗಳವಾರ ಬಡಾವಣೆ ನಿವಾಸಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಯುಜಿಡಿ ಕಾಮಗಾರಿಗಾಗಿ ಇಡೀ ಬಡಾವಣೆಯ ಎಲ್ಲ ರಸ್ತೆಗಳನ್ನೂ ಅಗೆದು ಸಂಪೂರ್ಣ ಹಾಳು ಮಾಡಲಾಗಿದೆ. ಮಳೆ ಆರಂಭದಿಂದಲೂ ರಸ್ತೆಗಳು ಕೆಸರುಮಯವಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ನಂತರ ನಗರಸಭೆಗೆ ತೆರಳಲು ಮುಂದಾದರು. ಈ ಸಂದರ್ಭದಲ್ಲಿ ವಾರ್ಡ್ ಸದಸ್ಯೆ ಸುರೇಖಾ ಸಂಪತ್ ರಾಜ್ ನಗರಸಭೆಗೆ ಆಗಮಿಸಿದರು.

ರಾಜ್ಯ ಏಕತಾ ವೇದಿಕೆ ಅಧ್ಯಕ್ಷ ಅಫ್ಜಲ್ ಪಾಷ, ಪ್ರಧಾನ ಕಾರ್ಯದರ್ಶಿ ದೀಪಕ್ ಇತರರ ಜತೆಗೂಡಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅಧ್ಯಕ್ಷೆ ಶಿಲ್ಪಾ ರಾಜಶೇಖರ್, ಉಪಾಧ್ಯಕ್ಷ ಸುಧೀರ್, ಸದಸ್ಯರಾದ ಟಿ. ರಾಜಶೇಖರ್, ಮುತ್ತಯ್ಯ, ಪುಷ್ಪರಾಜ್ ಇತರರು ಸಮಾಧಾನಪಡಿಸಲು ಮುಂದಾದಾಗ ಮಾತಿನ ಚಕಮಕಿ ನಡೆಯಿತು.

ರಸ್ತೆ ದುರಸ್ತಿಗೆ ಅಡಚಣೆಯಾಗಿರುವ ಪರಿಸ್ಥಿತಿ ಬಗ್ಗೆ ಪ್ರತಿಭಟನಾಕಾರರಿಗೆ ತಿಳಿ ಹೇಳಿದರೂ ಮಣಿಯದಿದ್ದಾಗ, ಜಿಲ್ಲಾಧಿಕಾರಿ ಬಳಿ ತೆರಳಿ ಸಮಸ್ಯೆ ಬಗೆಹರಿಸಲು ಮುಂದಾಗೋಣ ಎಂದು ಹೇಳಿದಾಗ, ನಗರಸಭೆಯ ಸದಸ್ಯರು ಪ್ರತಿಭಟನಾಕಾರರನ್ನು ಹಿಂಬಾಲಿಸಿದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ಜೆಲ್ಲಿ ಹಾಕುವುದು ಬೇಡ ಎಂದು ನಾವು ಹೇಳಿಲ್ಲ. ಹತ್ತು ಜೆಲ್ಲಿ ಕೆಲಸ ಮಾಡುವ ಬದಲು ಮೂರು ಡಾಂಬರು ರಸ್ತೆ ಮಾಡಿ ಎಂದು ಹೇಳಿದ್ದೇನೆ. ಐದು, ಹತ್ತು ಲಕ್ಷ ರೂ. ಹಾಕಿ ಹತ್ತು ರಸ್ತೆ ಮಾಡಿ ಗುತ್ತಿಗೆದಾರರಿಗೆ ಅನುಕೂಲ ಮಾಡುವ ಬದಲು ಸಂಪೂರ್ಣ ರಸ್ತೆ ದುರಸ್ತಿಪಡಿಸಿ ಎಂದು ಹೇಳಿರುವುದಾಗಿ ತಿಳಿಸಿದರು.