ಹಳಿಗಿಳಿದ ಒಂದೇ ದಿನದಲ್ಲೇ ಕೆಟ್ಟು ನಿಂತಿತು ದೇಶದ ಅತ್ಯಂತ ವೇಗದ ‘ವಂದೇ ಭಾರತ್’ ರೈಲು

ನವದೆಹಲಿ: ದೇಶದ ಅತ್ಯಂತ ವೇಗದ ರೈಲು ಎಂಬ ಖ್ಯಾತಿಗೆ ಪಾತ್ರವಾಗಿರುವ ‘ವಂದೇ ಭಾರತ್​’ (ಟ್ರೈನ್​ 18) ರೈಲು ಹಳಿಗಿಳಿದ ಒಂದೇ ದಿನದಲ್ಲೇ ಕೆಟ್ಟು ನಿಂತಿದೆ.

ಎಂಜಿನ್​ ರಹಿತವಾಗಿರುವ ವಂದೇ ಭಾರತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಿದ್ದರು. ಅಲ್ಲಿಂದ ವಾರಾಣಸಿಗೆ ತೆರಳಿದ್ದ ವಂದೇ ಭಾರತ್​, ಮರಳಿ ದೆಹಲಿಗೆ ಬರುತ್ತಿದ್ದಾಗ ಮಾರ್ಗ ಮಧ್ಯೆ ಕೆಟ್ಟು ನಿಂತಿದೆ. ಸದ್ಯ ರೈಲು ನವದೆಹಲಿಗಿಂತಲೂ 200 ಕಿ.ಮೀಗಳ ಹಿಂದೆ ಉಳಿದಿದೆ.

” ರೈಲಿನ ಸಮಸ್ಯೆ ನಿಯಂತ್ರಣಕ್ಕೆ ಸಿಕ್ಕಿಲ್ಲ. ಸದ್ಯ ಅದನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಒಂದು ವೇಳೆ ನಾವು ಈಗ ದುರಸ್ತಿ ಮಾಡಿದರು. ರೈಲು ಗಂಟೆಗೆ 40 ಕಿ.ಮೀಗಿಂತಲೂ ಹೆಚ್ಚು ವೇಗದಲ್ಲಿ ಸಾಗಲು ಸಾಧ್ಯವಿಲ್ಲ,” ಎಂದು ರೈಲಿನ ಎಂಜಿನಿಯರ್​ಗಳು ಮಾಹಿತಿ ನೀಡಿದ್ದಾರೆ.

ವಂದೇ ಭಾರತ್​ನಲ್ಲಿದ್ದ ಪ್ರಯಾಣಿಕರನ್ನು ಸದ್ಯ ಬೇರೆ ಎರಡು ರೈಲುಗಳಲ್ಲಿ ಕಳುಹಿಸಿಕೊಡುವ ವ್ಯವಸ್ಥೆಯಾಗಿದೆ.

ಗಂಟೆಗೆ 180 ಕಿ.ಮೀ ವೇಗದಲ್ಲಿ ಸಾಗಬಲ್ಲ ಸಾಮರ್ಥ್ಯ ಹೊಂದಿರುವ ವಂದೇ ಭಾರತ್​ ರೈಲು ದೆಹಲಿಯಲ್ಲಿ ನಿನ್ನೆಯಷ್ಟೇ ಉದ್ಘಾಟನೆಗೊಂಡಿದ್ದು, 130 ಕಿ.ಮೀ ವೇಗದಲ್ಲಿ ಸಂಚಾರ ನಡೆಸಿದೆ.

ಇನ್ನು ಈ ಕುರಿತು ಅಧಿಕೃತವಾಗಿ ಪ್ರತಿಕ್ರಿಯೆ ನೀಡಿರುವ ರೈಲ್ವೆ ಇಲಾಖೆ, ವಂದೇ ಭಾರತ್​ ರೈಲು ಸದ್ಯ ಟುಂಡ್ಲಾ ನಿಲ್ದಾಣಕ್ಕೂ 16 ಕಿ.ಮೀ ಹಿಂದೆ ಬೆಳಗ್ಗೆ 6.30ರಿಂದ ಕೆಟ್ಟು ನಿಂತಿದೆ. ಹಳಿಯ ಮೇಲೆ ಜಾನುವಾರುಗಳು ಒಡಾಡುತ್ತಿದ್ದಾಗ ಏನೋ ಅವಘಡ ಸಂಭವಿಸಿದಂತಿದೆ. ಹೀಗಾಗಿ ರೈಲು ಕೆಟ್ಟಿದೆ. ಅದೂ ಅಲ್ಲದೆ, ಇದು ಪ್ರಾಯೋಗಿಕ ಸಂಚಾರ. ಸಮಸ್ಯೆ ಸರಿಪಡಿಸಿದ ನಂತರ ಫೆ. 17ರಿಂದ ವಾಣಿಜ್ಯ ಸಂಚಾರ ನಡೆಸಲಿದೆ ಎಂದು ತಿಳಿಸಿದೆ.