ದೇಶದ ಮಹಾನ್ ನಾಯಕರು

ಜಮಖಂಡಿ: ದೇಶದ ಪ್ರಥಮ ಮಹಿಳೆ ಇಂದಿರಾ ಗಾಂಧಿ ಪ್ರಧಾನಿಯಾಗಿ ದೀನದಲಿತರ, ಬಡವರ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 21 ಅಂಶಗಳ ಯೋಜನೆಗಳನ್ನು ಜಾರಿ ಮಾಡಿ ದೇಶದ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ನಗರದ ಕೆಪಿಸಿಸಿ ಕ್ಯಾಂಪ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 34 ಪುಣ್ಯಸ್ಮರಣೋತ್ಸವ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 143ನೇ ಜಯಂತ್ಯುತ್ಸವ ಹಿನ್ನೆಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿ ಮನೆತನ ಪ್ರಮುಖ ಪಾತ್ರ ವಹಿಸಿದೆ. ಇಂದಿರಾ ಗಾಂಧಿ ಅವರು ಗರಿಬಿ ಹಠಾವೊ ಯೋಜನೆಯಿಂದ ದೇಶದಲ್ಲಿ ಮನೆ ಮಾತಾಗಿ ಬಡವರ ಪಾಲಿನ ತಾಯಿಯಾಗಿದ್ದರು ಎಂದರು.

ದೇಶದಲ್ಲಿ ಆಹಾರದ ಕೊರತೆ ಉಂಟಾದಾಗ ಪಂಡಿತ್ ಜವಾಹರ್ ಲಾಲ್ ನೆಹರು ವಿದೇಶದಿಂದ ಆಹಾರ ಪದಾರ್ಥ ಆಮದು ಮಾಡಿಕೊಂಡು ಜನರ ಹಸಿವು ನೀಗಿಸುವುದರ ಜತೆಗೆ ಹಸಿರು ಕ್ರಾಂತಿ ಮಾಡಿದ ಕೀರ್ತಿ ಕಾಂಗ್ರೆಸ್ ನಾಯಕರಿಗೆ ಸಲ್ಲುತ್ತದೆ ಎಂದರು.ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮಾತನಾಡಿ, ವಲ್ಲಭಭಾಯಿ ಪಟೇಲ್ ಅವರು ಎಲ್ಲ ರಾಜರ ಸಂಸ್ಥಾನಗಳನ್ನು ಒಗ್ಗೂಡಿಸಿ ಭವ್ಯ ಭಾರತಕ್ಕೆ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕಂ ಠಾಕೂರ್, ಎಸ್.ಟಿ. ಸೋಮಶೇಖರ, ಆರ್.ಬಿ. ತಿಮ್ಮಾಪುರ, ಎಂ.ಬಿ. ಸೌದಾಗರ, ಅಜಯ ಸಿಂಗ್, ಜಿ.ಎಸ್. ಪಾಟೀಲ, ಅನೀಲಕುಮಾರ ಪಾಟೀಲ, ಶ್ರೀನಿವಾಸ ಮಾನೆ, ಉಮೇಶ ಜಾಧವ, ಉಮಾಶ್ರೀ, ರಹೀಂ ಖಾನ್, ಸಿ.ಎಸ್. ಶಿವಳ್ಳಿ, ಅಜಯ್ ಸಿಂಗ್, ಬಿ.ಆರ್. ಯಾವಗಲ್, ಅಭಯಚಂದ್ರ ಜೈನ್, ಪಾರಸಮಲ್ ಜೈನ್, ನಜೀರ ಕಂಗನೊಳ್ಳಿ ಇತರರಿದ್ದರು.