ಕಾಂಗ್ರೆಸ್ ಮುಖಂಡರ ಬಂಧನ, ಬಿಡುಗಡೆ

ಕೆ.ಆರ್.ನಗರ: ಪಟ್ಟಣದ ಪುರಸಭೆ ಬಯಲು ರಂಗಮಂದಿರದ ಆವರಣದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಅನ್ನು ಶಿಷ್ಟಾಚಾರ ಪಾಲಿಸದೆ ಉದ್ಘಾಟಿಸಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ಪುರಸಭೆ ಕಚೇರಿ ಎದುರು ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯರು ಮತ್ತು ಮುಖಂಡರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.
ಬೆಳಗ್ಗೆ ಪೊಲೀಸ್ ಠಾಣೆಗೆ ತೆರಳಿದ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು ಹಾಗೂ ಮುಖಂಡರು, ಜನಪ್ರತಿನಿಧಿಗಳನ್ನು ಆಹ್ವಾನಿಸದೆ ಹಾಗೂ ಶಿಷ್ಟಾಚಾರ ಪಾಲಿಸದೆ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದನ್ನು ವಿರೋಧಿಸಿ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲು ಹಾಗೂ ಉದ್ಘಾಟನಾ ಸ್ಥಳಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ಕೋರಿದರು. ಆದರೆ ಭದ್ರತೆ ದೃಷ್ಟಿಯಿಂದ ಸಿಪಿಐ ಪಿ.ಕೆ.ರಾಜು ಅನುಮತಿ ನಿರಾಕರಿಸಿದರು.
ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿದ ಮುಖಂಡರು, ಸಂಜೆ 5 ಗಂಟೆಗೆ ನಡೆಯಲಿರುವ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮ ಮುಂದೂಡಬೇಕು. ಮತ್ತೊಂದು ದಿನಾಂಕ ನಿಗದಿಪಡಿಸಿ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಉದ್ಘಾಟಿಸಬೇಕು ಎಂದು ತಹಸೀಲ್ದಾರ್ ಎಂ.ಮಂಜುಳಾ ಅವರಿಗೆ ಮನವಿ ಸಲ್ಲಿಸಿದರು.
ಆ ಕೂಡಲೇ ಕಚೇರಿಗೆ ಪುರಸಭೆ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿ ಮಾಹಿತಿ ಪಡೆದ ತಹಸೀಲ್ದಾರ್ ಎಂ.ಮಂಜುಳಾ, ಕಾರ್ಯಕ್ರಮ ರದ್ದುಗೊಳಿಸಲು ಸಾಧ್ಯವಿಲ್ಲ. ಪ್ರತಿಭಟನೆ ನಡೆಸದಂತೆ ಮನವಿ ಮಾಡಿದರು.
ಪ್ರತಿಭಟನೆ: ಇದರಿಂದ ಮತ್ತಷ್ಟು ಸಿಡಿಮಿಡಿಗೊಂಡ ಕಾಂಗ್ರೆಸ್ ಮುಖಂಡರು ಪುರಸಭೆ ಕಚೇರಿ ಎದುರು ಪ್ರತಿಭಟನೆ ಆರಂಭಿಸಿದರು. ಚುನಾಯಿತ ಜನಪ್ರತಿನಿಧಿಗಳನ್ನು ಕಡೆಗಣಿಸಿ ಸಚಿವ ಸಾ.ರಾ.ಮಹೇಶ್ ಅವರ ಆಜ್ಞೆಯಂತೆ ನಡೆಯುತ್ತಿರುವ ಅಧಿಕಾರಿಗಳ ವರ್ತನೆ ಖಂಡನೀಯ. ಆಹ್ವಾನ ಪತ್ರಿಕೆ ಮುದ್ರಿಸದೆ ಹಾಗೂ ಸಂಸದರು ಮತ್ತು ಪುರಸಭೆ ಚುನಾಯಿತ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಅಪಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಧನ-ಬಿಡುಗಡೆ: ಸಂಜೆ ಕ್ಯಾಂಟೀನ್ ಉದ್ಘಾಟನೆಗೆ ಸಚಿವರು ಆಗಮಿಸುತ್ತಿರುವ ವಿಷಯ ಅರಿತ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಪುರಸಭಾ ಸದಸ್ಯರು ಮತ್ತು ಮುಖಂಡರನ್ನು ಬಂಧಿಸಿ ಕರೆದೊಯ್ದರು. ಅತ್ತ ಸಚಿವ ಸಾ.ರಾ.ಮಹೇಶ್ ಕ್ಯಾಂಟೀನ್ ಉದ್ಘಾಟಿಸಿ ತೆರಳಿದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರಾದ ಸುಬ್ರಮಣ್ಯ, ಕೋಳಿಪ್ರಕಾಶ್, ನಟರಾಜು, ಶಂಕರ್, ಶಿವನಾಯಕ, ಶಂಕರ್, ಸೈಯದ್ ಸಿದ್ದಿಖ್, ಜಾವೀದ್‌ಪಾಷ, ಮಾಜಿ ಅಧ್ಯಕ್ಷ ಕಾಂತರಾಜ್, ಮಾಜಿ ಸದಸ್ಯ ಕೆ.ಎಲ್.ಕುಮಾರ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಾ.ಮಾ.ಯೋಗೀಶ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರ‌್ನಹಳ್ಳಿ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಆಟೋಕುಮಾರ್, ಕೆ.ಎನ್.ಪ್ರಸನ್ನಕುಮಾರ್, ಕಾಮಧೇನು ನಾಗೇಶ್, ಈರಯ್ಯ, ರಮೇಶ್, ಹೇಮಂತ್‌ಕುಮಾರ್, ಆನಂದ ಸೇರಿ ಇತರ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.

ಪ್ರತಿಭಟನೆ ನಡುವೆಯೂ ಕ್ಯಾಂಟೀನ್ ಉದ್ಘಾಟನೆ
ಕಾಂಗ್ರೆಸ್ ಪುರಸಭಾ ಸದಸ್ಯರ ಪ್ರತಿಭಟನೆ ಹಾಗೂ ವಿರೋಧದ ನಡುವೆಯೂ ಪೊಲೀಸ್ ಬಂದೋಬಸ್ತ್‌ನಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಬುಧವಾರ ಸಂಜೆ ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಉದ್ಘಾಟಿಸಿದರು.
ಪಟ್ಟಣದ ಪುರಸಭಾ ಬಯಲು ರಂಗಮಂದಿರದ ಆವರಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕ್ಯಾಂಟೀನ್ ಉದ್ಘಾಟಿಸಿದ ಸಚಿವರು, ಕ್ಯಾಂಟೀನ್‌ನಲ್ಲಿ ತಯಾರಿಸಿದ್ದ ಉಪ್ಪಿಟ್ಟು ಮತ್ತು ಕೇಸರಿ ಬಾತ್ ಅನ್ನು ಜೆಡಿಎಸ್ ಪಕ್ಷದ ಮುಖಂಡರಿಗೆ ವಿತರಿಸಿ ತಾವೂ ಸವಿದರು.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕ್ಯಾಂಟೀನ್ ವಿಳಂಬವಾಗಿ ಉದ್ಘಾಟನೆಯಾಗುತ್ತಿದೆ. ಈ ಮೊದಲೇ ಉದ್ಘಾಟನೆ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಆಹ್ವಾನ ಪತ್ರಿಕೆ ಮುದ್ರಿಸದೆ ಮತ್ತು ಶಿಲಾನ್ಯಾಸ ಮಾಡಿಲ್ಲ. ಈ ಕಾರ್ಯಕ್ರಮದ ವ್ಯಾಪ್ತಿಗೆ ಒಳಪಡುವ ಎಲ್ಲರನ್ನೂ ದೂರವಾಣಿ ಮೂಲಕ ಪುರಸಭೆಯ ಮುಖ್ಯಾಧಿಕಾರಿಗಳು ಉದ್ಘಾಟನೆ ಆಹ್ವಾನಿಸಿದ್ದು, ಶಿಷ್ಟಾಚಾರ ಪಾಲಿಸಿದ್ದಾರೆ. ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಸಚಿವ ಸಾ.ರಾ.ಮಹೇಶ್ ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಸಿದ್ದಪ್ಪ, ಎಪಿಎಂಸಿ ಅಧ್ಯಕ್ಷ ಕುಪ್ಪಳ್ಳಿ ಸೋಮಶೇಖರ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಪುರಸಭಾ ಸದಸ್ಯರಾದ ಕೆ.ಎಲ್.ಜಗದೀಶ್, ಪ್ರಭುಶಂಕರ್, ಉಮೇಶ್, ಪುರಸಭಾ ಮುಖ್ಯಾಧಿಕಾರಿ ಕೆ.ಶಿವಣ್ಣ, ಅಭಿಯಂತರ ಪುಟ್ಟಸ್ವಾಮಿ, ಪರಿಸರ ಇಂಜಿನಿಯರ್ ರವಿಕುಮಾರ್, ಆರೋಗ್ಯಾಧಿಕಾರಿಗಳಾದ ಡಾ.ರಮೇಶ್, ಲೀಲಾ, ಸಿಪಿಐ ಪಿ.ಕೆ.ರಾಜು ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *