Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಕ್ಯಾಂಟೀನ್ ಹಗರಣ ಸದನ ರಣಾಂಗಣ

Thursday, 12.07.2018, 3:04 AM       No Comments

ಬೆಂಗಳೂರು: ಕಾಂಗ್ರೆಸ್​ನ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟಿನ್​ನಲ್ಲಿ 150 ಕೋಟಿ ರೂ. ಹಗರಣ ನಡೆದಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಬಜೆಟ್ ಮೇಲಿನ ಚರ್ಚೆ ವೇಳೆ ಬಿಜೆಪಿಯ ರಾಮದಾಸ್ ಮಾತನಾಡಿ, ಇಂದಿರಾ ಕ್ಯಾಂಟಿನ್​ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು 50 ಕೋಟಿ ರೂ. ಕಿಕ್​ಬ್ಯಾಕ್ ಆಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಯೂ ಇದೆ ಎಂದರು. ಇಂದಿರಾ ಕ್ಯಾಂಟಿನ್​ಗಳ ಸಿಸಿಕ್ಯಾಮರಾ ರೆಕಾರ್ಡ್​ಗಳ ಸಿಡಿಯನ್ನೂ ಪ್ರದರ್ಶಿಸಿದ ಅವರು, ಕೆಲ ದಾಖಲೆ ಪತ್ರವನ್ನೂ ತೋರಿಸಿದರು.

ಈ ಮಧ್ಯೆ ಅವರು ಕಿಕ್​ಬ್ಯಾಕ್ ನೀಡಿದ ಸಂಸ್ಥೆ ಹೆಸರು ಹೇಳುತ್ತಿದ್ದಂತೆ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಪ್ರಿಯಾಂಕ ಖರ್ಗೆ ಆಕ್ಷೇಪವೆತ್ತಿ, ಈ ರೀತಿ ಆರೋಪ ಸರಿಯಲ್ಲ ಎಂದರು. ನಿಮಗೆ ಕೇಶವ ಕೃಪ ಗರ್ಭ ಗುಡಿ, ನಮಗೆ ಎಐಸಿಸಿಯೇ ಗರ್ಭ ಗುಡಿ. ಈ ರೀತಿ ಆರೋಪ ಸರಿಯಲ್ಲ ಎಂದು ಡಿಕೆಶಿ ಹೇಳಿದರು. ನಮ್ಮ ಬಳಿ ಅವ್ಯವಹಾರದ ಸೂಕ್ತ ದಾಖಲೆ ಇದ್ದು, ಅದರ ಆಧಾರದ ಮೇಲೆ ಮಾತನಾಡುತ್ತಿದ್ದೇನೆ ಎಂಬ ರಾಮದಾಸ್ ಸಮಜಾಯಿಷಿಯನ್ನು ಕಾಂಗ್ರೆಸ್ ಸದಸ್ಯರು ಒಪ್ಪಲಿಲ್ಲ. ನಿಯಮಾವಳಿ ಪ್ರಕಾರ ವ್ಯಕ್ತಿ ಬಗ್ಗೆ ಆರೋಪ ಮಾಡಲು ಸದನದಲ್ಲಿ ಅವಕಾಶವಿಲ್ಲ. ಮೊದಲು ನೋಟಿಸ್ ನೀಡಿ, ಸೂಕ್ತ ದಾಖಲೆಯನ್ನು ವಿಧಾನಸಭೆ ಕಾರ್ಯದರ್ಶಿಗೆ ಕೊಟ್ಟು, ನಂತರ ರ್ಚಚಿಸಿ ಸದನದ ಗೌರವ ಉಳಿಸಿ ಎಂದರು. ರಾಮದಾಸ್ ಬೆಂಬಲಕ್ಕೆ ನಿಂತ ಅರವಿಂದ ಲಿಂಬಾವಳಿ ಮತ್ತು ಪ್ರತಿಪಕ್ಷ ಮುಖ್ಯ ಸಚೇತಕ ಸುನೀಲ್​ಕುಮಾರ್, ದಾಖಲೆ ಕೈಯಲ್ಲಿರುವಾಗ ಮಾತನಾಡಲು ಅವಕಾಶ ಕೊಡದೇ ಇರುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.

ಬಳಿಕ ಮಾತಿಗೆ ಮಾತು ಬೆಳೆದು ಕೋಲಾಹಲ ಉಂಟಾಯಿತು. ಸ್ಪೀಕರ್ ಸ್ಥಾನದಲ್ಲಿದ್ದ ಕೃಷ್ಣಾರೆಡ್ಡಿ, ಮೊದಲು ದಾಖಲೆ ಸಲ್ಲಿಸಿ ನಂತರ ಮಾತಾಡಿ ಎಂದು ಸೂಚಿಸಿದಾಗ ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಮುಂದೆ ಆಗಮಿಸಿ ಧರಣಿ ನಡೆಸಿದರು. ಇದಕ್ಕೂ ಮುನ್ನ ರಾಮದಾಸ್ ಕೈ ಮುಗಿದು, ನನಗೆ ಮಾತನಾಡಲು ಅವಕಾಶ ಕೊಡಿ. ಇದು ಬಜೆಟ್ ವಿಚಾರ. ಬಜೆಟ್​ನಲ್ಲಿ ಮೀಸಲಿಟ್ಟ ಹಣ. ಈ ಹಣಕ್ಕೆ ನಾವೆಲ್ಲ ಕಸ್ಟೋಡಿಯನ್​ಗಳು. ಅದು ದುರುಪಯೋಗವಾಗಿದ್ದು ನ್ಯಾಯಾಂಗ ತನಿಖೆ ಆಗಬೇಕಿದೆ. ಅದಕ್ಕೂ ಮುನ್ನ ಸದನದಲ್ಲಿ ಚರ್ಚೆ ಆಗಬೇಕಿದೆ ಎಂದರು.

ಈ ಮಾತನ್ನು ಒಪ್ಪದ ಕೃಷ್ಣಾ ರೆಡ್ಡಿ, ದಾಖಲೆ ಮೊದಲು ಹಾಜರು ಮಾಡಿ ನಂತರ ಅವಕಾಶ ಕೊಡೋಣವೆಂದರು. ರಾಮದಾಸ್ ಮಾತ್ರ ನಿಂತಲ್ಲಿಂದಲೇ ದಾಖಲೆ ತೋರಿಸಿ, ದಾಖಲೆ ಕೊಡಲು ಸಿದ್ಧವಿದ್ದು ಅದರಲ್ಲಿ ಏನಿದೆ? ಯಾವ ದಾಖಲೆ ಕೊಡುತ್ತಿದ್ದೇನೆ ಎಂದು ಹೇಳುವುದಕ್ಕಾದರೂ ಬಿಡಿ ಎಂದು ಮನವಿ ಮಾಡಿದರು. ಅಂತಿಮವಾಗಿ ಬಿಜೆಪಿ ಸದಸ್ಯರು ಇದು ಕಿಕ್​ಬ್ಯಾಕ್ ಸರ್ಕಾರ ಎಂದು ಘೊಷಣೆ ಹಾಕಿ ಧರಣಿ ನಡೆಸಿದರು. ಆಗ ಪ್ರತಿಪಕ್ಷ ಮುಖ್ಯ ಸಚೇತಕ ಸುನೀಲ್​ಕುಮಾರ್ ಹಾಗೂ ಡೆಪ್ಯುಟಿ ಸ್ಪೀಕರ್ ನಡುವೆ ಜಟಾಪಟಿ ನಡೆಯಿತು.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಎಚ್.ಡಿ.ರೇವಣ್ಣ, ಇಷ್ಟು ದಿನ ಸದನ ಚೆನ್ನಾಗಿ ನಡೆದಿದೆ. ಇನ್ನೊಂದು ದಿನ ಇದೇ ರೀತಿ ನಡೆಯಲು ಅವಕಾಶ ಕೊಡಿ ಎಂದು ಬಿಜೆಪಿ ಸದಸ್ಯರಿಗೆ ಕೈ ಮುಗಿದರು. ಇತ್ತ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮಾರ್ಷಲ್​ಗಳು ಸದನಕ್ಕಾಗಮಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಸಿಗದ ಕಾರಣ ಸದನ ಗುರುವಾರ ಬೆಳಗ್ಗೆ 10.30ಕ್ಕೆ ಮುಂದೂಡಲ್ಪಟ್ಟಿತು.

ಇಂದಿರಾ ಕ್ಯಾಂಟಿನ್​ನಲ್ಲಿ 150 ಕೋಟಿ ರೂ. ಹಗರಣ ನಡೆದಿದೆ. 50 ಕೋಟಿ ರೂ. ಕಿಕ್​ಬ್ಯಾಕ್ ಆಗಿದೆ. ಸರ್ಕಾರ ಲೆಕ್ಕ ಕೊಟ್ಟಷ್ಟು ಜನ ಕ್ಯಾಂಟಿನ್​ಗಳಲ್ಲಿ ಊಟ ಮಾಡಿಲ್ಲ ಎಂಬುದಕ್ಕೆ ವಿಡಿಯೋ ದಾಖಲೆ ಇದೆ. ಇದಕ್ಕೆ ಸಂಬಂಧಿಸಿದ ಇತರೆ ದಾಖಲೆಯೂ ನನ್ನಲ್ಲಿದೆ.

| ಎಸ್.ಎ.ರಾಮದಾಸ್ ಬಿಜೆಪಿ ಶಾಸಕ

1 ಲಕ್ಷ ಕ್ವಿಂಟಲ್ ಅಕ್ಕಿ, ಗೋಧಿ ಕೊಳೆಯುತ್ತಿದೆ

ಬೆಂಗಳೂರು: ಅನ್ನಭಾಗ್ಯದ ಅಕ್ಕಿ ಗೋದಾಮಿನಲ್ಲಿ ಕೊಳೆಯುತ್ತಿದೆ. ಅಂದಾಜಿನ ಪ್ರಕಾರ 1 ಲಕ್ಷ ಕ್ವಿಂಟಲ್ ಅಕ್ಕಿ, ಗೋಧಿ ಕೊಳೆಯುತ್ತಿರುವ ಮಾಹಿತಿಯಿದೆ. ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದರು.

ಬಜೆಟ್ ಮೇಲಿನ ಚರ್ಚೆಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರು 7 ಕೆಜಿ ಅಕ್ಕಿಯನ್ನು 5ಕ್ಕೆ ಇಳಿಸಿರುವ ವಿಚಾರ ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿದ ಯಡಿಯೂರಪ್ಪ, ಬೇಕಿದ್ದರೆ ನಾನೂ ನಿಮ್ಮ ಜತೆ ಬರುತ್ತೇನೆ. ಸ್ಥಳ ಪರಿಶೀಲಿಸಿ ಕೊಳೆಯುತ್ತಿರುವ ಅಕ್ಕಿಗೆ ಮುಕ್ತಿ ಕೊಡಿ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹಮ್ಮದ್ ಖಾನ್, ಅಧಿವೇಶನ ಮುಗಿದ ಕೂಡಲೇ ಗೋದಾಮುಗಳಿಗೆ ಭೇಟಿ ನೀಡುತ್ತೇನೆ. ನೀವು ಬಂದರೆ ಇನ್ನೂ ಸಂತಸ. ಜತೆಗೆ ಜಿಲ್ಲಾವಾರು ಅಧಿಕಾರಿಗಳ ಸಭೆ ನಡೆಸಿ ರ್ಚಚಿಸಿ ಸಮಸ್ಯೆ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು.

ಅಕ್ಕಿ ಕಮ್ಮಿ ಮಾಡ್ಬೇಡಿ

ಬಜೆಟ್ ಮೇಲೆ ಮಾತನಾಡಿದ ಜೆಡಿಎಸ್​ನ ಎ.ಟಿ.ರಾಮಸ್ವಾಮಿ, ಸರ್ಕಾರವನ್ನು ತಿವಿಯುತ್ತಲೇ ಹಲವು ಉಪಯುಕ್ತ ಸಲಹೆಗಳನ್ನೂ ಕೊಟ್ಟು ಕೆಲವು ಯೋಜನೆಗಳನ್ನು ಶ್ಲಾಘಿಸಿದರು. ಸಾಲಮನ್ನಾ ಯೋಜನೆ ಪರಿಷ್ಕರಿಸಿ ಎಲ್ಲ ರೈತರಿಗೂ ಅನುಕೂಲ ಆಗುವಂತೆ ಮಾಡಿ, ಅನ್ನಭಾಗ್ಯ ಯೋಜನೆಯಡಿ ಅಕ್ಕಿ 7 ಕೆಜಿ ಕೊಟ್ಟು, ಬೆಳೆಯನ್ನು 1 ಕೆಜಿ ಕೊಡಿ. ಇದರ ಪ್ರಮಾಣ ಕಡಿಮೆ ಮಾಡಬೇಡಿ. ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡಿ ಹಾಗೂ ಸಮಗ್ರ ಕರ್ನಾಟಕ ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಿ ಎಂದು ಸಿಎಂಗೆ ಸಲಹೆ ನೀಡಿದರು.

ಬಿಬಿಎಂಪಿಯಲ್ಲಿ 44 ಸಾವಿರ ಪೌರಕಾರ್ವಿುಕರ ಹೆಸರಿನಲ್ಲಿ ಬಿಲ್ ಕೊಟ್ಟು 18 ಸಾವಿರ ಕಾರ್ವಿುಕರನ್ನು ದುಡಿಸಿಕೊಳ್ಳುವಾಗ ಐಎಎಸ್ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ಗುತ್ತಿಗೆ ಮಾಫಿಯಾಗೆ ತಡೆಗಟ್ಟಿ: ಸರ್ಕಾರಿ ಕಾಮಗಾರಿಗಳಲ್ಲಿ ಗುಣಮಟ್ಟ ಇರುವುದಿಲ್ಲ. ವಸತಿ ನಿಯಮದಡಿ ನಿರ್ವಿುಸಿರುವ ಕಟ್ಟಡಗಳು ಬೀಳುತ್ತಿವೆ. ಗುತ್ತಿಗೆದಾರರ ಮಾಫಿಯಾ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುವುದು ಅಗತ್ಯ ಎಂದು ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹಿಸಿದರು. ನಿಯಮ ಬಾಹಿರವಾಗಿ ಹಿಂದುಳಿದ ವರ್ಗಗಳ ಇಲಾಖೆ ನಿರ್ದೇಶಕರೊಬ್ಬರು 10.50 ಕೋಟಿ ರೂ. ಮ್ಯೂಚುಯಲ್ ಫಂಡ್​ನಲ್ಲಿ ತೊಡಗಿಸಿದ್ದಾರೆ. ಈ ಅಧಿಕಾರಿ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾಹಿತಿಗಳೇ ಇಂಗ್ಲಿಷ್ ವಿರೋಧಿಸಬೇಡಿ!

ಬಡ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಸರ್ಕಾರಿ ಶಾಲೆಗಳಲ್ಲಿ ಒಂದರಿಂದ 10ನೇ ತರಗತಿವರೆಗೆ ಒಂದು ಭಾಷೆಯನ್ನಾಗಿ ಇಂಗ್ಲಿಷ್ ಬೋಧಿಸಲೇಬೇಕು. ಸಂವಹನ ಭಾಷೆಯಾಗಿ ಇಂಗ್ಲಿಷ್ ಕಲಿಯದಿದ್ದರೆ ಮುಂದಿನ ದಿನಗಳಲ್ಲಿ ಬಡವರ ಮಕ್ಕಳಿಗೆ ಉದ್ಯೋಗ ಸಿಗುವುದೇ ಕಠಿಣವಾಗುತ್ತದೆ. ರಾಜ್ಯದ ಸಾಹಿತಿಗಳು, ಬುದ್ಧಿಜೀವಿಗಳು ಇಂಗ್ಲಿಷ್ ಕಲಿಕೆಗೆ ವಿರೋಧ ಮಾಡಬಾರದು ಎಂದು ಕಳಕಳಿಯ ಮನವಿ ಮಾಡುತ್ತೇನೆ ಎಂದು ರಾಮಸ್ವಾಮಿ ಹೇಳಿದರು.

ಬಿಪಿಎಲ್ ಪಡಿತರ ಚೀಟಿದಾರರಿಗೆ 7 ಕೆಜಿ ಅಕ್ಕಿ ಕೊಡಬೇಕು. ಖಾಲಿ ಇರುವ 2.75 ಲಕ್ಷ ಹುದ್ದೆ ಭರ್ತಿ ಮಾಡಬೇಕು. ಕೊಡಗು, ಶಿವಮೊಗ್ಗ ಮತ್ತಿತರ ಜಿಲ್ಲೆಗಳಲ್ಲಿ ಆನೆ ಕಾರಿಡಾರ್ ಕೂಡಲೇ ಆರಂಭಿಸಬೇಕು. ಮಳೆಯಿಂದ ಆಗಿರುವ ಹಾನಿಗೆ ಸಕಲೇಶಪುರ ತಾಲೂಕು ಒಂದಕ್ಕೆ 50 ಕೋಟಿ ರೂ. ನೀಡಬೇಕು.

| ಎಚ್.ಕೆ.ಕುಮಾರಸ್ವಾಮಿ ಜೆಡಿಎಸ್ ಶಾಸಕ

ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ್​ಗಳನ್ನು ಜಿಲ್ಲೆಯನ್ನಾಗಿ ಮಾಡಬೇಕು.

| ಸತೀಶ್ ಜಾರಕೊಹೊಳಿ ಕಾಂಗ್ರೆಸ್ ಶಾಸಕ


ಸಿಎಂ ಉತ್ತರ ಆಧರಿಸಿ ತಂತ್ರ

ಬೆಂಗಳೂರು: ಲೋಕಸಭೆ ಚುನಾವಣೆಗೆ ಪೂರ್ವತಯಾರಿ ನಡೆಸಲು ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನೆ ಮೊದಲು ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ, ಗುರುವಾರ ಸದನದಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡುವ ಉತ್ತರದ ಮೇಲೆ ತಂತ್ರ ರೂಪಿಸಲು ನಿರ್ಧರಿಸಿದೆ.

ಕಳೆದ ವಾರ ಮಂಡನೆಯಾದ ಬಜೆಟ್ ಕುರಿತು ಎರಡೂ ಸದನಗಳಲ್ಲಿ ಚರ್ಚೆ ನಡೆದಿದ್ದು, ಗುರುವಾರ ಅವೆಲ್ಲಕ್ಕೂ ಕುಮಾರಸ್ವಾಮಿ ಉತ್ತರ ನೀಡಲಿದ್ದಾರೆ. ಈಗಾಗಲೇ ಎರಡೂ ಸದನದಲ್ಲಿ ನಡೆದಿರುವ ಚರ್ಚೆಗಳಲ್ಲಿ ಪ್ರಮುಖವಾಗಿ ಸಾಲ ಮನ್ನಾ, ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ, ಪ್ರಾದೇಶಿಕ ಅಸಮಾನತೆ ಮಾರ್ದನಿಸಿದೆ. ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದೇವೆ.

ಸಂಪೂರ್ಣ ಸಾಲ ಮನ್ನಾ ಮಾತಿಗೆ ಎಚ್​ಡಿಕೆ ಬದ್ಧವಾಗಲಿ. ಇಂಧನ ಹಾಗೂ ವಿದ್ಯುತ್ ಮೇಲಿನ ಹೆಚ್ಚುವರಿ ತೆರಿಗೆ ಹಿಂಪಡೆಯಬೇಕು. 3-4 ಜಿಲ್ಲೆಗಷ್ಟೆ ಸೀಮಿತವಾಗಿ ಬಜೆಟ್ ಮಂಡಿಸಿ, ಪ್ರಾದೇಶಿಕ ಅಸಮಾನತೆ ಬೆಂಕಿಗೆ ಸರ್ಕಾರ ತುಪ್ಪ ಸುರಿದಿದೆ ಎಂಬ ಮಾತಿಗೆ ಸಿಎಂ ಅವರಿಂದ ಪರಿಹಾರ ನಿರೀಕ್ಷಿಸುತ್ತಿದ್ದೇವೆ. ಇಲ್ಲದಿದ್ದರೆ ಪ್ರತ್ಯೇಕ ತುಳು ನಾಡು, ಪ್ರತ್ಯೇಕ ಉತ್ತರ ಕರ್ನಾಟಕದಂತಹ ವಿಭಜನೆ ಕೂಗಿಗೆ ಸರ್ಕಾರವೇ ಪ್ರೋತ್ಸಾಹ ನೀಡಿದೆ ಎಂದು ಪ್ರತಿಭಟಿಸುತ್ತೇವೆ. ರಾಜಕೀಯದಲ್ಲಿ ಮೊದಲೇ ಯೋಜನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರಕ್ಕೆ ಅಭಿನಂದಿಸುವುದೋ, ಸದನ ಬಹಿಷ್ಕಾರ ಮಾಡುವುದೋ ಎಂಬುದನ್ನು ಸ್ಥಳದಲ್ಲೆ ನಿರ್ಧರಿಸಲಾಗುತ್ತದೆ ಎಂದು ವಿಧಾನಸಭಾ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಸ್ಪಷ್ಟನೆಯ ನಿರೀಕ್ಷೆಯಲ್ಲಿ…

ಸರ್ಕಾರದ ಉತ್ತರ ಎದುರು ನೋಡುತ್ತಿರುವುದಾಗಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸಾಲಮನ್ನಾ ಕುರಿತು ಸರ್ಕಾರ ನೀಡಿರುವ ಅಂಕಿ-ಅಂಶ ಸಂಪೂರ್ಣ ತಪು್ಪ. ರಾಜ್ಯದಲ್ಲಿರುವ ಸುಸ್ತಿ ಸಾಲ ಸುಮಾರು 23-24 ಸಾವಿರ ಕೋಟಿ ರೂ. ಇದೆ. ಚಾಲ್ತಿ ಸಾಲವನ್ನೂ ಸೇರಿಸಿದರೆ ಮಾತ್ರ ಸರ್ಕಾರ ಈಗ ಹೇಳುತ್ತಿರುವ 34 ಸಾವಿರ ಕೋಟಿ ರೂ. ಆಗುತ್ತದೆ. ಇಂತಹ ಅನೇಕ ವಿಚಾರದಲ್ಲಿ ಸರ್ಕಾರ ಸ್ಪಷ್ಟನೆ ನೀಡುತ್ತದೆ ಎಂಬ ವಿಶ್ವಾಸವಿದೆ. ಮುಂದೇನು ಮಾಡಬೇಕು ಎಂಬುದನ್ನು ಸಂದರ್ಭಕ್ಕೆ ಅನುಗುಣವಾಗಿ ನಿರ್ಧರಿಸುತ್ತೇವೆ ಎಂದು ಪೂಜಾರಿ ತಿಳಿಸಿದ್ದಾರೆ.

ಘೋಷಣೆ ಬೆಟ್ಟದಷ್ಟು ಕೊಟ್ಟದ್ದು ಮುಷ್ಟಿಯಷ್ಟು

ಬೆಂಗಳೂರು: ಬಜೆಟ್ ಘೋಷಣೆ ಬೆಟ್ಟದಷ್ಟು, ಕೊಟ್ಟದ್ದು ಮುಷ್ಟಿಯಷ್ಟು ಎಂದು ಬಿಜೆಪಿಯ ಸಿ.ಟಿ.ರವಿ ಟೀಕಿಸಿದರು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿ, ರೈತರ ಸಾಲಮನ್ನಾ ಬಗ್ಗೆ ಅನೇಕ ಸಂದೇಶಗಳು ವಾಟ್ಸ್ ಆಪ್​ನಲ್ಲಿ ಹರಿದಾಡುತ್ತಿವೆ. ಮಳವಳ್ಳಿ ರೈತನೊಬ್ಬನ ಮಾತಿನಲ್ಲೇ ಹೇಳುವುದಾದರೆ, ನೀವು ಪೂರ್ಣ ಸಾಲಮನ್ನಾ ಮಾಡದಿದ್ದರೆ ಹಾಳಾಗುತ್ತೀರಿ ಎಂದರು. ಸಾಲ ಮರುಪಾವತಿಸಿದವನಿಗೆ ಎಲ್ಲಿ ನ್ಯಾಯ ಕೊಟ್ಟಿದ್ದೀರಿ? ಚಾಲ್ತಿ ಖಾತೆ ಸಾಲಮನ್ನಾ ಆಗಬೇಕು. 53 ಸಾವಿರ ಕೊಟಿ ರೂ. ನಿಗದಿ ಮಾಡಿ ಶೇ.17 ಮಾತ್ರ ಇಟ್ಟಿದ್ದಾರೆ. ಇದೇನು ಪಂಚವಾರ್ಷಿಕ ಬಜೆಟ್ ಅಲ್ಲ ಎಂದು ಕುಟುಕಿದರು. 224 ಶಾಸಕರಿದ್ದೇವೆ. ಕೇವಲ 20-30 ಶಾಸಕರಿಗೆ ಪ್ರಯೋಜನವಾದರೆ ಹೇಗೆ? ಉತ್ತರ ಕರ್ನಾಟಕ, ಮಲೆನಾಡು, ಕರಾವಳಿಯವರಿಗೆ ಏನೂ ಇಲ್ಲ. ಇದು ಸಮದೃಷ್ಟಿ ಬಜೆಟ್ಟೇ? ಎಂದು ಕೇಳಿದರು. ಚಿಕ್ಕಮಗಳೂರಿಗೆ ಮೆಡಿಕಲ್ ಕಾಲೇಜು ಕೇಳೋದು ತಪ್ಪಾ? ಆಸ್ಪತ್ರೆ ಮೇಲ್ದರ್ಜೆಗೇರಿಸಿ ಎಂದು ಕೇಳಬಾರದೆ? 20 ವರ್ಷ ಹಿಂದೆ ಹುಟ್ಟಿದ ಜಿಲ್ಲೆಗೆ ಮೆಡಿಕಲ್ ಕಾಲೇಜು, ಮಿಲ್ಕ ಯೂನಿಯನ್ ಬಂತು. 145 ವರ್ಷದ ಜಿಲ್ಲೆಗೆ ಎಲ್ಲಿ? ಬಜೆಟ್ ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿ್ಚ್ಟ್ದೇ ಹೆಚ್ಚು ಎಂದು ಹರಿಹಾಯ್ದರು.

ಬಾಲಕಿ ಬೀಳಲಿಲ್ಲ, ಕತ್ತೆ ಬದುಕುಳಿಯಲಿಲ್ಲ!

ಬೆಂಗಳೂರು: ಬಿಜೆಪಿಯವರು ಸರ್ಕಾರವನ್ನು ಕುರುಡರು- ಕುಂಟರು ಎಂದು ಗೇಲಿ ಮಾಡಿದ್ದಾರೆ. ಅವರು ತುಂಬಾ ಆತುರ ದಲ್ಲಿದ್ದು, ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಜೆಡಿಎಸ್​ನ ಎ.ಟಿ. ರಾಮಸ್ವಾಮಿ ಎಚ್ಚರಿಸಿದರು. ಇದಕ್ಕೆ ಕೆರಳಿದ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ, ಆತುರ ನಮಗೇನಿಲ್ಲ. ಮತ ಎಣಿಕೆ ಮುಗಿಯುವ ಮೊದಲೇ ಜೆಡಿಎಸ್-ಕಾಂಗ್ರೆಸ್ಸಿಗರು ಸರ್ಕಾರ ರಚನೆಗೆ ಮುಂದಾಗಿದ್ದರು ಎಂದು ಕುಟುಕಿದರು. ಇಷ್ಟಕ್ಕೆ ಸುಮ್ಮನಾಗದ ರಾಮಸ್ವಾಮಿ, ಬಾಲ್ಯದಲ್ಲಿದ್ದಾಗ ಸರ್ಕಸ್ ನೋಡಲು ಹೋಗುತ್ತಿದ್ದೆ. ಬಾಲಕಿಯೊಬ್ಬಳು ಹಗ್ಗದ ಮೇಲೆ ನಡೆದು ರಂಜಿಸುತ್ತಿದ್ದಳು. ನಡೆಯುವಾಗ ಬಿದ್ದರೆ ನಿನ್ನನ್ನು ಕತ್ತೆ ಜತೆ ಮದುವೆ ಮಾಡುತ್ತೇನೆಂದು ತಂದೆ ಹೆದರಿಸುತ್ತಿದ್ದ. ಈ ಮಾತು ಕೇಳಿ ಕತ್ತೆ ಖುಷಿ ಪಟ್ಟು ಆಕೆ ಬೀಳುವುದನ್ನೇ ಕಾಯುತ್ತಿತ್ತು. ಬಾಲಕಿ ಯಾವತ್ತೂ ಬೀಳಲಿಲ್ಲ. ಕತ್ತೆಗೆ ವಯಸ್ಸಾಗಿ ಸತ್ತೇ ಹೋಯಿತು ಎಂದು ಚುಚ್ಚಿದರು. ಆಗ ಬಿಜೆಪಿಯ ಸಿ.ಟಿ.ರವಿ, ಮಳೆ ಬಾರದಿದ್ದರೆ ಕತ್ತೆಗಳಿಗೆ ಮದುವೆ ಮಾಡುತ್ತಾರೆ. ಹೀಗೆ ಕಾಂಗ್ರೆಸ್-ಜೆಡಿಎಸ್ ಮದುವೆ ಆಗಿ ಹೋಗಿದೆ ಎಂದಾಗ ಸದನದಲ್ಲಿ ನಗೆಯ ಅಲೆ ಮೂಡಿತು.

Leave a Reply

Your email address will not be published. Required fields are marked *

Back To Top