ಭಾರತದ ಮೊದಲ ಭಯೋತ್ಪಾದಕ ಹಿಂದು: ನಟ, ರಾಜಕಾರಣಿ ಕಮಲ್​ ಹಾಸನ್​​ರಿಂದ​ ವಿವಾದಾತ್ಮಕ ಹೇಳಿಕೆ​

ಅರವಕುರಿಚಿ(ತಮಿಳುನಾಡು): ಮಹಾತ್ಮ ಗಾಂಧೀಜಿಯನ್ನು ಗುಂಡಿಕ್ಕಿ ಕೊಂದ ನಾಥೂರಾಮ್​ ಗೂಡ್ಸೆ ಹೆಸರನ್ನು ಉಲ್ಲೇಖಿಸಿ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದು ಎಂದು ಹೇಳುವ ಮೂಲಕ ತಮಿಳುನಾಡಿನ ಮಕ್ಕಳ್​ ನಿಧಿ ಮಯ್ಯಂ ಪಕ್ಷದ ಸಂಸ್ಥಾಪಕ ಹಾಗೂ ನಟ ಕಮಲ್​ ಹಾಸನ್​ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಭಾನುವಾರ ರಾತ್ರಿ ಅರವಕುರಿಚಿಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು ಹೆಮ್ಮೆಯ ಭಾರತೀಯರಲ್ಲಿ ನಾನೂ ಒಬ್ಬನು. ಹಾಗೇ ಭಾರತದಲ್ಲಿ ಸಮಾನತೆಯನ್ನು ಹಾಗೂ ಭಾರತದ ಧ್ವಜದಲ್ಲಿರುವ ಮೂರು ಬಣ್ಣಗಳು ಸೂಚಿಸುವ ವಿವಿಧ ಸಂಕೇತಗಳು ಹಾಗೇ ಉಳಿಯಬೇಕೆಂದು ಅಪೇಕ್ಷಿಸುವವರಲ್ಲಿ ನಾನು ಒಬ್ಬನು ಎಂದು ತಿಳಿಸಿದರು.

ಮುಂದುವರಿದು ಮಾತನಾಡಿದ ಅವರು, ಮುಸ್ಲಿಂ ಸಮುದಾಯದವರು ಈ ಪ್ರದೇಶದಲ್ಲಿ ಹೆಚ್ಚಿದ್ದಾರೆ ಎಂದು ನಾನಿದ್ದನ್ನು ಹೇಳುತ್ತಿಲ್ಲ. ಆದರೆ, ಮಹಾತ್ಮ ಗಾಂಧೀಜಿ ಪ್ರತಿಮೆ ಮುಂದೆ ನಿಂತು ಹೇಳುತ್ತಿದ್ದೇನೆ. ಈ ಮುಕ್ತ ಭಾರತದ ಮೊದಲ ಭಯೋತ್ಪಾದಕ ಹಿಂದು. ಅವನ ಹೆಸರು ನಾಥೂರಾಮ್​ ಗೂಡ್ಸೆ. ಅಲ್ಲಿಂದಲೇ ಭಯೋತ್ಪಾದನೆ ಪ್ರಾರಂಭವಾಯಿತು ಎಂದರು. 1948ರಲ್ಲಿ ನಡೆದ ಗಾಂಧಿ ಹತ್ಯೆಗೆ ಕಾರಣ ಹುಡುಕಿಕೊಂಡು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಇದೇ ವೇಳೆ ಹೇಳಿದರು.

ಈ ಮೊದಲು ಕೂಡ ಕಮಲ್​ ಹಾಸನ್​ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ನವೆಂಬರ್​ 2017ರಲ್ಲಿ ಟೀಕಿಸುವ ಭರದಲ್ಲಿ ಹಿಂದು ಉಗ್ರಗಾಮಿ ಎಂಬ ಪದ ಬಳಸಿ ವಿವಾದ ಸೃಷ್ಟಿ ಮಾಡಿದ್ದರು. ಈ ಹೇಳಿಕೆಗೆ ಬಿಜೆಪಿ ಹಾಗೂ ಹಿಂದು ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು.

ಮೇ 19ರಂದು ತಮಿಳುನಾಡಿನ ನಾಲ್ಕು ಕ್ಷೇತ್ರಗಳಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಅರವಕುರಿಚಿ ಕ್ಷೇತ್ರವೂ ಒಂದು. ಈ ಕ್ಷೇತ್ರದಿಂದ ಮಕ್ಕಳ್​ ನಿಧಿ ಮಯ್ಯಂ ಪಕ್ಷದಿಂದ ಮೋಹನ್​ರಾಜ್​ ಎಂಬುವರು ಕಣಕ್ಕಿಳಿದಿದ್ದು, ಅವರ ಪರ ಕಮಲ್​ ಹಾಸನ್​ ಭಾನುವಾರ ರಾತ್ರಿ ಪ್ರಚಾರ ನಡೆಸಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *