ದುಬೈ ಏರ್​ಪೋರ್ಟ್​ನಲ್ಲಿ ಮಗುವಿಗೆ ಜನ್ಮ ನೀಡಿದ ಭಾರತೀಯ ಮಹಿಳೆ: ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಪೊಲೀಸ್​ ಅಧಿಕಾರಿ

ದುಬೈ: ಭಾರತೀಯ ಮಹಿಳೆಯೊಬ್ಬರು ದುಬೈನ ವಿಮಾನ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಮತ್ತು ಈ ವೇಳೆ ಮಹಿಳಾ ಪೊಲೀಸ್​ ಇನ್ಸ್​ಪೆಕ್ಟರ್​ ಒಬ್ಬರು ಆಕೆಗೆ ಸಹಾಯ ಮಾಡಿದ್ದಾರೆ.

ಭಾರತೀಯ ಮಹಿಳೆಗೆ ವಿಮಾನ ನಿಲ್ದಾಣದಲ್ಲೇ ಪ್ರಸವವೇದನೆ ಕಾಣಿಸಿಕೊಂಡಿದೆ. ಆದರೆ ಆ ಮಹಿಳೆಯ ಸುತ್ತ ನೆರೆದಿದ್ದ ಜನರಿಗೆ ಏನು ಮಾಡಬೇಕು ಎಂದು ತೋಚದೆ ಮೂಕಪ್ರೇಕ್ಷಕರಾಗಿ ನಿಂತಿದ್ದರು. ಇದೆ ವೇಳೆ ಏರ್ಪೋರ್ಟ್​ ಮಹಿಳಾ ಅಧಿಕಾರಿ ಹನನ್​ ಹುಸ್ಸೇನ್​ ಮೊಹಮ್ಮದ್​ ಕೂಡಲೇ ಆ ಮಹಿಳೆಯ ಸಹಾಯಕ್ಕೆ ಧಾವಿಸಿದ್ದಾರೆ. ಹೆರಿಗೆ ನೋವಿನಿಂದ ಕಷ್ಟಪಡುತ್ತಿದ್ದ ಅವರನ್ನು ಅಲ್ಲಿಯೇ ಇದ್ದ ತಪಾಸಣಾ ಕೊಠಡಿಗೆ ಕರೆದುಕೊಂಡು ಹೋಗಿ ಸುರಕ್ಷಿತವಾಗಿ ಡೆಲಿವರಿ ಮಾಡಿಸಿದ್ದಾರೆ.

ಆದರೆ ಮಗು ಹುಟ್ಟಿದ ತಕ್ಷಣ ಉಸಿರಾಡುತ್ತಿರಲಿಲ್ಲ. ಅದನ್ನು ನೋಡಿದ ಅಧಿಕಾರಿ ಆ ಮಗುವಿಗೆ ಸಿಪಿಆರ್​ ಚಿಕಿತ್ಸೆ ಮಾಡಿದ್ದಾರೆ. ನಂತರ ತಾಯಿ-ಮಗುವನ್ನು ಆಸ್ಪತ್ರೆಗೆ ಕಳಿಸಲಾಗಿದೆ.

ಮಹಿಳಾ ಅಧಿಕಾರಿ ತುರ್ತು ಸಂದರ್ಭವನ್ನು ನಿಭಾಯಿಸಿದ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ.(ಏಜೆನ್ಸೀಸ್​)