ಸುಧೀರ್​ವುನ್ ಕಪ್ ಕಾದಾಟ ಇಂದಿನಿಂದ

ನಾನಿಂಗ್(ಚೀನಾ): ಭಾರತದ ಅಗ್ರ ಷಟ್ಲರ್​ಗಳಾದ ಕಿಡಂಬಿ ಶ್ರೀಕಾಂತ್, ಪಿವಿ ಸಿಂಧು ಹಾಗೂ ಸೈನಾ ನೆಹ್ವಾಲ್, ಭಾನುವಾರ ಆರಂಭವಾಗಲಿರುವ ಪ್ರತಿಷ್ಠಿತ ಸುಧೀರ್​ವುನ್ ಕಪ್ ಮಿಶ್ರ ತಂಡ ವಿಭಾಗದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 2011 ಹಾಗೂ 2017ರಲ್ಲಿ ಎಂಟರ ಘಟ್ಟಕ್ಕೇರಿದ್ದ ಭಾರತ ತಂಡ ಸೋಮವಾರ ನಡೆಯಲಿರುವ 1ಡಿ ಗುಂಪಿನ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಎದುರಿಸಲಿದೆ. ಮಂಗಳವಾರ ನಡೆಯಲಿರುವ ಎರಡನೇ ಸುತ್ತಿನ ಪಂದ್ಯದಲ್ಲಿ 10 ಬಾರಿಯ ಚಾಂಪಿಯನ್ ಹಾಗೂ ಆತಿಥೇಯ ಚೀನಾ ತಂಡದ ಎದುರು ಹೋರಾಡಲಿದೆ. ಗುಂಪಿನ ಅಗ್ರ 2 ತಂಡಗಳು ಕ್ವಾರ್ಟರ್​ಫೈನಲ್​ಗೇರಲಿವೆ.

ಟೂರ್ನಿ ಸ್ವರೂಪ

ಟೂರ್ನಿ ಮಿಶ್ರ ತಂಡ ಮಾದರಿಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಪುರುಷರ ಹಾಗೂ ಮಹಿಳಾ ವಿಭಾಗ ತಲಾ ಒಂದು ಸಿಂಗಲ್ಸ್ ಪಂದ್ಯ, ಪುರುಷರ ಹಾಗೂ ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಪಂದ್ಯಗಳು ಒಳಗೊಂಡಿರುತ್ತವೆ. ಐದು ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದ ತಂಡ ವಿಜಯಿಯಾಗಲಿದೆ. 1989ರಲ್ಲಿ ಇಂಡೋನೇಷ್ಯಾದಲ್ಲಿ ಮೊದಲ ಬಾರಿಗೆ ಈ ಟೂರ್ನಿಯ ಆಯೋಜಿಸಲಾಗಿತ್ತು. ಈವರೆಗೂ ನಡೆದಿರುವ 15 ಟೂರ್ನಿಗಳಲ್ಲಿ ಚೀನಾ ತಂಡವೇ 10 ಬಾರಿ ಪ್ರಶಸ್ತಿ ಗೆದ್ದಿದೆ.

ಸಿಂಧು, ಸೈನಾ, ಶ್ರೀಕಾಂತ್ ಹಾಗೂ ಸಮೀರ್ ವರ್ಮರಂಥ ಅನುಭವಿ ಆಟಗಾರರನ್ನು ಹೊಂದಿರುವ ಭಾರತ, ಬಲಿಷ್ಠ ತಂಡಗಳ ಸವಾಲು ಹಿಮ್ಮೆಟ್ಟಿಸಿ ಈ ಬಾರಿಯಾದರೂ ಎಂಟರ ಘಟ್ಟಕ್ಕಿಂತ ಮೇಲೇರುವ ನಿರೀಕ್ಷೆಯಲ್ಲಿದೆ. 13 ಸದಸ್ಯರ ಭಾರತ ತಂಡ ಟೂರ್ನಿಯಲ್ಲಿ 8ನೇ ಶ್ರೇಯಾಂಕ ಹೊಂದಿದೆ. ಇದೇ ತಂಡ 2018ರ ಕಾಮನ್ವೆಲ್ತ್ ಗೇಮ್ಸ್​ನ ಮಿಶ್ರ ವಿಭಾಗದಲ್ಲಿ ಮಲೇಷ್ಯಾ ತಂಡವನ್ನು ಮಣಿಸಿ ಸ್ವರ್ಣ ಪದಕ ಜಯಿಸಿತ್ತು. ಮಾಜಿ ವಿಶ್ವ ನಂ.1 ಲೀ ಚಾಂಗ್ ವೀ ಮಲೇಷ್ಯಾ ಪರ ಈ ಬಾರಿ ಕಣಕ್ಕಿಳಿಯುತ್ತಿಲ್ಲ.

ಗಾಯದ ಸಮಸ್ಯೆಯಿಂದ ಸುಧಾರಿಸಿಕೊಂಡು ವಾಪಸಾಗಿರುವ ಸಾತ್ವಿಕ್ ಸಾಯಿರಾಜ್ ಪುರುಷರ ಡಬಲ್ಸ್ ವಿಭಾಗದಲ್ಲಿ ಚಿರಾಗ್ ಶೆಟ್ಟಿ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಜತೆಗೂಡಿ ಆಡಲಿದ್ದಾರೆ. ಸಿಂಧು, ಸೈನಾ ಹಾಗೂ ಶ್ರೀಕಾಂತ್ ಸಿಂಗಲ್ಸ್ ವಿಭಾಗದಲ್ಲಿ ಬಲ ತುಂಬಲಿದ್ದಾರೆ. ಮತ್ತೊಂದೆಡೆ, ಆತಿಥೇಯ ಚೀನಾ ತಂಡ 11ನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಒಲಿಂಪಿಕ್ ಚಾಂಪಿಯನ್ ಚೆನ್ ಲಾಂಗ್ ಹಾಗೂ ಆಲ್ ಇಂಗ್ಲೆಂಡ್ ಚಾಂಪಿಯನ್​ಷಿಪ್​ನ ಹಾಲಿ ಚಾಂಪಿಯನ್ ಶೀ ಯೂಕಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶಕ್ತಿಯಾಗಿದ್ದಾರೆ. -ಪಿಟಿಐ/ಏಜೆನ್ಸೀಸ್