ಭಾರತವನ್ನು ಬೆಸೆದ ರೈಲ್ವೆ

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತೀಯ ರೈಲ್ವೆಗಂತೂ ಅಚ್ಛೇ ದಿನ್ ಬಂದವು. ಅನುದಾನದ ಸಮಸ್ಯೆ, ನನೆಗುದಿಗೆ ಬಿದ್ದ ಕಾಮಗಾರಿ, ಮಂದಗತಿಯ ಆಡಳಿತದಿಂದ ಮುಕ್ತಿ ದೊರೆತು ಹೊಸ ಮಾರ್ಗ ಮತ್ತು ಮಾರ್ಗ ವಿಸ್ತರಣೆಗೆ ಶೀಘ್ರ ಮಂಜೂರಾತಿ ದೊರೆಯಿತು. ರೈಲ್ವೆ ಬಜೆಟ್​ನ್ನು ಪ್ರತ್ಯೇಕವಾಗಿ ಮಂಡಿಸುತ್ತಿದ್ದ ಸಂಪ್ರದಾಯಕ್ಕೆ ಅಂತ್ಯಹಾಡಿದ ಎನ್​ಡಿಎ ಸರ್ಕಾರ ವಿತ್ತೀಯ ಬಜೆಟ್ ಜತೆಗೆ ಇದನ್ನು ವಿಲೀನಗೊಳಿಸಿತು. ಬಜೆಟ್​ನಲ್ಲಿಯೂ ಹೊಸ ರೈಲಿನ ಘೋಷಣೆಗಳಿಗಿಂತ, ನನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಿತು.

  • 2019-20ನೇ ಸಾಲಿಗೆ ರೈಲ್ವೆ ಇಲಾಖೆಗೆ 1.58 ಲಕ್ಷ ಕೋಟಿ ರೂ. ಮೀಸಲು.
  • ಬ್ರಾಡ್​ಗೇಜ್ ರೈಲುಮಾರ್ಗ ಜಾಲದ ಕಾವಲುರಹಿತ ಕ್ರಾಸಿಂಗ್​ಗಳನ್ನು 2018-19ನೇ ಸಾಲಿನಲ್ಲಿ ಸಂಪೂರ್ಣ ತೆರವುಗೊಳಿಸಲಾಯಿತು.
  • ಈಶಾನ್ಯಕ್ಕೆ ಸಂಪರ್ಕ: -ಈಶಾನ್ಯ ರಾಜ್ಯಗಳಿಗೆ ಸರಕು ಸಾಗಣೆಗೆ ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿಗೆ 58,166 ಕೋಟಿ ರೂ. ಒದಗಿಸಲಾಯಿತು. ಅಲ್ಲದೆ, ಮೊದಲ ಬಾರಿಗೆ ಮೇಘಾಲಯ, ತ್ರಿಪುರಾ ಮತ್ತು ಮಿಜೋರಂ ಭಾರತೀಯ ರೈಲಿನ ನಕ್ಷೆಯಲ್ಲಿ ಸ್ಥಾನ ಪಡೆದವು.
  • 2018ರಲ್ಲಿ 25ಕ್ಕೂ ಹೆಚ್ಚು ರೈಲುಗಳ ವೇಗವನ್ನು ವರ್ಧಿಸಲಾಯಿತು.
  • ‘ಮೇಕ್ ಇನ್ ಇಂಡಿಯಾ’ದಡಿ ಅತ್ಯಾಧುನಿಕ ಬೋಗಿಗಳ ತಯಾರಿಕೆ ಕ್ಷಿಪ್ರವಾಗಿ ನಡೆಯುತ್ತಿದೆ.

ಅತ್ಯಾಧುನಿಕ ರೈಲು

ದೇಶದ ಅತ್ಯಾಧುನಿಕ ರೈಲು ‘ಟ್ರೇನ್ 18’ಗೆ (ವಂದೇ ಭಾರತ್) ಪ್ರಧಾನಮಂತ್ರಿ ನರೇಂದ್ರ ಮೋದಿ ಫೆ.7ರಂದು ಹಸಿರು ನಿಶಾನೆ ತೋರಿಸಿದರು. ದೆಹಲಿಯಿಂದ ವಾರಾಣಸಿಗೆ ಸಂಚರಿಸುವ ಈ ರೈಲು ಗಂಟೆಗೆ 130 ಕಿ.ಮೀ. ವೇಗದಲ್ಲಿ ಕ್ರಮಿಸುತ್ತಿದ್ದು, ಕೇವಲ 8 ಗಂಟೆಗಳಲ್ಲಿ ದೆಹಲಿಯಿಂದ ವಾರಾಣಸಿಗೆ ತಲುಪುತ್ತದೆ (ಹಿಂದಿನ ಪ್ರಯಾಣ ಅವಧಿ 12 ಗಂಟೆಯಾಗಿದ್ದು, 4 ಗಂಟೆ ತಗ್ಗಿದೆ).

ಬುಲೆಟ್ ಟ್ರೇನ್ ಕನಸು

ಭಾರತದಲ್ಲಿ ಮೊದಲ ಬಾರಿಗೆ ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ಟ್ರೇನ್ ನಿರ್ವಣಕ್ಕೆ ನಿರ್ಧರಿಸಲಾಗಿದೆ. ಇದು ನಿರ್ಮಾಣ ಹಂತದಲ್ಲಿಯೇ 20 ಸಾವಿರ ಉದ್ಯೋಗಗಳನ್ನು ಸೃಷ್ಟಿಸಲಿದೆ. ಈ ಬಗ್ಗೆ ಜಪಾನ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಭೂಸ್ವಾಧೀನ ಕಾಮಗಾರಿ ಪ್ರಗತಿಯಲ್ಲಿದೆ.