ಕ್ಯಾನ್ಬೆರಾ: ಇಲಿಗಳ ಕಾಟಕ್ಕೆ ಆಸ್ಟ್ರೇಲಿಯಾ ತತ್ತರಿಸಿ ಹೋಗಿದೆ. ಪ್ಲೇಗ್ ಹರಡುವುದನ್ನು ತಡೆಯುವುದಕ್ಕಾಗಿ ದೇಶದಲ್ಲಿ ನಿಷೇಧಿಸಲ್ಪಟ್ಟ ಬ್ರೊಮಾಡಿಯೊಲೊನ್ ಎಂಬ ಇಲಿ ಪಾಶಾಣವನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
ಆಸ್ಟ್ರೇಲಿಯಾದಲ್ಲಿ ನ್ಯೂ ಸೌತ್ ವೇಲ್ಸ್ ಅತ್ಯಂತ ಜನದಟ್ಟಣೆ ಇರುವ ರಾಜ್ಯ. ಇಲ್ಲಿನ ಸರ್ಕಾರ 5,000 ಲೀಟರ್ ಬ್ರೊಮಾಡಿಯೊಲೊನ್ನ್ನು ಭಾರತದಿಂದ ಆಮದು ಮಾಡಿಕೊಳ್ಳಲು ತೀರ್ವನಿಸಿದೆ. ಬ್ರೊಮಾಡಿಯೊಲೊನ್ ಅತ್ಯಂತ ಪರಿಣಾಮಕಾರಿ ದಂಶಕನಾಶಕವಾಗಿದೆ. ತುರ್ತು ಬಳಕೆಯ ಉದ್ದೇಶಕ್ಕಾಗಿ ಈ ದ್ರಾವಣವನ್ನು ಆಮದುಮಾಡಿಕೊಳ್ಳಲು ದೇಶದ ಫೆಡರಲ್ ರೆಗ್ಯುಲೇಟರ್ ಸಂಸ್ಥೆ ಅನುಮತಿ ನೀಡಬೇಕಿದೆ. ನ್ಯೂ ಸೌತ್ ವೇಲ್ಸ್ನ ಕೃಷಿಕರು ಇಲಿಗಳ ಕಾಟದಿಂದಾಗಿ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಹೊಲ, ಮನೆಗಳಲ್ಲಿ ಇಲಿಗಳ ಉಪಟಳ ಹೆಚ್ಚಾಗಿದೆ. ಇದರಿಂದಾಗಿ ಎಲ್ಲೆಡೆ ಪ್ಲೇಗ್ ಭೀತಿ ಆವರಿಸಿದೆ ಎಂದು ಕೃಷಿ ಸಚಿವ ಆಡಮ್ ಮಾರ್ಷಲ್ ಹೇಳಿದ್ದಾರೆ.
ಒಂದೇ ರಾತ್ರಿ 7,500 ಇಲಿಗಳು ಟ್ರ್ಯಾಪ್!
ನ್ಯೂ ಸೌತ್ ವೇಲ್ಸ್ನ ಕೃಷಿಕನೊಬ್ಬ ಇಲಿ ಕಾಟದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾನೆ. ಕೃಷಿ ಭೂಮಿಯಲ್ಲಿ ಪಶು ಆಹಾರ ಇಟ್ಟು ನೀರಿನ ತೊಟ್ಟಿಯಲ್ಲಿ ಮಾಡಿದ ಇಲಿ ಟ್ರಾ್ಯಪ್ಗೆ ಒಂದೇ ರಾತ್ರಿ 7,500 ಇಲಿಗಳು ಬಿದ್ದು ಸತ್ತು ಹೋಗಿವೆ. ಎಲ್ಲಿ ಹೋದರೂ ಇಲಿಗಳೇ ಕಾಲಿಗೆ ಸಿಗುತ್ತಿವೆ. ಅವುಗಳ ಕಳೇಬರ ಮನೆಯ ಮೇಲ್ಛಾವಣಿಯಲ್ಲಿ ಸಿಲುಕಿ ವಾಸನೆ ಹರಡಿ, ಅಲ್ಲಿ ಮನುಷ್ಯರು ವಾಸ ಮಾಡದ ಸ್ಥಿತಿಗೆ ತಲುಪಿದೆ ಎಂದಿದ್ದಾರೆ.