ದೇಶದ ಅತಿ ಉದ್ದದ ರೈಲ್ವೆ-ರಸ್ತೆ ಸೇತುವೆ ನಾಳೆ ಲೋಕಾರ್ಪಣೆ

ದಿಬ್ರೂಗಢ (ಅಸ್ಸಾಂ): ದೇಶದ ಅತ್ಯಂತ ಉದ್ದದ ರೈಲು- ರಸ್ತೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಮಂಗಳವಾರ ಉದ್ಘಾಟಿಸಲಿದ್ದಾರೆ.

ಡಿ. 25 ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವಾಗಿದ್ದು, ಇದನ್ನು ಉತ್ತಮ ಆಡಳಿತದ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನವೇ ಈ ಸೇತುವೆಯನ್ನು ಪ್ರಧಾನಿ ಲೋಕಾರ್ಪಣೆ ಮಾಡುತ್ತಿದ್ದಾರೆ. ಎಚ್.ಡಿ. ದೇವೇಗೌಡ ಪ್ರಧಾನಿಯಾಗಿದ್ದಾಗ (1997) ಶಂಕುಸ್ಥಾಪನೆಯಾದ ಈ ಯೋಜನೆಯ ಕಾಮಗಾರಿಗೆ 16 ವರ್ಷಗಳ ಹಿಂದೆ ಆಗಿನ ಪ್ರಧಾನಿ ವಾಜಪೇಯಿ ಚಾಲನೆ ನೀಡಿದ್ದರು.

ಸೇತುವೆ ವಿಶೇಷ

4.9 ಕಿ.ಮೀ. ಉದ್ದವಿರುವ ಈ ಸೇತುವೆಯನ್ನು ಅಸ್ಸಾಂನ ದಿಬ್ರೂಗಢ ಜಿಲ್ಲೆ ಬೋಗಿಬಿಲ್ ಮತ್ತು ಅರುಣಾಚಲ ಪ್ರದೇಶದ ಧೇಮಾಜಿ ಜಿಲ್ಲೆಯ ಸಿಲಾಪತ್ತರ್ ಮಧ್ಯೆ ಹರಿಯುವ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. -ಠಿ; 5,900 ಕೋಟಿ ವೆಚ್ಚದಲ್ಲಿ ನಿರ್ವಿುಸಿರುವ ಎರಡು ಮಜಲಿನ ಸೇತುವೆಯ ಮೇಲುಭಾಗದಲ್ಲಿ ತ್ರಿಪಥದ ರಸ್ತೆ ಮಾರ್ಗವಿದ್ದರೆ, ಕೆಳಭಾಗದಲ್ಲಿ ದ್ವಿಪಥದ ರೈಲು ಹಳಿ ಇದೆ.

ವಾರಕ್ಕೆ 5 ಸಾರಿ ರೈಲು ಸಂಚಾರ

ಈ ಸೇತುವೆ ನಿರ್ವಣಕ್ಕೂ ಮೊದಲು ತೀನ್​ಸುಕಿಯಾದಿಂದ ನಾಹರಲಾಗುನ್​ಗೆ 15 ತಾಸಿಗೂ ಹೆಚ್ಚು ಸಮಯ ಹಿಡಿಯುತ್ತಿತ್ತು. ಪ್ರಯಾಣಿಕರು ಎರಡು-ಮೂರು ರೈಲುಗಳನ್ನು ಬದಲಿಸಿ ಪ್ರಯಾಣಿಸಬೇಕಿತ್ತು. ಆದರೆ, ಈಗ ಇಂಟರ್​ಸಿಟಿ ಎಕ್ಸ್​ಪ್ರೆಸ್ ರೈಲು ಈ ದಾರಿಯನ್ನು ಐದೂವರೆ ತಾಸಿನಲ್ಲಿ ಕ್ರಮಿಸುತ್ತದೆ. 14 ಬೋಗಿಗಳ ಚೇರ್​ಕಾರ್ ರೈಲು ವಾರಕ್ಕೆ 5 ದಿನ ಸಂಚರಿಸಲಿದೆ ಎಂದು ನಾರ್ತ್ ಫ್ರಾಂಟಿಯರ್ ರೈಲ್ವೆ ವಕ್ತಾರ ನಿತಿನ್ ಭಟ್ಟಾಚಾರ್ಯ ಹೇಳಿದ್ದಾರೆ.

ಪ್ರಯಾಣದ ಅವಧಿ 10 ತಾಸು ಇಳಿಕೆ

ಸೇತುವೆಯಿಂದಾಗಿ ಅಸ್ಸಾಂನ ತೀನ್​ಸುಕಿಯಾ ಮತ್ತು ಅರುಣಾಚಲಪ್ರದೇಶದ ನಾಹರ ಲಾಗುನ್ ಪಟ್ಟಣಗಳ ಮಧ್ಯೆ ಸಂಚಾರ ಅವಧಿ ಕನಿಷ್ಠ 10 ತಾಸು ಇಳಿಕೆಯಾಗುತ್ತದೆ. ದಿಬ್ರೂಗಢ ಮತ್ತು ಧೇಮಾಜಿ ಮಧ್ಯೆಯ 500 ಕಿ.ಮೀ. ಪ್ರಯಾಣ 100 ಕಿ.ಮೀ.ಗೆ ಇಳಿಯಲಿದೆ. ಅರುಣಾಚಲ ಪ್ರದೇಶದ ಧೇಮಾಜಿಯಲ್ಲಿ ಉತ್ತಮ ಆಸ್ಪತ್ರೆಗಳು, ಉನ್ನತ ವ್ಯಾಸಂಗದ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಿವೆ. ಹೀಗಾಗಿ ಅಸ್ಸಾಂ ಗಡಿಭಾಗದ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅನುಕೂಲವಾಗಲಿದೆ. ನಾಗರಲಾಗುನ್​ನಿಂದ 15 ಕಿ.ಮೀ. ದೂರದಲ್ಲಿರುವ ದಿಬ್ರೂಗಢದಲ್ಲಿ ವಿಮಾನ ನಿಲ್ದಾಣ ಇದೆ. ಅರುಣಾಚಲ ಪ್ರದೇಶದ ಗಡಿ ಜಿಲ್ಲೆಗಳ ಜನರಿಗೆ ಕಡಿಮೆ ಸಮಯದಲ್ಲಿ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗುತ್ತದೆ. ಈ ಸೇತುವೆ ಯಿಂದ ಸರಕು ಸಾಗಣೆಯ ಭಾರಿ ವಾಹನಗಳ ಸಂಚಾರ ಸುಗಮವಾಗಲಿದೆ. ವಿಶೇಷವಾಗಿ ಚೀನಾ ಗಡಿಯಲ್ಲಿರುವ ಸೇನಾ ಚೌಕಿಗಳಿಗೆ ಸಾಮಗ್ರಿಗಳನ್ನು ತ್ವರಿತವಾಗಿ ರವಾನಿಸಬಹುದಾಗಿದೆ.