ಬೆಂಗಳೂರು: ಒಲಿಂಪಿಕ್ಸ್ ಕ್ರೀಡಾಕೂಟವನ್ನು 3ನೇ ಬಾರಿಗೆ ಯಶಸ್ವಿಯಾಗಿ ಆಯೋಜಿಸುವ ಮೂಲಕ ಜಗತ್ತಿನ ಗಮನ ಸೆಳೆದಿರುವ ಪ್ರೇಮನಗರಿ ಪ್ಯಾರಿಸ್ ಇದೀಗ ಮತ್ತೊಂದು ಮಹಾಕೂಟದ ಆತಿಥ್ಯ ವಹಿಸಲಿದೆ. ಆಗಸ್ಟ್ 28ರಿಂದ ಸೆಪ್ಟೆಂಬರ್ 8ರವರೆಗೆ ನಿಗದಿಯಾಗಿರುವ ಪ್ಯಾರಾಲಿಂಪಿಕ್ಸ್ ಕೂಟಕ್ಕೆ ್ರಾನ್ಸ್ ರಾಜಧಾನಿ ಪ್ಯಾರಿಸ್ ನಗರ ಸಜ್ಜುಗೊಂಡಿದೆ. ಕಳೆದ ಬಾರಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚು ಸೇರಿ ಒಟ್ಟು 19 ಪದಕ ಸಾಧನೆಯೊಂದಿಗೆ, ಕ್ರೀಡಾಕೂಟದ ಇತಿಹಾಸದಲ್ಲೇ ಅತ್ಯುತ್ತಮ ಪ್ರದರ್ಶನ ದಾಖಲಿಸಿದ್ದ ಭಾರತ ಈ ಬಾರಿ 84 ಪ್ಯಾರಾ ಅಥ್ಲೀಟ್‌ಗಳೊಂದಿಗೆ ಪ್ಯಾರಿಸ್‌ನಲ್ಲಿ ಕಣಕ್ಕಿಳಿಯಲಿದೆ. ಇದುವರೆಗಿನ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಗರಿಷ್ಠ ಕ್ರೀಡಾಪಟುಗಳ ತಂಡ ಇದಾಗಿದ್ದು, ಕನಿಷ್ಠ 25 ಪದಕಗಳ ನಿರೀಕ್ಷೆ ಇಡಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಚಿನ್ನದ ಪದಕ ಗೆಲ್ಲಲು ವಿಲರಾಗಿದ್ದರು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಆ ನಿರಾಸೆಯನ್ನು ಬದಿಗೊತ್ತಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡಬಹುದಾದ ಪ್ರಮುಖ ಕ್ರೀಡಾಪಟುಗಳ ಮಾಹಿತಿ ಇಲ್ಲಿದೆ
ಅವನಿ ಲೇಖರ, (ಪ್ಯಾರಾ ಶೂಟಿಂಗ್)
ಮಹಿಳಾ ಶೂಟರ್ ಮನು ಭಾಕರ್ ಒಲಿಂಪಿಕ್ಸ್‌ನಲ್ಲಿ ಅವಳಿ ಪದಕ ಗೆದ್ದ ಬಳಿಕ ಎಲ್ಲರ ಗಮನ ಪ್ಯಾರಾ ಶೂಟರ್ ಅವನಿ ಲೇಖರ ಕಡೆಗಿದೆ. ರಾಜಸ್ಥಾನದ ಅವನಿ ಟೋಕಿಯೊ ಗೇಮ್ಸ್‌ನ ಎಸ್‌ಎಚ್ 10 ಮೀಟರ್ ಏರ್ ರೈಲ್‌ನಲ್ಲಿ ಚಿನ್ನ ಹಾಗೂ 50 ಮೀಟರ್ ರೈಲ್‌ನಲ್ಲಿ ಕಂಚಿನ ಪದಕದೊಂದಿಗೆ ಒಂದೇ ಆವೃತ್ತಿಯಲ್ಲಿ ಅವಳಿ ಪದಕ ಜಯಿಸಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎನಿಸಿದ್ದರು. 22 ವರ್ಷದ ಅವನಿ ಕಳೆದ ಬಾರಿಯ ಪದಕ ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿದ್ದು, ಇವರಿಗೆ ಕರ್ನಾಟಕದ ಮಾಜಿ ಒಲಿಂಪಿಯನ್ ಶೂಟರ್ ಸುಮಾ ಶಿರೂರು ಮಾರ್ಗದರ್ಶನ ನೀಡುತ್ತಿದ್ದಾರೆ. 2022ರ ಏಷ್ಯನ್ ಪ್ಯಾರಾ ಗೇಮ್‌ನಲ್ಲೂ ಅವನಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ಶೀತಲ್ ದೇವಿ, (ಪ್ಯಾರಾ ಆರ್ಚರಿ)
ಎರಡು ಕೈಗಳಿಲ್ಲದ ಜಮ್ಮು-ಕಾಶ್ಮಿರದ 17 ವರ್ಷದ ಶೀತಲ್‌ಗೆ ಇದು ಮೊದಲ ಪ್ಯಾರಾಲಿಂಪಿಕ್ಸ್. ಪ್ರಸ್ತುತ ವಿಶ್ವ ನಂ.1 ಎನಿಸಿರುವ ಶೀತಲ್, 2022ರ ಏಷ್ಯನ್ ಪ್ಯಾರಾ ಗೇಮ್‌ನ ಮಿಶ್ರ ವಿಭಾಗ ಹಾಗೂ ಕಂಪೌಂಡ್ ವಿಭಾಗದಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ಜತೆಗೆ ಡಬಲ್ಸ್‌ನಲ್ಲಿ ರಜತವನ್ನೂ ಜಯಿಸಿದ್ದಾರೆ. 2023ರ ವಿಶ್ವ ಆರ್ಚರಿ ಪ್ಯಾರಾ ಚಾಂಪಿಯನ್‌ಷಿಪ್‌ನ ಕಂಪೌಂಡ್ ರಿಕರ್ವ್ ವಿಭಾಗದಲ್ಲಿ ಬೆಳ್ಳಿ ಜಯಿಸಿ, ಎರಡೂ ಕೈಗಳಿಲ್ಲದೆ ಪದಕ ಗೆದ್ದ ಮೊದಲ ಮಹಿಳಾ ಆರ್ಚರಿ ಪಟು ಎನಿಸಿದ್ದರು.
ಸುಮಿತ್ ಆಂತಿಲ್, (ಜಾವೆಲಿನ್ ಎಸೆತ)
ಟೋಕಿಯೊ ಗೇಮ್ಸ್‌ನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿರುವ ಪ್ಯಾರಾ ಜಾವೆಲಿನ್ ಎಸೆತಗಾರ ಸುಮಿತ್ ಆಂತಿಲ್. ಎ್ 64 ವಿಭಾಗದಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಎನಿಸಿರುವ 26 ವರ್ಷದ ಸುಮಿತ್, ಈ ಬಾರಿ ಪ್ಯಾರಿಸ್‌ನಲ್ಲಿ 75 ಮೀಟರ್ ದೂರದ ಎಸೆತದ ಗುರಿ ಹೊಂದಿದ್ದಾರೆ. 73.29 ಮೀಟರ್ ದೂರದ ಸುಮಿತ್ ಅವರ ಎಸೆತ ಪ್ರಸ್ತುತ ವಿಶ್ವ ದಾಖಲೆ ಎನಿಸಿದೆ. ಪ್ಯಾರಿಸ್‌ನಲ್ಲಿ ಭಾರತದ ಪುರುಷರ ಧ್ವಜಧಾರಿಯೂ ಆಗಿದ್ದಾರೆ.
ಸುಹಾಸ್ ಯತಿರಾಜ್,(ಪ್ಯಾರಾ ಷಟ್ಲರ್)
ಕರ್ನಾಟಕದ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್, ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್‌ಎಲ್-4 ವಿಭಾಗದಲ್ಲಿ ಕಳೆದ ಬಾರಿ ರಜತ ಪದಕ ಗೆದ್ದುಕೊಂಡಿದ್ದರು. ಅದನ್ನು ಈ ಬಾರಿ ಸ್ವರ್ಣವನ್ನಾಗಿಸುವ ಹಂಬಲದಲ್ಲಿದ್ದಾರೆ. ಸದ್ಯ ಉತ್ತರ ಪ್ರದೇಶದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ 41 ವರ್ಷದ ಸುಹಾಸ್, ವಿಶ್ವ ನಂ.1 ಷಟ್ಲರ್ ಎನಿಸಿದ್ದಾರೆ. ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಷಿಪ್‌ನ ಹಾಲಿ ಚಾಂಪಿಯನ್ ಆಗಿ ಸುಹಾಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಕೃಷ್ಣ ನಗರ್,(ಪ್ಯಾರಾ ಷಟ್ಲರ್)
ಜೈಪುರದ 25 ವರ್ಷದ ಷಟ್ಲರ್ ಕೃಷ್ಣ ನಗರ್ ಪ್ಯಾರಿಸ್‌ನಲ್ಲಿ ಸ್ವರ್ಣ ಪದಕ ಉಳಿಸಿಕೊಳ್ಳಲು ಕಣಕ್ಕಿಳಿಯಲಿದ್ದಾರೆ. ಪುರುಷರ ಸಿಂಗಲ್ಸ್ ಎಸ್‌ಎಚ್ 6 ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿರುವ ಕೃಷ್ಣ ನಗರ್, 2022ರ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ರಜತಕ್ಕೆ ತೃಪ್ತಿಪಟ್ಟಿದ್ದರು.
ಮರಿಯಪ್ಪನ್ ತಂಗವೇಲು,(ಹೈಜಂಪ್)
ಸತತ ಎರಡು ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಜಯಿಸಿರುವ ಮರಿಯಪ್ಪನ್ ತಂಗವೇಲು ಪುರುಷರ ಹೈ ಜಂಪ್ ಟಿ-63 ವಿಭಾಗದಲ್ಲಿ ಹ್ಯಾಟ್ರಿಕ್ ಪದಕ ಬೇಟೆಗೆ ಇಳಿಯಲಿದ್ದಾರೆ. ರಿಯೋ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದ 29 ವರ್ಷದ ಮರಿಯಪ್ಪನ್, ಟೋಕಿಯೊದಲ್ಲಿ ರಜತಕ್ಕೆ ಸಮಾಧಾನಪಟ್ಟಿದ್ದರು.ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ, ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಮಾನ್ಸಿ ಜೋಷಿ,(ಪ್ಯಾರಾ ಷಟ್ಲರ್)
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು, ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ ಮಾನ್ಸಿ ಜೋಷಿ, ಪ್ಯಾರಿಸ್‌ನಲ್ಲಿ ತನ್ನ ದಾಖಲೆಯನ್ನು ಉತ್ತಮ ಪಡಿಸಿಕೊಳ್ಳುವ ತವಕದಲ್ಲಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 7, ಏಷ್ಯನ್ ಗೇಮ್ಸ್‌ನಲ್ಲಿ 3 ಬಾರಿ ಪೋಡಿಯಂ ಏರಿರುವ 35 ವರ್ಷದ ಮಾನ್ಸಿ, ವಿಶ್ವ ರ‌್ಯಾಂಕಿಂಗ್‌ನಲ್ಲಿ ಸದ್ಯ ಅಗ್ರಸ್ಥಾನ ಹೊಂದಿದ್ದಾರೆ.
ಮನೀಷ್ ನರ್ವಾಲ್,(ಪ್ಯಾರಾ ಶೂಟರ್)
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಿಶ್ರ 50 ಮೀ. ಪಿಸ್ತೂಲ್ ಎಸ್‌ಎಚ್1 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಬೀಗಿದ್ದ ಹರಿಯಾಣದ ಮನೀಷ್ ನರ್ವಾಲ್ ಈ ಸಲ ಪ್ಯಾರಿಸ್‌ನಲ್ಲಿ 10 ಮೀ. ಏರ್ ಪಿಸ್ತೂಲ್ ಎಸ್‌ಎಚ್1 ವಿಭಾಗದಲ್ಲಿ ಅದನ್ನು ಮರುಕಳಿಸುವ ಹಂಬಲದಲ್ಲಿದ್ದಾರೆ. ಟೋಕಿಯೊದಲ್ಲಿ ವಿಶ್ವದಾಖಲೆಯನ್ನೂ ಬರೆದಿದ್ದ ಮನೀಷ್, 2021ರಲ್ಲಿ ಖೇಲ್‌ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು. ಅವರ ಸ್ಫೂರ್ತಿಯಲ್ಲಿ ಶೂಟಿಂಗ್ ಸ್ಪರ್ಧೆಗಿಳಿದ ಕಿರಿಯ ಸಹೋದರ ಶಿವ ನರ್ವಾಲ್ 2023ರ ಏಷ್ಯಾಡ್‌ನಲ್ಲಿ ಚಿನ್ನ ಗೆದ್ದಿದ್ದರು.