ಕಾಶ್ಮೀರದ ಸ್ಥಿತಿಗತಿಗಳನ್ನು ಅವಲೋಕಿಸುತ್ತಿದ್ದೇನೆ ಎಂದಿದ್ದ ಚೀನಾ ಅಧ್ಯಕ್ಷರಿಗೆ ಕಟು ಪ್ರತಿಕ್ರಿಯೆ ನೀಡಿದ ವಿದೇಶಾಂಗ ಇಲಾಖೆ…

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಅವರನ್ನು ಬೀಜಿಂಗ್​ನಲ್ಲಿ ಭೇಟಿಯಾದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​ ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿದ್ದರು. ಎರಡೂ ದೇಶಗಳ ಮುಖಂಡರ ನಡುವೆ ಕಾಶ್ಮಿರದ ಬಗ್ಗೆ ಮಾತುಕತೆ ನಡೆದ ಬಳಿಕ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಕ್ಸಿ ಜಿನ್​ಪಿಂಗ್​, ನಾನು ಕಾಶ್ಮೀರದ ಸ್ಥಿತಿಗತಿಗಳನ್ನು, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇನೆ ಎಂದಿದ್ದರು. ಅಲ್ಲದೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕಳಕಳಿ ಹೊಂದಿರುವ ಪಾಕಿಸ್ತಾನವನ್ನು ಬೆಂಬಲಿಸುವುದಾಗಿ ತಿಳಿಸಿದ್ದರು.

ಭಾರತ ಹಾಗೂ ಪಾಕಿಸ್ತಾನಗಳು ಕಾಶ್ಮೀರ ವಿವಾದವನ್ನು ಶಾಂತಿಯುತ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದೂ ಕ್ಸಿ ಜಿನ್​ಪಿಂಗ್​ ಹೇಳಿದ್ದರು.

ಚೀನಾ ಅಧ್ಯಕ್ಷರ ಈ ಹೇಳಿಕೆಗೆ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಟುವಾಗಿ ಪ್ರತಿಕ್ರಿಯೆ ನೀಡಿದೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಅಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತನ್ನ ನಿಲುವನ್ನು ಮತ್ತೊಮ್ಮೆ ಖಚಿತ ಪಡಿಸಿದ ಭಾರತ, ಕಾಶ್ಮೀರ ಭಾರತದ ಆಂತರಿಕ ವಿಚಾರವಾಗಿದ್ದು, ಅದರಲ್ಲಿ ಬೇರೆ ದೇಶದವರ ಹಸ್ತಕ್ಷೇಪ ಅಗತ್ಯವಿಲ್ಲ ಎಂದು ಹೇಳಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಹಾಗೂ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅವರ ಭೇಟಿಯ ವೇಳೆ ಅಲ್ಲಿ ಕಾಶ್ಮೀರದ ವಿಚಾರ ಪ್ರಸ್ತಾಪವಾಗಿದ್ದರ ಬಗ್ಗೆ ವರದಿ ನೋಡಿದ್ದೇವೆ. ಜಮ್ಮುಕಾಶ್ಮೀರದ ವಿಚಾರದಲ್ಲಿ ಭಾರತ ತೆಗೆದುಕೊಂಡ ನಿರ್ಧಾರಕ್ಕೆ ಈಗಲೂ ಬದ್ಧವಾಗಿದೆ. ನಮ್ಮ ನಿಲುವಿನ ಬಗ್ಗೆ ಚೀನಾಕ್ಕೂ ತುಂಬ ಚೆನ್ನಾಗಿಯೇ ಅರಿವು ಇದೆ. ಬೇರೆ ದೇಶದವರ ಅಭಿಪ್ರಾಯವಾಗಲೀ, ವ್ಯಾಖ್ಯಾನವಾಗಲೀ ನಮಗೆ ಬೇಡ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ರವೀಶ್​ ಕುಮಾರ್ ತಿಳಿಸಿದ್ದಾರೆ.

ಕ್ಸಿ ಜಿನ್​ಪಿಂಗ್​ ಅವರು ಅಕ್ಟೋಬರ್​ 11 ಮತ್ತು 12 ಎರಡು ದಿನಗಳ ಕಾಲ ಭಾರತಕ್ಕೆ ಭೇಟಿ​ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅನೌಪಚಾರಿಕ ಶೃಂಗಸಭೆಯಲ್ಲಿ ಭಾಗಿಯಾಗಿ, ದ್ವೀಪಕ್ಷೀಯ ಸಂಬಂಧ ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಗಮನಾರ್ಹ ಚರ್ಚೆ ನಡೆಸಲಿದ್ದಾರೆ.
(ಏಜೆನ್ಸೀಸ್​)

Leave a Reply

Your email address will not be published. Required fields are marked *