ಇಂದಿರಾ ಕ್ಯಾಂಟೀನ್​ ಆಹಾರ ಸಿಬ್ಬಂದಿಯ ಪಾಲಾಗ್ತಿದೆಯಾ?

ಬೆಂಗಳೂರು: ಬಡವರಿಗೆ ಕಡಿಮೆ ದರದಲ್ಲಿ ಆಹಾರ ನೀಡಲು ರಾಜ್ಯ ಸರ್ಕಾರ ಪ್ರಾರಂಭಿಸಿದ ಇಂದಿರಾ ಕ್ಯಾಂಟೀನ್​ ನಿಜವಾಗಿಯೂ ಆ ಕೆಲಸ ಮಾಡುತ್ತಿದೆಯಾ? ಅಥವಾ ಕೇವಲ ಅದು ಕ್ಯಾಂಟೀನ್​ ಸಿಬ್ಬಂದಿಯ ಹೊಟ್ಟೆ ತುಂಬಿಸುತ್ತಿದೆಯಾ? ಯಾಕೆ ಈ ರೀತಿಯ ಪ್ರಶ್ನೆಗಳು ಅಂತ ಯೋಚಿಸುತ್ತಿದ್ದಿರಾ?

ದಿಗ್ವಿಜಯ ನ್ಯೂಸ್ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಕ್ಯಾಂಟೀನ್​ ಸಿಬ್ಬಂದಿ ಗ್ರಾಹಕರಿಗೆ ವಿತರಿಸಬೇಕಿರುವ ಆಹಾರವನ್ನು ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ಪುರಾವೆ ದೊರೆತಿದೆ. ಕ್ಯಾಂಟೀನ್​ನ ಸೆಕ್ಯೂರಿಟಿ ಗಾರ್ಡ್ ಒಬ್ಬರು ದಿಗ್ವಿಜಯ ನ್ಯೂಸ್ ಜತೆ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಪಾಲಿಕೆಯ 198 ವಾರ್ಡ್​ಗಳ ಪೈಕಿ 151 ಕಡೆಗಳಲ್ಲಿ ಸದ್ಯ ಕಾರ್ಯನಿರ್ವಹಸುತ್ತಿರುವ ಕ್ಯಾಂಟೀನ್​​ಗಳಲ್ಲಿ ಪ್ರತಿ ದಿನ ಒಂದೂವರೆ ಸಾವಿರ ಜನರು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಅನ್ನುವ ಮಾತು ಪಾಲಿಕೆಯದ್ದು. ಆದರೆ, ವಾಸ್ತವಾನೇ ಬೇರೆ…

ಪ್ರತಿ ತಿಂಡಿ,ಊಟದ ಸಮಯದಲ್ಲೂ ಕನಿಷ್ಠ 10 ರಿಂದ 20 ಮಂದಿ ಅಡುಗೆ ಮನೆಗೆ ಬಂದು ಕ್ಯಾನ್​ಗಳಲ್ಲಿ ಊಟಗಳನ್ನ ತುಂಬಿಸಿಕೊಂಡು ಹೋಗುತ್ತಾರಂತೆ. ಪ್ರತಿ ಕ್ಯಾಂಟೀನ್​ನಲ್ಲಿ ಉಸ್ತುವಾರಿಗೆ ಎಂದು ಮ್ಯಾನೇಜರ್ ಇದ್ದೂ, ಅವರ ಕುಮ್ಮಕ್ಕಿನಿಂದಲೇ ಈ ರೀತಿ ಆಹಾರದ ಪಾರ್ಸಲ್ ಅನ್ಯರ ಪಾಲಾಗುತ್ತಿದೆಯಂತೆ.
ಇದನ್ನ ಯಾರಾದರೂ ಪ್ರಶ್ನೆ ಮಾಡಿದರೆ ಸ್ಥಳೀಯ ಕಾರ್ಪೋರೇಟರ್​ಗಳ ಹೆಸರು ಹೇಳುತ್ತಾರೆ ಅನ್ನುವ ಮಾತುಗಳೂ ಕೇಳಿ ಬರುತ್ತಿವೆ.

ಇನ್ನು, ಈ ಬಗ್ಗೆ ವಿಪಕ್ಷದವರನ್ನು ಕೇಳಿದರೆ, ಇದರಲ್ಲಿ ಪಾಲಿಕೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸುತ್ತಾರೆ. ಕ್ಯಾಂಟೀನ್​ಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಿಕೊಂಡರೆ ಇದಕ್ಕೆಲ್ಲ ಕಡಿವಾಣ ಬೀಳುತ್ತದೆ ಎಂದು ಹೇಳುತ್ತಾರೆ.

ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್​ ಆರಂಭದ ಕೆಲ ದಿನಗಳಲ್ಲಿಯೇ ನಿಗದಿತ ತೂಕಕ್ಕಿಂತ ಕಡಿಮೆ ಪ್ರಮಾಣದಲ್ಲಿ ಆಹಾರ ವಿತರಿಸಲಾಗುತ್ತದೆ ಎಂಬ ಆರೋಪ ಕೇಳಿಬಂದಿತ್ತು.
(ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *