ಮುಂಬೈ ರೈಲು ಬೋಗಿ ಹಂಚಿಕೆ

>

– ಪ್ರಕಾಶ್ ಮಂಜೇಶ್ವರ ಮಂಗಳೂರು
ಕರ್ನಾಟಕ ಹಾಗೂ ಕೇರಳ ಕರಾವಳಿಯ ಜನರು ರೈಲ್ವೆ ಮೂಲಕ ಮುಂಬೈ ಸಂಪರ್ಕ ಸಾಧಿಸಲು ಹೆಚ್ಚಿನ ಅನುಕೂಲ ಒದಗಿಸುವ ಪ್ರಸ್ತಾವನೆಯೊಂದು ದಕ್ಷಿಣ ರೈಲ್ವೆ ಮುಂದಿದೆ.
ಮುಂಬೈ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಮಂಗಳೂರು ಸೆಂಟ್ರಲ್-ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ಸೂಪರ್‌ಫಾಸ್ಟ್ ರೈಲುಗಳ ಬೋಗಿಗಳನ್ನು ಅಗತ್ಯಕ್ಕೆ ತಕ್ಕಂತೆ ಪರಸ್ಪರ ಹಂಚಿಕೊಳ್ಳುವುದು ಈ ಯೋಜನೆ. ಇದರಿಂದ ಮುಂಬೈ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ದಿನಂಪ್ರತಿ 3ರಿಂದ 4 ಗಂಟೆ ವಿಳಂಬ ಸಂಚಾರ ತಪ್ಪುತ್ತದೆ.

ಪರಿಷ್ಕರಣೆ ಕಾರಣ: ವೇಳಾಪಟ್ಟಿಯಂತೆ ಮುಂಬೈ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ನಂ.12133/12134) ಮಧ್ಯಾಹ್ನ 1.10 ಕ್ಕೆ ಮಂಗಳೂರು ಜಂಕ್ಷನ್ ತಲುಪಬೇಕು ಮತ್ತು 1.55 ಕ್ಕೆ ವಾಪಸ್ ಮುಂಬೈ ಕಡೆಗೆ ಪ್ರಯಾಣ ಆರಂಭಿಸಬೇಕು. ಆದರೆ, ಈ ರೈಲು ವಿವಿಧ ಕಾರಣಗಳಿಂದ ದಿನಂಪ್ರತಿ ಕೆಲ ತಾಸು ವಿಳಂಬವಾಗಿ ಮಂಗಳೂರು ತಲುಪುತ್ತಿದೆ. ಇದೇ ರೈಲು ಮಧ್ಯಾಹ್ನ 1.55ಕ್ಕೆ ಮುಂಬೈಗೆ ಮರಳಬೇಕಾದ ಕಾರಣ ಇದರ ಮುಂಬೈ ಪ್ರಯಾಣ ಆರಂಭಿಸುವ ಸಮಯ ಕೂಡ ವಿಳಂಬವಾಗುತ್ತಿದೆ.
ವೇಳಾಪಟ್ಟಿಯಂತೆ ಮಂಗಳೂರಿನಿಂದ ಪ್ರಯಾಣ ಆರಂಭಿಸಿದ ಮರುದಿನ ಬೆಳಗ್ಗೆ 4.25 ಕ್ಕೆ ರೈಲು ಮುಂಬೈ ತಲುಪಬೇಕು. ಈ ಹೊತ್ತು ರೈಲು ತಲುಪುವ ಕಾರಣ, ಅಲ್ಲಿಂದ ವಿವಿಧ ಕಡೆಗಳಿಗೆ ತೆರಳುವವವರಿಗೆ ಅನುಕೂಲವಾಗುತ್ತಿತ್ತು. ಆದರೆ, ರೈಲು ತಾಸುಗಳ ಕಾಲ ವಿಳಂಬ ಆಗುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿತ್ತು.

ಯೋಜನೆ ಸ್ವರೂಪ:  ಮಂಗಳೂರು ಸೆಂಟ್ರಲ್‌ಗೆ ಬೆಳಗ್ಗೆ 9.05ಕ್ಕೆ ತಲುಪಿದ ಚೆನ್ನೈ ಸೆಂಟ್ರಲ್ ರೈಲು ಸೂಪರ್ ಫಾಸ್ಟ್ ರೈಲನ್ನೇ ಮುಂಬೈ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಿ ಮಧ್ಯಾಹ್ನ 1.30ಕ್ಕೆ ಮುಂಬೈಗೆ ಕಳುಹಿಸುವುದು. ಮುಂಬೈಯಿಂದ ಆಗಮಿಸುವ ಮುಂಬೈ-ಮಂಗಳೂರು ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಮುಂಬೈ ಸಿಎಸ್‌ಎಂಟಿ- ಮಂಗಳೂರು ಜಂಕ್ಷನ್ ಸೂಪರ್‌ಫಾಸ್ಟ್ ಆಗಿ ಪರಿವರ್ತಿಸಿ ಸಾಯಂಕಾಲ 4.30ಕ್ಕೆ ಚೆನ್ನೈಗೆ ಕಳುಹಿಸುವುದು. ಅಂದರೆ ಒಂದೇ ರೈಲು ಎರಡು ಮಾರ್ಗಗಳಲ್ಲಿ ಸಂಚರಿಸುವುದು.

ಪ್ರಯೋಜನ:  ಪ್ರಸ್ತಾವಿತ ಎರಡು ರೈಲುಗಳು ಕೂಡ ಮಂಗಳೂರಿನಿಂದ ಸರಿಯಾದ ಸಮಯಕ್ಕೆ ಪ್ರಯಾಣ ಆರಂಭಿಸಲು ಅವಕಾಶ ಸಿಗುತ್ತದೆ. ಎರಡು ರೈಲುಗಳು ಕೂಡ ಫ್ಲಾಟ್‌ಫಾರ್ಮ್‌ಗೆ ಬಂದ ಬಳಿಕ ನೀರು ತುಂಬಿಸಿಕೊಂಡು ಇನ್ನೊಂದು ಪ್ರಯಾಣಕ್ಕೆ ಸಿದ್ಧಗೊಳ್ಳಲು ಸಾಕಷ್ಟು ಕಾಲಾವಕಾಶವೂ ಇದೆ. ಮುಂಬೈ ರೈಲನ್ನು ಮಂಗಳೂರು ಜಂಕ್ಷನ್ ಬದಲು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಅವಕಾಶವಿದೆ. ಕೊಂಕಣ ರೈಲ್ವೆ ಹಾಗೂ ಸೆಂಟ್ರಲ್ ರೈಲ್ವೆ ಈ ವಿಷಯದಲ್ಲಿ ಸಹಮತ ಹೊಂದಿದ್ದು, ದಕ್ಷಿಣ ರೈಲ್ವೆ ಕಡೆಯಿಂದ ಗ್ರೀನ್‌ಸಿಗ್ನಲ್ ದೊರೆಯ ಬೇಕಾಗಿದೆ. ರಾಷ್ಟ್ರೀಯ ರೈಲ್ವೆ ಬಳಕೆದಾರರ ಸಲಹಾ ಪರಿಷತ್ತು ಸದಸ್ಯ ಕೆ.ವೆಂಕಟೇಶ ಕಿಣಿ ದಕ್ಷಿಣ ರೈಲ್ವೆ ವಿಭಾಗೀಯ ರೈಲ್ವೆ ಪ್ರಬಂಧಕರಿಗೆ ಮನವಿ ಸಲ್ಲಿಸಿದ್ದಾರೆ.

ಮತ್ಸೃಗಂಧ ಎಕ್ಸ್‌ಪ್ರೆಸ್ ಸಹಿತ ಸಾಕಷ್ಟು ರೈಲುಗಳನ್ನು ಈ ರೀತಿ ಬಳಸಲಾಗುತ್ತಿದೆ. ಪ್ರಸ್ತಾವಿತ ಮುಂಬೈ ರೈಲು ವಿಳಂಬವಾಗಿ ಮುಂಬೈ ಸಂಚರಿಸುವುದನ್ನು ತಡೆಯಲು ರೈಲು ಬೋಗಿ ಹಂಚಿಕೆ ಕ್ರಮ ಸೂಕ್ತ. ಬೋಗಿ ಹಂಚಿಕೆ ತಾಂತ್ರಿಕ ವಿಷಯ. ಪ್ರಯಾಣಿಕರಿಗೆ ಗೊಂದಲವಿಲ್ಲ.
– ಗೌತಮ್ ಶೆಟ್ಟಿ, ರೈಲ್ವೆ ಹೋರಾಟಗಾರ

ಹೊಸ ಪ್ರಸ್ತಾವ ಕುರಿತು ಸೆಂಟ್ರಲ್-ಕೊಂಕಣ ರೈಲ್ವೆಯ ಹಿರಿಯ ಅಧಿಕಾರಿ ವರ್ಗ ಆಸಕ್ತಿ ವಹಿಸಿದ್ದು, ದಕ್ಷಿಣ ರೈಲ್ವೆ ಒಪ್ಪಿಗೆ ನೀಡಬೇಕಾಗಿದೆ. ರೈಲ್ವೆ ಬಳಕೆದಾರರ ಸಲಹಾ ಪರಿಷತ್ತು, ಯಾತ್ರಿ ಸಂಘಗಳಿಂದ ದಕ್ಷಿಣ ರೈಲ್ವೆಗೆ ಮನವಿ ಸಲ್ಲಿಸಲಾಗಿದೆ. ಕೇಂದ್ರದಲ್ಲಿ ಹೊಸ ಸರ್ಕಾರ ರಚನೆ ಬಳಿಕ ಸ್ಥಳೀಯ ಸಂಸದರ ಮೂಲಕ ಮತ್ತೆ ಪ್ರಯತ್ನ ಮುಂದುವರಿಸಬೇಕಾಗಿದೆ.
– ಅನಿಲ್ ಹೆಗ್ಡೆ, ತಾಂತ್ರಿಕ ಸಲಹೆಗಾರ, ರೈಲ್ವೆ ಯಾಂತ್ರಿ ಸಂಘ

Leave a Reply

Your email address will not be published. Required fields are marked *