Friday, 16th November 2018  

Vijayavani

Breaking News

ನಕಲಿ ಅಂಕಪಟ್ಟಿ ವಿವಾದ: ಡಿಎಸ್​ಪಿ ಹುದ್ದೆ ಕಳೆದುಕೊಂಡ ಹರ್ಮಾನ್​ ಪ್ರೀತ್​ ಕೌರ್​

Tuesday, 10.07.2018, 1:21 PM       No Comments

ಚಂಡೀಗಢ: ನಕಲಿ ಪದವಿ ಅಂಕಪಟ್ಟಿ ನೀಡಿದ ಆರೋಪದ ಮೇಲೆ ಭಾರತ ಮಹಿಳೆಯರ ಟಿ20 ಕ್ರಿಕೆಟ್​ ತಂಡದ ನಾಯಕಿ ಮತ್ತು ಅರ್ಜುನ ಪ್ರಶಸ್ತಿ ವಿಜೇತೆ ಹರ್ಮಾನ್​ ಪ್ರೀತ್​ ಕೌರ್​ ಅವರನ್ನು ಪಂಜಾಬ್​ ಸರ್ಕಾರ ಡಿಎಸ್​ಪಿ ಹುದ್ದೆಯಿಂದ ಕೆಳಗಿಳಿಸಿದೆ.

ಹರ್ಮಾನ್​ ಪ್ರೀತ್​ ಕೌರ್​ ಅವರು ಕಳೆದ ಮಾರ್ಚ್​ 1 ರಂದು ಪಂಜಾಬ್​ ಪೊಲೀಸ್​ ಇಲಾಖೆಯಲ್ಲಿ ಡಿಎಸ್​ಪಿಯಾಗಿ ಸೇರ್ಪಡೆಯಾಗಿದ್ದರು. ಈ ಸಂದರ್ಭದಲ್ಲಿ ಮೀರತ್​ನ ಚೌಧರಿ ಚರಣ್​ ಸಿಂಗ್​ ವಿಶ್ವವಿದ್ಯಾಲಯದಿಂದ 2011ರಲ್ಲಿ ಪದವಿ ಪಡೆದಿರುವುದಾಗಿ ಅಂಕಪಟ್ಟಿಯನ್ನು ಸಲ್ಲಿಸಿದ್ದರು. ಆದರೆ, ಪೊಲೀಸ್​ ಪರಿಶೀಲನೆಯಲ್ಲಿ ಅಂಕಪಟ್ಟಿ ನಕಲಿ ಎಂಬುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಹರ್ಮಾನ್​ ಪ್ರೀತ್​ ಅವರನ್ನು ಡಿಎಸ್​ಪಿ ಹುದ್ದೆಯಿಂದ ಕೆಳಗಿಳಿಸಿದೆ. ಪ್ರಸ್ತುತ ಅವರು 12ನೇ ತರಗತಿ ಪಾಸ್​ ಮಾಡಿರುವುದರಿಂದ ನಿಯಮಾವಳಿಗಳ ಪ್ರಕಾರ ಪೊಲೀಸ್​ ಕಾನ್ಸ್​ಟೇಬಲ್​ ಹುದ್ದೆ ನೀಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರ ಅವರನ್ನು ಕಾನ್ಸ್​ಟೇಬಲ್​ ಹುದ್ದೆಗೆ ಹಿಂಬಡ್ತಿ ನೀಡುವ ಸಾಧ್ಯತೆ ಇದೆ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹರ್ಮಾನ್​ ಪ್ರೀತ್​ ಅವರ ಮ್ಯಾನೇಜರ್​ ‘ಪಂಜಾಬ್​ ಪೊಲೀಸ್​ ಇಲಾಖೆಯಿಂದ ಇದುವರೆಗೆ ಯಾವುದೇ ಅಧಿಕೃತ ಪತ್ರ ಲಭ್ಯವಾಗಿಲ್ಲ. ರೈಲ್ವೆ ಇಲಾಖೆಯಲ್ಲಿ ಕೆಲಸ ಪಡೆಯುವಾಗ ಸಲ್ಲಿಸಿದ್ದ ಪದವಿ ಅಂಕಪಟ್ಟಿಯನ್ನೇ ಪಂಜಾಬ್​ ಪೊಲೀಸ್​ ಇಲಾಖೆಗೆ ಸಲ್ಲಿಸಲಾಗಿತ್ತು. ಇದು ಹೇಗೆ ನಕಲಿಯಾಗಿದೆ ಎಂಬುದು ತಿಳಿಯುತ್ತಿಲ್ಲ ಎಂದು ತಿಳಿಸಿದ್ದಾರೆ.

ಹರ್ಮಾನ್​ ಪ್ರೀತ್​ ಕೌರ್​ ಮೋಗಾದಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದರು. ಭಾರತೀಯ ಮಹಿಳಾ ಕ್ರಿಕೆಟ್​ ತಂಡಕ್ಕೆ ಆಯ್ಕೆಯಾದ ನಂತರ ಆಕೆ ದೆಹಲಿ ಮತ್ತು ಮೀರತ್​ನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಳು. ರೈಲ್ವೆ ಇಲಾಖೆಗೆ ಇದೇ ಅಂಕಪಟ್ಟಿಯನ್ನು ಸಲ್ಲಿಸಿದ್ದೆವು ಎಂದು ಹರ್ಮಾನ್​ ಪ್ರೀತ್​ ಅವರ ತಂದೆ ಹರ್ಮಿಂದರ್​ ಸಿಂಗ್​ ಅವರು ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top