ನಿರೀಕ್ಷಿತ ಗುರಿ ಮುಟ್ಟದ ಕ್ಯಾಂಟೀನ್: ಮುಂದುವರಿಯದ ಇಂದಿರಾ

| ಶ್ರೀಕಾಂತ ಶೇಷಾದ್ರಿ, 

ಬೆಂಗಳೂರು: ‘ಮೈತ್ರಿ ಸರ್ಕಾರವು ಹಿಂದಿನ ಕಾಂಗ್ರೆಸ್ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನೂ ಮುಂದುವರಿಸಿಕೊಂಡು ಹೋಗುತ್ತಿದೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೀಗುತ್ತಲೇ ಬಂದಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರದ ಫ್ಲಾಗ್​ಶಿಪ್ ಕಾರ್ಯಕ್ರಮ ಎನಿಸಿಕೊಂಡಿದ್ದ ಇಂದಿರಾ ಕ್ಯಾಂಟೀನ್ ನಿರೀಕ್ಷಿತ ಗುರಿ ಮುಟ್ಟಿಲ್ಲ.

ಇಂದಿರಾ ಕ್ಯಾಂಟೀನ್ ಸ್ಟೇಟಸ್ ಕುರಿತು ಮಾಹಿತಿ ಕೆದಕಿದಾಗ ಅಚ್ಚರಿ ಸಂಗತಿ ಬೆಳಕಿಗೆ ಬಂದಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸ್ಥಾಪನೆ ಮಾಡಲು ತೆಗೆದುಕೊಂಡ ಕಾಳಜಿ ರಾಜ್ಯದ ಇತರೆಡೆ ಪರಿಗಣಿಸಿಲ್ಲ. ಜತೆಗೆ ಪ್ರಾದೇಶಿಕ ವಾತಾವರಣಕ್ಕೆ ತಕ್ಕಂತೆ ಮೆನು ಬದಲಾವಣೆ ಪ್ರಯತ್ನವೂ ನಡೆದಿಲ್ಲ. ಬೆಳಗ್ಗೆ ಉಪಾಹಾರದ ಜತೆಗೆ ಕಾಫಿ, ಚಹಾ ನೀಡುವ ನಿರ್ಧಾರ ಅನುಷ್ಠಾನಕ್ಕೆ ಬಂದಿಲ್ಲ. ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಸ್ಥಳೀಯ ಸಂಸ್ಥೆ, ತಾಲೂಕು ಕೇಂದ್ರಗಳಲ್ಲಿ ಒಟ್ಟು 239 ಇಂದಿರಾ ಕ್ಯಾಂಟೀನ್ ತೆರೆಯಲು ತೀರ್ವನವಾಗಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರ ಪೂರ್ಣಗೊಳಿಸಿ, ಇದೀಗ ಮೈತ್ರಿ ಸರ್ಕಾರ ಒಂದು ವರ್ಷದ ಅಧಿಕಾರ ನಡೆಸಿದರೂ ಈವರೆಗೆ 137 ಕ್ಯಾಂಟೀನ್ ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಅನುದಾನ ಕೊರತೆ

ಈ ಯೋಜನೆಯಲ್ಲಿ ಸರ್ಕಾರ ಕ್ಯಾಂಟೀನ್​ಗೆ ಮೂಲಸೌಕರ್ಯ ಸಿದ್ಧಪಡಿಸಿಕೊಡುತ್ತದೆ. ಬಳಿಕ ನಿತ್ಯ ಖರ್ಚುಗಳನ್ನು ಸ್ಥಳೀಯ ಸಂಸ್ಥೆಯೇ ನಿರ್ವಹಿಸಿಕೊಳ್ಳಬೇಕಾಗುತ್ತದೆ. ಇದೀಗ ವಿವಿಧ ನಗರ ಸ್ಥಳೀಯ ಸಂಸ್ಥೆಗಳು ಸರ್ಕಾರಕ್ಕೆ ಪತ್ರ ಬರೆದು ನಮ್ಮಲ್ಲಿ ಆದಾಯ ಕೊರತೆ ಇದ್ದು, ಸರ್ಕಾರವೇ ಹಣಕಾಸು ಒದಗಿಸಬೇಕೆಂದು ಮನವಿ ಮಾಡಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಬಗ್ಗೆ ಸರ್ಕಾರದಲ್ಲಿ ಸ್ಪಷ್ಟತೆ ಇಲ್ಲ. ಅನುದಾನದ ಕೊರತೆ ಕಾರಣಕ್ಕೂ ಕೆಲವೆಡೆ ಉದ್ಘಾಟನೆಗೆ ಆಸಕ್ತಿ ತೋರಿಲ್ಲ ಎನ್ನಲಾಗಿದೆ.

ಇಂದಿರಾ ಕ್ಯಾಂಟೀನ್ ಕೆಲವೆಡೆ ಆರಂಭವಾಗಬೇಕಿದೆ. ಘಟಕ ಆರಂಭಿಸಲು ಹಣದ ಕೊರತೆ ಇಲ್ಲ. ಬೇರೆ ಬೇರೆ ಸಮಸ್ಯೆಗಳಿದ್ದು, ಪರಿಹರಿಸಿ ಶೀಘ್ರ ಆರಂಭಿಸಲಾಗುತ್ತದೆ.

| ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ

ಅವ್ಯವಹಾರ ತಡೆಗೆ ಸಾಫ್ಟ್​ವೇರ್

ಇಂದಿರಾ ಕ್ಯಾಂಟೀನ್​ನಲ್ಲಿ ಸುಳ್ಳು ಲೆಕ್ಕ ತೋರಿಸಿ ಸರ್ಕಾರದ ಹಣ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಸಾಫ್ಟ್​ವೇರ್ ಸಿದ್ಧಪಡಿಸಿದೆ. ಶೀಘ್ರವೇ ಅದರ ಅನುಷ್ಠಾನವಾಗಲಿದೆ. ಕ್ಯಾಂಟೀನ್​ನಲ್ಲಿ ಟೋಕನ್ ವ್ಯವಸ್ಥೆ ಜಾರಿಗೆ ಬರಲಿದ್ದು, ಎಷ್ಟು ಟೋಕನ್ ವಿತರಿಸಲಾಗಿದೆಯೋ ಅಷ್ಟು ಹಣ ಮಾತ್ರ ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಕ್ಯಾಂಟೀನ್​ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ, ಟೋಕನ್ ಮುದ್ರಿಸುವ ಯಂತ್ರ ಹಾಗೂ ಆಹಾರ ತೂಕ ಮಾಡುವ ಯಂತ್ರ ಸಾಫ್ಟ್ ವೇರ್​ಗೆ ಲಿಂಕ್ ಆಗಿರಲಿದೆ. ಪ್ರತಿನಿತ್ಯ ನಿರ್ವಹಣೆಯನ್ನು ಸರ್ಕಾರ ಬೆಂಗಳೂರಿನಿಂದಲೇ ಪರಿವೀಕ್ಷಣೆ ನಡೆಸಲು ಅವಕಾಶ ಮಾಡಿಕೊಳ್ಳಲಾಗುತ್ತಿದೆ.

ತಾಂತ್ರಿಕ ಸಮಸ್ಯೆ ನೆಪ

ಸರ್ಕಾರದ ಮಾಹಿತಿ ಪ್ರಕಾರ, 239 ಕಡೆಯೂ ಕಾಂಟೀನ್ ಸ್ಥಾಪಿಸಲಾಗುತ್ತಿದೆ, ಕೆಲವೆಡೆ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಶೀಘ್ರವೇ ಸಮಸ್ಯೆ ಬಗೆಹರಿಸಿಕೊಂಡು ಕಾರ್ಯಾರಂಭ ಮಾಡಲಾಗುತ್ತದೆ. ಹಾಲಿ ಕಾರ್ಯನಿರ್ವಹಿಸುತ್ತಿರುವ 137 ಕ್ಯಾಂಟೀನ್​ಗಳ ಹೊರತು, 44 ಕಡೆ ಕೇಂದ್ರ ಸಿದ್ಧವಾಗಿದೆ. ಕೆಲವು ಸಣ್ಣಪುಟ್ಟ ಕೆಲಸಗಳಾಗಬೇಕು. ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಕಾರಣಕ್ಕೆ ತಡೆಹಿಡಿಯಲ್ಪಟ್ಟಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಜೆಡಿಎಸ್ ಮತ್ತು ಬಿಜೆಪಿ ಶಾಸಕರಿರುವೆಡೆ ಕ್ಯಾಂಟೀನ್ ಆರಂಭಕ್ಕೆ ಹೆಚ್ಚಿನ ಆಸಕ್ತಿ ವಹಿಸಿಲ್ಲ ಎಂಬ ಮಾತೂ ಇದೆ.

Leave a Reply

Your email address will not be published. Required fields are marked *