ಈಶಾನ್ಯ ಭಾರತದ ಸಂಪರ್ಕ ಕೊಂಡಿ ಉದ್ಘಾಟನೆ

ಬೋಗಿಬೀಲ್: ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಯಾಗಿದ್ದಾಗ ಕಾಮಗಾರಿಗೆ ಚಾಲನೆ ನೀಡಲಾಗಿದ್ದ ಬೋಗಿಬೀಲ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದ್ದಾರೆ.

ಈಶಾನ್ಯ ಭಾರತಕ್ಕೆ ಸಂಪರ್ಕ ಕೊಂಡಿಯಾಗಿರುವ ಈ ಸೇತುವೆ ಭಾರತಕ್ಕೆ ರಕ್ಷಣೆ ಹಾಗೂ ವಾಣಿಜ್ಯ ಉದ್ದೇಶದಿಂದ ಅತಿ ಮಹತ್ವದ್ದಾಗಿದೆ. ರೈಲ್ವೆ ಹಾಗೂ ರಸ್ತೆ ಮೇಲ್ಸೇತುವೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಈ ಸೇತುವೆಯನ್ನು ಅರ್ಪಣೆ ಮಾಡುತ್ತಿದ್ದೇವೆ ಎಂದರು.

ಸೇತುವೆಯ ಮೂಲಕ ತೆರಳಿದ ಮೊದಲ ರೈಲಿಗೂ ಪ್ರಧಾನಿ ಹಸಿರು ನಿಶಾನೆ ತೋರಿದರು. ಈಶಾನ್ಯ ಭಾರತ ಹಾಗೂ ಅರುಣಾಚಲ ಪ್ರದೇಶವು ಭಾರತದ ಇತರ ರಾಜ್ಯಗಳಿಗೆ ಇನ್ನಷ್ಟು ಹತ್ತಿರವಾಗುತ್ತಿದೆ ಎಂದು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮ ಖಂಡು ಬಣ್ಣಿಸಿದ್ದಾರೆ.

ಗೌಡರು ಅಡಿಗಲ್ಲು ಹಾಕಿದ್ದ ಯೋಜನೆ!

1997ರಲ್ಲಿ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರು ಬೋಗಿಬೀಲ್ ಸೇತುವೆ ಕಾಮಗಾರಿಗೆ ಅಡಿಗಲ್ಲು ಹಾಕಿದ್ದರು. ವಿಪರ್ಯಾಸವೆಂದರೆ 2002ರವರೆಗೆ ಕೆಲಸವೇ ಆರಂಭವಾಗಲಿಲ್ಲ. ವಾಜಪೇಯಿ ಪ್ರಧಾನಿಯಾದ ಮೇಲೆ 2002ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಇದಾದ ಬಳಿಕ ಸಾಕಷ್ಟು ತಾಂತ್ರಿಕ ಹಾಗೂ ನೈಸರ್ಗಿಕ ಅಡೆತಡೆಗಳ ಹಿನ್ನೆಲೆಯಲ್ಲಿ ಸುಮಾರು 21 ವರ್ಷಗಳ ವಿಳಂಬದ ಬಳಿಕ ಯೋಜನೆ ಪೂರ್ಣಗೊಂಡಿದೆ. ನೈಸರ್ಗಿಕ ವೈಪರೀತ್ಯಗಳ ಹಿನ್ನೆಲೆಯಲ್ಲಿ ವರ್ಷದ ಎಲ್ಲ ತಿಂಗಳಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ.

ಅಟಲ್ ಕನಸಿನ ಭಾರತ ನಿರ್ಮಾಣ

ಸೇತುವೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಅಟಲ್ ಅವಧಿಯಲ್ಲಿ ದೇಶದ ಮೂಲಸೌಕರ್ಯ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ಆರಂಭಿಸಲಾಗಿತ್ತು. ಆದರೆ ನಂತರ ಬಂದ ಯುಪಿಎ ಸರ್ಕಾರ ಆ ಯೋಜನೆಗಳನ್ನು ಮುಂದುವರಿಸಲು ಆಸಕ್ತಿ ತೋರಲಿಲ್ಲ. ಬೋಗಿಬೀಲ್ ಸೇತುವೆ ನಿರ್ಮಾಣ ಕೂಡ ಯುಪಿಎ ಅವಧಿಯಲ್ಲಿ ಭಾಗಶಃ ಸ್ಥಗಿತಗೊಂಡಿತ್ತು. ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಅವಧಿಯಲ್ಲಿ ಸೇತುವೆಯ 3 ಕಂಬಗಳು ಮಾತ್ರ ನಿರ್ವಣವಾಗಿದ್ದವು. ಇದೇ ರೀತಿ ಸಾಕಷ್ಟು ಯೋಜನೆಗೆ ಯುಪಿಎ ಸರ್ಕಾರ ಅಡ್ಡಗಾಲಾಗಿತ್ತು. ಅಂತಹ ಕಾಮಗಾರಿ ಗಳನ್ನು ಈಗಿನ ಸರ್ಕಾರ ಪೂರೈಸುತ್ತಿದೆ ಎಂದು ಹೇಳಿದರು. ನವ ಭಾರತ ನಿರ್ವಣದ ಕನಸನ್ನು ವಾಜಪೇಯಿ ಹೊಂದಿದ್ದರು. ಅವರ ಕನಸನ್ನು ನನಸಾಗಿಸುವ ಜವಾಬ್ದಾರಿಯು ನಮ್ಮ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಮೋದಿ ಹೇಳಿದರು. ಬೋಗಿಬೀಲ್ ಸೇತುವೆಯ ಐತಿಹಾಸಿಕ ಕ್ರಮವಾಗಿದ್ದು, ಈಶಾನ್ಯ ಭಾರತಕ್ಕೆ ಹೊಸ ಸಂಪರ್ಕ ಕೊಂಡಿಯಾಗಲಿದೆ. ವಾಣಿಜ್ಯ ವಹಿವಾಟು ವಿಸ್ತರಣೆಗೆ ಸಹಾಯಕಾರಿಯಾಗಲಿದೆ. ಸಂಪೂರ್ಣ ಈಶಾನ್ಯ ಭಾರತದ ಅಭಿವೃದ್ಧಿಗೆ ಇದು ಪೂರಕವಾಗಲಿದೆ. ಇದಲ್ಲದೇ ಶೀಘ್ರದಲ್ಲೆ ಕೇಂದ್ರ ಸರ್ಕಾರ ಹೊಸದಾಗಿ 15 ರೈಲುಗಳನ್ನು ಈಶಾನ್ಯ ರಾಜ್ಯಗಳಿಗೆ ಬಿಡುತ್ತಿದೆ. ಈ ಹಿಂದಿನ ಎಲ್ಲ ಸರ್ಕಾರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಈಶಾನ್ಯ ಭಾರತದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

ಎಲ್ಲಿ: ಅಸ್ಸಾಂ ಹಾಗೂ ಅರುಣಾಚಲ ಪ್ರದೇಶವನ್ನು ಸಂರ್ಪಸಲು ಬೋಗಿಬೀಲ್​ನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡವಾಗಿ ನಿರ್ವಿುಸಲಾಗಿದೆ.

ಭಾರತದ ಪಾಲಿಗೆ ಇದೊಂದು ಐತಿಹಾಸಿಕ ದಿನ. ವಾಜಪೇಯಿ ಅವರು ಚಾಲನೆ ನೀಡಿದ್ದ ಯೋಜನೆಯನ್ನು ಅವರ ಹುಟ್ಟುಹಬ್ಬದ ದಿನದಂದು ಉದ್ಘಾಟಿಸಲಾಗಿದೆ. ಈ ಸೇತುವೆ ವಾಜಪೇಯಿ ದೂರದೃಷ್ಟಿಗೆ ಹಿಡಿದ ಕನ್ನಡಿಯಾಗಿದೆ.

| ನರೇಂದ್ರ ಮೋದಿ ಪ್ರಧಾನಿ

ಸೇತುವೆ ವಿಶೇಷ ಏನು?

# ಆಸ್ಸಾಂ ಹಾಗೂ ಅರುಣಾಚಲ ಪ್ರದೇಶವನ್ನು ಸಂರ್ಪಸುವ ಏಕೈಕ ಸೇತುವೆ.
# ಬ್ರಾಡ್​ಗೇಜ್ ರೈಲು ಹಾಗೂ ರಸ್ತೆ ಮೇಲ್ಸೇತುವೆ ಒಂದೇ ಮಾರ್ಗದಲ್ಲಿದೆ.
# ತುರ್ತು ಪರಿಸ್ಥಿಯಲ್ಲಿ ಸೇನೆಯ ವಿಮಾನಗಳನ್ನು ಕೂಡ ಈ ಸೇತುವೆ ಮೇಲೆ ಇಳಿಸಬಹುದು.
# ಚೀನಾ ಗಡಿ ತಲುಪಲು ಸೇನೆಗೆ ಇದು ಸುಲಭ ಮಾರ್ಗವಾಗಲಿದೆ.’
# ಅರುಣಾಚಲಪ್ರದೇಶ ಹಾಗೂ ಅಸ್ಸಾಂ ನಡುವಿನ ರೈಲ್ವೆ ಸಂಪರ್ಕ 500 ಕಿ.ಮೀ ನಿಂದ ಕೇವಲ 100 ಕಿ.ಮೀ ಇಳಿಯಲಿದೆ.
# ಅರುಣಾಚಲಪ್ರದೇಶದಿಂದ ದೆಹಲಿಗೆ ರೈಲ್ವೆ ಪ್ರಯಾಣ 3 ಗಂಟೆ ಕಡಿಮೆಯಾಗಲಿದೆ.
# ಈಶಾನ್ಯ ಭಾರತಕ್ಕೆ ರೈಲ್ವೆ ಸಂಪರ್ಕಕ್ಕೆ ಈ ಮಾರ್ಗ ನೆರವಾಗಲಿದ್ದು ಈಗಾಗಲೇ ಎರಡು ಹೊಸ ರೈಲು # ಘೋಷಿಸಲಾಗಿದೆ.
# ನೀರಿನ ಮಟ್ಟದಿಂದ 35 ಮೀಟರ್ ಎತ್ತರದಲ್ಲಿ ನಿರ್ವಿುಸಲಾಗಿರುವ ಈ ಸೇತುವೆಯನ್ನು ಶೇ.100 ವೆಲ್ಡ್ ಮಾಡಿ ನಿರ್ವಿುಸಲಾಗಿದೆ.
# ಸ್ವೀಡನ್ ಹಾಗೂ ಡೆನ್ಮಾರ್ಕ್ ತಂತ್ರಜ್ಞಾನ ಆಧರಿಸಿ ಸೇತುವೆ ನಿರ್ಮಾಣ ಮಾಡಿದ್ದು, ಅತಿ ಹಗುರವಾದ ಸೇತುವೆ ಇದಾಗಿದೆ.
# ಏಷ್ಯಾದ ಎರಡನೇ ಅತಿ ಉದ್ದದ ರೈಲ್ವೆ ಸೇತುವೆ ಇದು.