More

    ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ಭಾರತ 111 ಪದಕ ಗೆಲುವಿನ ಇತಿಹಾಸ; ಪ್ರಧಾನಿ ಮೋದಿ ಅಭಿನಂದನೆ

    ಹಾಂಗ್​ರೆೌ: ಭಾರತದ ಪ್ಯಾರಾ ಕ್ರೀಡಾಪಟುಗಳು 4ನೇ ಆವೃತ್ತಿಯ ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ಒಟ್ಟಾರೆ 111 ಪದಕ ಗೆಲುವಿನ ಐತಿಹಾಸಿಕ ಸಾಧನೆ ಮೆರೆದಿದ್ದಾರೆ. 29 ಚಿನ್ನ, 31 ಬೆಳ್ಳಿ, 51 ಕಂಚು ಗೆಲುವಿನೊಂದಿಗೆ ಭಾರತ ಪದಕಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿತು. ಈ ಮೂಲಕ ಕ್ರೀಡಾಕೂಟದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಅಗ್ರ 5ರೊಳಗೆ ಸ್ಥಾನ ಸಂಪಾದಿಸಿತು.

    ಪದಕ ಸ್ಪರ್ಧೆಯ ಆರನೇ ಹಾಗೂ ಕೊನೇ ದಿನವಾದ ಶನಿವಾರ ಭಾರತ ಒಟ್ಟು 12 ಪದಕಗಳನ್ನು ಬಾಚಿಕೊಂಡಿತು. ಇದರಲ್ಲಿ 4 ಚಿನ್ನ, 2 ಬೆಳ್ಳಿ, 6 ಕಂಚು ಸೇರಿದ್ದು, ಕ್ರೀಡಾಕೂಟದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ 100ಕ್ಕಿಂತ ಅಧಿಕ ಪದಕ ಗೆದ್ದ ಸಾಧನೆಯನ್ನೂ ಮಾಡಿತು. ಇದರೊಂದಿಗೆ ಭಾರತ, ಹಾಂಗ್​ರೆೌನಲ್ಲೇ ನಡೆದ 19ನೇ ಆವೃತ್ತಿಯ ಏಷ್ಯನ್​ ಗೇಮ್ಸ್​ನಲ್ಲಿ ಪದಕಗಳ ಶತಕ ದಾಖಲಿಸಿದ್ದ ಸಾಧನೆಯನ್ನು ಪ್ಯಾರಾ ಗೇಮ್ಸ್​ನಲ್ಲೂ ಪುನರಾವರ್ತಿಸಿದಂತಾಗಿದೆ. ಭಾರತ ಪ್ಯಾರಾ ಅಥ್ಲೆಟಿಕ್ಸ್​ನಲ್ಲಿ ಸರ್ವಾಧಿಕ 55 ಪದಕ (18 ಚಿನ್ನ, 17 ಬೆಳ್ಳಿ, 20 ಕಂಚು) ಗೆದ್ದರೆ, ಪ್ಯಾರಾ ಬ್ಯಾಡ್ಮಿಂಟನ್​ನಲ್ಲಿ 21 ಪದಕ (4 ಚಿನ್ನ, 4 ಬೆಳ್ಳಿ, 13 ಕಂಚು) ಒಲಿಸಿಕೊಂಡಿತು.

    ಭಾರತ ಕಳೆದ 3 ಆವೃತ್ತಿಗಳ ಏಷ್ಯನ್​ ಪ್ಯಾರಾ ಗೇಮ್ಸ್​ ಪದಕಪಟ್ಟಿಯಲ್ಲಿ ಕ್ರಮವಾಗಿ 15 (2010, 2014) ಮತ್ತು 9ನೇ (2018) ಸ್ಥಾನ ಗಳಿಸಿತ್ತು. 2018ರ ಪ್ಯಾರಾ ಗೇಮ್ಸ್​ನಲ್ಲಿ ಒಟ್ಟು 72 ಪದಕ (15 ಚಿನ್ನ, 24 ಬೆಳ್ಳಿ, 33 ಕಂಚು) ಗೆದ್ದಿದ್ದು ಭಾರತದ ಹಿಂದಿನ ಶ್ರೇಷ್ಠ ನಿರ್ವಹಣೆಯಾಗಿತ್ತು.
    ಕೊನೇ ದಿನ ದರ್ಪಣ್​ ಇನಾನಿ ಚೆಸ್​ನಲ್ಲಿ ಅವಳಿ ಪದಕ ಗೆದ್ದರು. ಪುರುಷರ ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ಈ ಸಾಧನೆ ಮಾಡಿದರು. ಅಥ್ಲೆಟಿಕ್ಸ್​ನಲ್ಲಿ ಜಾವೆಲಿನ್​ ಎಸೆತದ ಎಫ್​​55 ವಿಭಾಗದಲ್ಲಿ ನೀರಜ್​ ಯಾದವ್​ ಮತ್ತು 400 ಮೀ. ಓಟದ ಟಿ47 ವಿಭಾಗದಲ್ಲಿ ದಿಲೀಪ್​ ಗವಿತ್​ ಚಿನ್ನ ಗೆದ್ದರು.

    ಪ್ರಧಾನಿ ಅಭಿನಂದನೆ
    ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ 111 ಪದಕಗಳನ್ನು ಗೆದ್ದಿರುವುದು ಅಪೂರ್ವ ಆನಂದದ ಕ್ಷಣ. ಈ ಯಶಸ್ಸು ನಮ್ಮ ಕ್ರೀಡಾಪಟುಗಳ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪಕ್ಕೆ ದೊರೆತ ಪ್ರತಿಲವಾಗಿದೆ. ಈ ಗಮನಾರ್ಹ ಮೈಲಿಗಲ್ಲು ನಮ್ಮ ಹೃದಯದಲ್ಲಿ ಅಪಾರ ಹೆಮ್ಮೆಯನ್ನು ತುಂಬಿದೆ. ಈ ವಿಜಯ ನಮಗೆಲ್ಲರಿಗೂ ಸ್ಫೂರ್ತಿ ನೀಡಿದೆ. ನಮ್ಮ ಯುವಕರಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನೂ ನೆನಪಿಸಿದ್ದಾರೆ.
    | ನರೇಂದ್ರ ಮೋದಿ, ಪ್ರಧಾನಿ

    ಪ್ಯಾರಾ ಗೇಮ್ಸ್​ಗೆ ಅದ್ದೂರಿ ತೆರೆ
    ಏಷ್ಯನ್​ ಪ್ಯಾರಾ ಗೇಮ್ಸ್​ಗೆ ಶನಿವಾರ ಸಂಜೆ ಅದ್ದೂರಿ ಸಮಾರೋಪ ಸಮಾರಂಭದೊಂದಿಗೆ ತೆರೆಬಿದ್ದಿತು. ಆತಿಥೇಯ ಚೀನಾ 500ಕ್ಕೂ ಅಧಿಕ ಪದಕ ಗೆದ್ದು ಬೀಗಿದರೆ, ಇರಾನ್​ 2ನೇ ಸ್ಥಾನ ಪಡೆದು ಗಮನಸೆಳೆಯಿತು. 2026ರ ಏಷ್ಯನ್​ ಪ್ಯಾರಾ ಗೇಮ್ಸ್​ ಜಪಾನ್​ನ ಐಚಿ-ನಗೋಯದಲ್ಲಿ ನಡೆಯಲಿದೆ.

    VIDEO| ಎರಡೂ ಕೈಗಳಿಲ್ಲದ ಶೀತಲ್ ದೇವಿ​ಗೆ ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ಅವಳಿ ಚಿನ್ನದ ಪದಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts