ವಿಜಯಪುರ: ಗುಜರಾತ್‌ನ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಸುಮಾರು 24 ವರ್ಷಗಳ ಕಾಲ ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಕಳಂಕ ರಹಿತ ಆಡಳಿತ ನಡೆಸುವ ಮೂಲಕ ನರೇಂದ್ರ ಮೋದಿ ಭಾರತದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದಾರೆಂದು ಸಂಸದ ಗೋವಿಂದ ಕಾರಜೋಳ ಹೆಮ್ಮೆ ವ್ಯಕ್ತಪಡಿಸಿದರು.
ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ, ರಾಜಮನೆತನದಿಂದ ಬರದ ನರೇಂದ್ರ ಮೋದಿ ಪ್ರಧಾನಿಯಾಗಲು ಈ ದೇಶದ ಸಂವಿಧಾನವೇ ಕಾರಣ. ಹೀಗೆಂದು ಹೇಳಿದವರೇ ನರೇಂದ್ರ ಮೋದಿ. ಪ್ರಧಾನಿಯಾದ ಹೊಸದರಲ್ಲಿ ಸಂಸತ್ ಪ್ರವೇಶಿಸುವಾಗ ಸಂವಿಧಾನಕ್ಕೆ ಹಣೆಮಡಿದು ನಮಸ್ಕರಿಸಿದ ಮೋದಿ ಅವರು ಚಹಾ ಮಾರುವ ವ್ಯಕ್ತಿಯೂ ದೇಶದ ಪ್ರಧಾನಿ ಹುದ್ದೆ ಅಲಂಕರಿಸುವಂತೆ ಮಾಡಿದ್ದು ಈ ದೇಶದ ಸಂವಿಧಾನ ಎಂದು ಬಣ್ಣಿಸಿದ್ದರೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಾರಜೋಳ ತಿಳಿಸಿದರು.
ಸಂವಿಧಾನ ಬಲಿಷ್ಠಗೊಳಿಸಲು ಶ್ರಮಿಸಿದ ಧೀಮಂತ ನಾಯಕ ಮೋದಿ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಿಕ ಮನ್ನಣೆ ನೀಡಿದ ಮೋದಿ ಅವರ ಸಚಿವ ಸಂಪುಟದಲ್ಲಿ ಶೇ.60 ಕ್ಕೂ ಹೆಚ್ಚು ಎಸ್‌ಸಿ-ಎಸ್‌ಟಿ ಮತ್ತು ಹಿಂದುಳಿದ ಸಮುದಾಯದ ಸಚಿವರಿದ್ದಾರೆ. ಭಾರತೀಯ ಸೈನ್ಯವನ್ನು ಬಲಿಷ್ಠಗೊಳಿಸಿದ್ದಲ್ಲದೇ ಭಾರತವನ್ನು ಪ್ರಪಂಚದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಳ್ಳುವಂತೆ ಮಾಡಿದರು. ಶೀಘ್ರದಲ್ಲೇ ಭಾರತ ಮೂರನೇ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದರು.
ವಿಕಸಿತ ಭಾರತ ಅಭಿಯಾನ, ಜನಧನ್ ಯೋಜನೆಯಡಿ ಶೂನ್ಯದರದಲ್ಲಿ 50.22 ಕೋಟಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಮೋದಿ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದಾರೆ. ವಿಶ್ವಕರ್ಮ ಯೋಜನೆಯಡಿ ಮೂರು ಲಕ್ಷವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಮನೆಯಿಲ್ಲದವರಿಗೆ ನಾಲ್ಕು ಕೋಟಿ ಮನೆ ಕಟ್ಟಿಸಿಕೊಟ್ಟಿದ್ದಾರೆ. 81 ಕೋಟಿ ಜನರಿಗೆ ಐದು ಕೆಜಿ ಅಕ್ಕಿ ಕೊಡುತ್ತಿದ್ದಾರೆ. 15 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮನೆ ಮನೆಗೆ ಶೌಚಗೃಹ ನಿರ್ಮಾಣ ಮಾಡಿದ್ದು, ಒಟ್ಟು 12 ಕೋಟಿ ಶೌಚಗೃಹ ನಿರ್ಮಿಸಲಾಗಿದೆ ಎಂದರು.
ಸೌಭಾಗ್ಯ ಯೋಜನೆಯಡಿ ಮನೆ ವಿದ್ಯುತ್ತೀಕರಣ ಮಾಡಿದ್ದಾರೆ. ಕೇವಲ ಒಂದೇ ವರ್ಷದಲ್ಲಿ 18 ಸಾವಿರ ಹಳ್ಳಿಗಳ ವಿದ್ಯುತ್ತೀಕರಣ ಮಾಡಿದ್ದಾರೆ. ಪಿಎಂ ಮುದ್ರಾ ಯೋಜನೆಯಡಿ 33 ಕೋಟಿ ಸಾಲ ಸೌಲಭ್ಯ, ಕಿಸಾನ್ ಸಮ್ಮಾನ್ ಯೋಜನೆಯಡಿ 11 ಕೋಟಿ ರೈತರಿಗೆ ಆರು ಸಾವಿರ ರೂಪಾಯಿ ಸಹಾಯಧನ, ಕಿಸಾನ್ ಕ್ರೆಡಿಟ್ ಸಾಲದ ಮೊತ್ತ ಐದು ಲಕ್ಷ ರೂಪಾಯಿಗೆ ಹೆಚ್ಚಿಸಿದ್ದಾರೆ. ಕೃಷಿ ಆಧುನೀಕರಣಕ್ಕೆ ಲಕ್ಷ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ ಎಂದರು.
ಹೊಸ ವೈದ್ಯಕೀಯ ಕಾಲೇಜ್‌ಗಳು, ವಿಶ್ವ ವಿದ್ಯಾಲಯಗಳನ್ನು ಆರಂಭಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿರುವ ಮೋದಿ ಸರ್ಕಾರ, ಜನೌಷಧ ಕೇಂದ್ರಗಳ ಮೂಲಕ ಬಡವರಿಗೆ ನೆರವಾಗಿದ್ದಾರೆ. 74 ರಷ್ಟಿದ್ದ ವಿಮಾನ ನಿಲ್ದಾಣಗಳ ಸಂಖ್ಯೆ 160ಕ್ಕೆ ಹೆಚ್ಚಳ ಮಾಡಿದ್ದಾರೆ. ರಸ್ತೆ, ರೈಲ್ವೆ, ಜಲ ಮಾರ್ಗಗಳ ಅಭಿವೃದ್ಧಿಗೂ ಕ್ರಮ ವಹಿಸಿದ್ದಾರೆ. ಜಗತ್ತಿನ ಶ್ರೀಮಂತ ರಾಷ್ಟಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿದ್ದು, ಮುಂದಿನ ದಿನಗಳಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಮುಖಂಡ ವಿಜುಗೌಡ ಪಾಟೀಲ, ಉಮೇಶ ಕಾರಜೋಳ, ಶೀಲವಂತ ಉಮರಾಣಿ, ಈರಣ್ಣ ರಾವೂರ ಮತ್ತಿತರರಿದ್ದರು.