ಲಾರ್ಡ್ಸ್ ವಿಜಯ

ಮತ್ತೊಮ್ಮೆ ಮಿಂಚಿದ ಕಪಿಲ್ ಡೆವಿಲ್ಸ್

1983ರ ಜೂನ್ 25ರಂದು ಲಾರ್ಡ್ಸ್ ನೆಲದಲ್ಲಿ 2 ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದು ವಿಶ್ವಕಪ್ ಎತ್ತಿಹಿಡಿದಿತ್ತು ಕಪಿಲ್ ಡೆವಿಲ್ಸ್. ಅದಾದ ಮೂರು ವರ್ಷಗಳ ಬಳಿಕ ಆಡಿದ ಟೆಸ್ಟ್ ಪಂದ್ಯದಲ್ಲಿ ಕಪಿಲ್ ದೇವ್ ಸಾರಥ್ಯದಲ್ಲಿಯೇ ಭಾರತ ತಂಡ ಮೊಟ್ಟಮೊದಲ ಲಾರ್ಡ್ಸ್ ಟೆಸ್ಟ್ ವಿಜಯ ದಾಖಲು ಮಾಡಿತ್ತು. 1986ರ ಜೂನ್ 5ರಿಂದ 10ರವರೆಗೆ ನಡೆದ ಈ ಪಂದ್ಯದಲ್ಲಿ ಭಾರತ 5 ವಿಕೆಟ್​ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ಅದಕ್ಕೂ ಮುನ್ನ ಕ್ರಿಕೆಟ್ ಕಾಶಿಯಲ್ಲಿ ಆಡಿದ 10 ಪಂದ್ಯಗಳ ಪೈಕಿ 2ರಲ್ಲಿ ಡ್ರಾ ಕಂಡಿದ್ದೇ ದೊಡ್ಡ ಸಾಧನೆಯಾಗಿತ್ತು.

ಪಂದ್ಯ ಹೇಗಿತ್ತು?: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್, ಗ್ರಹಾಂ ಗೂಚ್ (114) ಶತಕದ ಹೊರತಾಗಿಯೂ ಚೇತನ್ ಶರ್ಮ (64ಕ್ಕೆ 5) ಹಾಗೂ ರೋಜರ್ ಬಿನ್ನಿ (55ಕ್ಕೆ 3) ದಾಳಿಗೆ ಮಂಕಾಗಿ 294 ರನ್​ಗೆ ಆಲೌಟ್ ಆಗಿತ್ತು. ಪ್ರತಿಯಾಗಿ ದಿಲೀಪ್ ವೆಂಗ್ಸರ್ಕಾರ್ (126) ಲಾರ್ಡ್ಸ್​ನಲ್ಲಿ ಬಾರಿಸಿದ ಸತತ 3ನೇ ಟೆಸ್ಟ್ ಶತಕ, ಮೊಹಿಂದರ್ ಅಮರ್​ನಾಥ್ (69) ಅರ್ಧಶತಕ ಹಾಗೂ ಕೊನೆಯಲ್ಲಿ ಪದಾರ್ಪಣಾ ಪಂದ್ಯವಾಡಿದ್ದ ಕಿರಣ್ ಮೋರೆ (25) ಬಾರಿಸಿದ ಉಪಯುಕ್ತ ರನ್​ಗಳಿಂದ 341ಕ್ಕೆ ಆಲೌಟ್ ಆದ ಭಾರತ ಅಮೂಲ್ಯ 47 ರನ್ ಮುನ್ನಡೆ ಕಂಡಿತ್ತು. 2ನೇ ಇನಿಂಗ್ಸ್​ನಲ್ಲಿ ಕಪಿಲ್ ದೇವ್ (52ಕ್ಕೆ 4) ಹಾಗೂ ಮಣಿಂದರ್ ಸಿಂಗ್ (9ಕ್ಕೆ 3) ದಾಳಿಗೆ ಕುಗ್ಗಿದ ಇಂಗ್ಲೆಂಡ್ 180 ರನ್​ಗೆ ಆಲೌಟ್ ಆಯಿತು. ಮೈಕ್ ಗ್ಯಾಟಿಂಗ್ ಉಪಯುಕ್ತ 40 ರನ್ ಬಾರಿಸಿದ್ದರು. 134 ರನ್ ಗುರಿ ಪಡೆದ ಭಾರತ ಅದಾಗಲೇ ಗೆಲುವಿನ ಸೂಚನೆ ಅರಿತಿತ್ತು. ಆರಂಭಿಕರಾದ ಸುನೀಲ್ ಗಾವಸ್ಕರ್ (22) ಹಾಗೂ ಕೆ.ಶ್ರೀಕಾಂತ್​ರನ್ನು (0) 31 ರನ್ ಬಾರಿಸುವ ಮುನ್ನವೇ ಕಳೆದುಕೊಂಡು ಆಘಾತ ಎದುರಿಸಿದ್ದ ಭಾರತ, ದಿಲೀಪ್ ವೆಂಗ್ಸರ್ಕಾರ್ (33), ಮೊಹಮದ್ ಅಜುರುದ್ದೀನ್ (14), ರವಿಶಾಸ್ತ್ರಿ (20*) ಹಾಗೂ ಕಪಿಲ್ ದೇವ್(23*) ನೆರವಿನಿಂದ 42 ಓವರ್​ಗಳಲ್ಲಿ 5 ವಿಕೆಟ್​ಗೆ 136 ರನ್ ಬಾರಿಸಿ ಗೆಲುವು ಕಂಡಿತು. ಅಂದು ಕ್ರೀಡಾಜಗತ್ತಿನಲ್ಲಿ ಅರ್ಜೆಂಟೀನಾ ತಂಡದ ಫುಟ್​ಬಾಲ್ ವಿಶ್ವಕಪ್ ಗೆಲುವು, ಡೀಗೋ ಮರಡೋನಾದ ಹ್ಯಾಂಡ್ ಆಫ್ ಗಾಡ್ ಎಷ್ಟು ಸುದ್ದಿಯಾಗಿತ್ತೋ ಅದೇಮಟ್ಟಕ್ಕೆ ಭಾರತದ ಲಾರ್ಡ್ಸ್ ಗೆಲುವು ಸುದ್ದಿ ಮಾಡಿತ್ತು.

ಆಡಿದ್ದು 17 ಟೆಸ್ಟ್, ಗೆದ್ದಿದ್ದು 2

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ 2ನೇ ಪಂದ್ಯ, ಕ್ರಿಕೆಟ್ ಕಾಶಿ ಲಾರ್ಡ್ಸ್​ನಲ್ಲಿ ಗುರುವಾರ ಆರಂಭವಾಗಲಿದೆ. ಈವರೆಗೂ ವಿಶ್ವದಾಖಲೆಯ 136 ಟೆಸ್ಟ್ ಪಂದ್ಯಗಳಿಗೆ ಆತಿಥ್ಯ ವಹಿಸಿಕೊಂಡಿರುವ ಐತಿಹಾಸಿಕ ಲಾರ್ಡ್ಸ್ ಸ್ಟೇಡಿಯಂಗೆ ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ಸ್ಥಾನವಿದೆ. ಅಂಥದ್ದೊಂದು ಸ್ಥಾನವನ್ನು ಭಾರತೀಯ ಕ್ರಿಕೆಟ್ ಕೂಡ ಲಾರ್ಡ್ಸ್ ಸ್ಟೇಡಿಯಂಗೂ ನೀಡಿದೆ. ಅದಕ್ಕೆ ಕಾರಣವೆಂದರೆ, ಇದೇ ಮೈದಾನದಲ್ಲಿ ಭಾರತ ತನ್ನ ಮೊಟ್ಟಮೊದಲ ಟೆಸ್ಟ್ ಪಂದ್ಯವಾಡಿದೆ. ಅಲ್ಲದೆ, ಭಾರತದ ಹೊರಗೆ ತಂಡ ಗರಿಷ್ಠ ಟೆಸ್ಟ್ ಆಡಿರುವ ಸ್ಟೇಡಿಯಂ ಕೂಡ ಇದಾಗಿದೆ. 1983ರಲ್ಲಿ ಭಾರತ ಇದೇ ನೆಲದಲ್ಲಿ ಮೊಟ್ಟಮೊದಲ ಬಾರಿಗೆ ಏಕದಿನ ಕ್ರಿಕೆಟ್​ನ ವಿಶ್ವ ಚಾಂಪಿಯನ್ ಪಟ್ಟವೇರಿತ್ತು. ಆಧುನಿಕ ಭಾರತೀಯ ಕ್ರಿಕೆಟ್​ನ ಚಹರೆಯನ್ನೇ ಬದಲಿಸಿದ 2002ರ ನಾಟ್​ವೆಸ್ಟ್ ಸರಣಿಯ ಫೈನಲ್ ಗೆಲುವು ಕಂಡ ಸ್ಥಳವೂ ಇದಾಗಿದೆ. ಇಂಥ ಸ್ಟೇಡಿಯಂನಲ್ಲಿ ಭಾರತ ಈವರೆಗೂ 17 ಟೆಸ್ಟ್ ಆಡಿದ್ದು, 4 ಪಂದ್ಯಗಳಲ್ಲಿ ಡ್ರಾ ಫಲಿ ತಾಂಶ ಕಂಡಿದ್ದರೆ, 2ರಲ್ಲಿ ಜಯ ಸಾಧಿಸಿದೆ. ಈ ಎರಡು ಸ್ಮರಣೀಯ ಪಂದ್ಯಗಳ ಹಿನ್ನೋಟ ಇಲ್ಲಿದೆ…

ರಹಾನೆ, ಇಶಾಂತ್ ಮಾಸ್ಟರ್​ಕ್ಲಾಸ್

2011ರ ಜೂನ್ 20ರಂದು ಕಿಂಗ್​ಸ್ಟನ್ ಟೆಸ್ಟ್​ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಬಳಿಕ ಭಾರತ ತಂಡ ವಿದೇಶದಲ್ಲಿ ಆಡಿದ 15 ಟೆಸ್ಟ್ ಗಳಲ್ಲಿ ಗೆಲುವನ್ನೇ ಕಂಡಿರಲಿಲ್ಲ. ಈ ಕಳಪೆ ದಾಖಲೆಯನ್ನು ಅಂತ್ಯ ಮಾಡಿದ್ದು, 2014ರಲ್ಲಿ ಜೂನ್ 17ರಿಂದ 21ರವರೆಗೆ ನಡೆದ ಲಾರ್ಡ್ಸ್ ಟೆಸ್ಟ್. ಇಶಾಂತ್ ಶರ್ಮ ಹಾಗೂ ಅಜಿಂಕ್ಯ ರಹಾನೆಯ ಮಾಸ್ಟರ್​ಕ್ಲಾಸ್ ನಿರ್ವಹಣೆ, ಇದೇ ಮೈದಾನದಲ್ಲಿ ಭಾರತಕ್ಕೆ 5 ಟೆಸ್ಟ್​ಗಳ ಬಳಿಕ ಗೆಲುವು ತಂದುಕೊಟ್ಟಿತ್ತು. 1986 ಹಾಗೂ 2014ರ ಗೆಲುವಿನ ನಡುವೆ ಲಾರ್ಡ್ಸ್​ನಲ್ಲಿ ಭಾರತ ಆಡಿದ ಈ 5 ಪಂದ್ಯಗಳ ಪೈಕಿ, 2 ಡ್ರಾ ಕಂಡಿದ್ದರೆ, 3 ಪಂದ್ಯಗಳಲ್ಲಿ ಭಾರತ 170 ಹಾಗೂ ಅದಕ್ಕಿಂತ ಹೆಚ್ಚಿನ ಅಂತರದ ಸೋಲು ಕಂಡಿತ್ತು.

ಪಂದ್ಯ ಹೇಗಿತ್ತು?: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಜೇಮ್್ಸ ಆಂಡರ್​ಸನ್ (60ಕ್ಕೆ 4) ನೇತೃತ್ವದ ಬೌಲಿಂಗ್ ವಿಭಾಗ ಬಿಸಿ ಮುಟ್ಟಿಸಿತ್ತು. 145 ರನ್​ಗೆ 7 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿದ್ದ ತಂಡವನ್ನು ಕಾಪಾಡಿದ್ದು ಅಜಿಂಕ್ಯ ರಹಾನೆ (103) ಶತಕ ಹಾಗೂ ಭುವನೇಶ್ವರ್ ಕುಮಾರ್, 101 ಎಸೆತಗಳಲ್ಲಿ ಆಡಿದ 36 ರನ್. ಕೊನೆಯ ಮೂರು ವಿಕೆಟ್​ಗಳಿಂದ ಭಾರತ 150 ರನ್ ಸೇರಿಸಿ 295ಕ್ಕೆ ಆಲೌಟ್ ಆಗಿತ್ತು. ಬಳಿಕ ಭುವನೇಶ್ವರ್ ಕುಮಾರ್ (82ಕ್ಕೆ 6) ನೇತೃತ್ವದಲ್ಲಿ ಭಾರತವೂ ಭರ್ಜರಿ ದಾಳಿ ನಡೆಸಿತಾದರೂ, ಗ್ಯಾರಿ ಬ್ಯಾಲೆನ್ಸ್ (110) ಶತಕ ಹಾಗೂ ಲಿಯಾಮ್ ಪ್ಲಂಕೆಟ್ (55) ಅರ್ಧಶತಕದಿಂದ ಇಂಗ್ಲೆಂಡ್ 319ಕ್ಕೆ ಆಲೌಟ್ ಆಗಿ 24 ರನ್ ಮುನ್ನಡೆ ಕಂಡಿತು. 2ನೇ ಇನಿಂಗ್ಸ್​ನಲ್ಲಿ ಸಂಘಟಿತ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಮುರಳಿ ವಿಜಯ್ (95), ರವೀಂದ್ರ ಜಡೇಜಾ (68) ಹಾಗೂ ಭುವನೇಶ್ವರ್ ಕುಮಾರ್ (52) ಅರ್ಧಶತಕಗಳಿಂದ 103.1 ಓವರ್ ಆಟವಾಡಿ 342 ರನ್​ಗೆ ಆಲೌಟ್ ಆಯಿತು. ಗೆಲುವಿಗೆ 319 ರನ್​ಗಳ ಸವಾಲು ಪಡೆದಿದ್ದ ಇಂಗ್ಲೆಂಡ್, ಇಶಾಂತ್ ಶರ್ಮ (74ಕ್ಕೆ 7), ದಾಳಿಗೆ ಕುಸಿದು 223 ರನ್​ಗೆ ಆಲೌಟ್ ಆಯಿತು. ಆ ಮೂಲಕ ಭಾರತ 95 ರನ್​ಗಳ ಸ್ಮರಣೀಯ ಲಾರ್ಡ್ಸ್ ವಿಜಯ ಸಾಧಿಸಿತ್ತು. ನಾಟಿಂಗ್​ಹ್ಯಾಂನಲ್ಲಿ ಡ್ರಾ ಹಾಗೂ ಲಾರ್ಡ್ಸ್​ನಲ್ಲಿ ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉತ್ತಮ ಆರಂಭ ಕಂಡಿದ್ದ ಭಾರತ, ನಂತರದ ಮೂರೂ ಪಂದ್ಯಗಳಲ್ಲಿ ದೊಡ್ಡ ಅಂತರದ ಸೋಲು ಕಂಡು 1-3ರಿಂದ ಸರಣಿ ಮುಗಿಸಿತು.

ಕ್ರಿಕೆಟ್ ಕಾಶಿಯಲ್ಲಿ ಈವರೆಗೂ ಭಾರತದ 11 ಬ್ಯಾಟ್ಸ್​ಮನ್​ಗಳು ಶತಕ ಬಾರಿಸಿದ್ದಾರೆ. ದಿಲೀಪ್ ವೆಂಗ್ಸರ್ಕಾರ್ ಗರಿಷ್ಠ 3 ಬಾರಿ ಲಾರ್ಡ್ಸ್​ನಲ್ಲಿ ಶತಕ ಸಿಡಿಸಿದ್ದಾರೆ. 1952ರಲ್ಲಿ ವಿನೂ ಮಂಕಡ್ 182 ರನ್ ಬಾರಿಸಿರುವುದು ಈ ಮೈದಾನದಲ್ಲಿ ಭಾರತೀಯ ಬ್ಯಾಟ್ಸ್​ಮನ್​ನ ಗರಿಷ್ಠ ಮೊತ್ತ. ದಿಗ್ಗಜ ಬ್ಯಾಟ್ಸ್​ಮನ್ ಸಚಿನ್ ತೆಂಡುಲ್ಕರ್, ಶತಕ ಸಿಡಿಸಲು ಸಾಧ್ಯವಾಗದ ಅಪರೂಪದ ಮೈದಾನಗಳಲ್ಲಿ ಇದೂ ಒಂದು.