ಲಯನ್​​ ಏರ್​ ಪತನ: ವಿಮಾನದಲ್ಲಿ ಕ್ಯಾಪ್ಟನ್ ಆಗಿದ್ದ ಭಾರತೀಯನ​ ದುರಂತ ಸಾವು

ಜಕಾರ್ತ: ಸೋಮವಾರ ಬೆಳಗ್ಗೆ ಇಂಡೋನೇಷ್ಯಾ ರಾಜಧಾನಿ ಜಕಾರ್ತದಿಂದ ಟೇಕ್​​ ಆಫ್ ಆದ​ ಕೆಲವೇ ಕ್ಷಣಗಳಲ್ಲಿ ನಾಪತ್ತೆಯಾಗಿ ಸಮುದ್ರದಲ್ಲಿ ಪತನಗೊಂಡ ಲಯನ್​ ವಿಮಾನದಲ್ಲಿ ಕ್ಯಾಪ್ಟನ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ಭಾವೀ ಸುನೆಜಾ ಅವರು ಮೃತಪಟ್ಟಿದ್ದಾರೆಂದು ಜಕಾರ್ತದಲ್ಲಿನ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ.

ಲಿಂಕ್​​ಡಿನ್​ ಪ್ರೊಫೈಲ್​ ಪ್ರಕಾರ ಸುನೆಜಾ ಅವರು 2011ರಿಂದ ಲಯನ್​ ಏರ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದಕ್ಕೂ ಹಿಂದೆ ಎಮಿರೇಟ್ಸ್​ ವಿಮಾನ ಸಂಸ್ಥೆಯಲ್ಲಿ ತರಬೇತಿ ಪೈಲಟ್ ಆಗಿದ್ದರು. ದೆಹಲಿ ಮೂಲದ ಸುನೆಜಾ ಅವರು ಪೂರ್ವ ದೆಹಲಿಯ ಮಯೂರ್​ ವಿಹಾರದಲ್ಲಿನ ಅಹ್ಲ್ಕಾನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ.

ಭಾವೀ ಸುನೆಜಾ ಅವರು ನನ್ನ ಸ್ನೇಹಿತನ ಸೋದರಿಯನ್ನು ಮದುವೆಯಾಗಿದ್ದರು. ಇಂದು ಅವರು ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಕೇಳಿ ತುಂಬಾ ನೋವಾಯಿತು ಎಂದು ವ್ಯಕ್ತಿಯೊಬ್ಬರು ಟ್ವೀಟ್​ ಮಾಡಿದ್ದಾರೆ.

ಇಂದು ಬೆಳಗ್ಗೆ ಇಂಡೋನೇಷ್ಯಾ ರಾಜಧಾನಿ ಜಕಾರ್ತದಿಂದ ಬ್ಯಾಂಗ್ಕಾ ದ್ವೀಪದ ಪ್ರಮುಖ ನಗರ ಪಂಗ್ಕಲ್ ಪಿನಾಂಗ್ ಕಡೆ ಹೊರಟ್ಟಿದ್ದ ಲಯನ್​ ವಿಮಾನ ಟೇಕ್​ ಆಫ್​ ಆದ 13 ನಿಮಿಷಗಳಲ್ಲಿ ನಾಪತ್ತೆಯಾಗಿ, ಸಮುದ್ರದಲ್ಲಿ ಪತನವಾಗಿದೆ. ವಿಮಾನದಲ್ಲಿ ಸುಮಾರು 189 ಮಂದಿ ಪ್ರಯಾಣಿಸುತ್ತಿದ್ದರು. (ಏಜೆನ್ಸೀಸ್​)

ಜಕಾರ್ತದಿಂದ ಟೇಕ್​ ಆಫ್​ ಆದ ಕೆಲವೇ ನಿಮಿಷಗಳಲ್ಲಿ ಲಯನ್​ ವಿಮಾನ ನಾಪತ್ತೆ: ಸಮುದ್ರದಲ್ಲಿ ಪತನ