ಸಲಿಂಗಿಯೊಂದಿಗೆ ಸಂತಸದಿಂದ ಜೀವನ ಕಳೆಯಲು ಪತ್ನಿಯ ಜೀವವನ್ನೇ ತೆಗೆದ ಪತಿರಾಯ

ಲಂಡನ್: ಕಳೆದ ಮೇ ತಿಂಗಳಲ್ಲಿ ನಾರ್ತ್​ ಇಂಗ್ಲೆಂಡ್​ ನಿವಾಸವೊಂದರಲ್ಲಿ 34 ವರ್ಷದ ಭಾರತೀಯ ಮೂಲದ ಫಾರ್ಮಾಸಿಸ್ಟ್​ ಜಿಸ್ಸಿಕಾ ಪಟೇಲ್​ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪತಿಯೇ ಆಕೆಯನ್ನು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.

ಗ್ರಿಂಡರ್​ ಎಂಬ ಡೇಟಿಂಗ್​ ಆ್ಯಪ್​ನಲ್ಲಿ ಸಲಿಂಗಿ ಗೆಳೆಯಬ್ಬನ ಸಖ್ಯ ಬೆಳೆಸಿದ್ದ ಆರೋಪಿ ಮಿತೇಶ್​ ಪಟೇಲ್​ (37) ಪತ್ನಿಯನ್ನು ಕೊಲೆ ಮಾಡುವುದಕ್ಕೂ ಮುಂಚೆ ಅಂತರ್ಜಾಲದಲ್ಲಿ, ‘ನಾನು ನನ್ನ ಪತ್ನಿಯನ್ನು ಕೊಲ್ಲಬೇಕು’, ‘ಇನ್ಸುಲಿನ್​ ಓವರ್​ಡೋಸ್​’, ‘ಎಷ್ಟು ಪ್ರಮಾಣದ ಮೆಥಡಾನ್​ ವ್ಯಕ್ತಿಯ ಜೀವ ತೆಗೆಯುತ್ತದೆ?’, ‘ನನ್ನ ಪತ್ನಿ ಕೊಲ್ಲಲು ಸಹ-ಸಂಚುಗಾರನ ಅಗತ್ಯವಿದೆಯೇ?’ ಎಂಬೆಲ್ಲದರ ಕುರಿತು ಹುಡುಕಾಟ ನಡೆಸಿದ್ದ ಎಂದು ತಿಳಿದು ಬಂದಿದೆ.

ಪತ್ನಿಯ ಹೆಸರಿನಲ್ಲಿದ್ದ ಎರಡು ಮಿಲಿಯನ್​ ಪೌಂಡ್​ ಜೀವವಿಮೆಯನ್ನು ತನ್ನದಾಗಿಸಿಕೊಳ್ಳಲು ಮತ್ತು ಆತನ ಪ್ರಿಯಕರ ಡಾ. ಅಮಿತ್​ ಪಟೇಲ್​ ಜತೆ ಆಸ್ಟ್ರೇಲಿಯಾದಲ್ಲಿ ನೆಲೆಸಲು ಯೋಜನೆ ರೂಪಿಸಿದ್ದಕ್ಕೆ ಆರೋಪಿ ಮಿತೇಶ್, ಪತ್ನಿ ಹತ್ಯೆಗೆ ಸಂಚು ಹೂಡಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಅಷ್ಟೇ ಅಲ್ಲದೆ, ಸಿಡ್ನಿ ಮೂಲದ ಪ್ರಿಯಕರನಿಗೆ 2015ರಲ್ಲಿಯೇ ಪತ್ನಿಯ ಕೊನೆ ದಿನ ನಿಗದಿಯಾಗಿದೆ ಎಂದು ಹೇಳಿಕೊಂಡಿದ್ದ ಮಿತೇಶ್​, ಪತ್ನಿ ಮೃತದೇಹ ಪತ್ತೆಯಾಗಿದ್ದಾಗ ಮುಗ್ಧನಂತೆ ವರ್ತಿಸಿದ್ದ. ದರೋಡೆಕೋರರು ನನ್ನ ಪತ್ನಿಯನ್ನು ಕೊಂದಿದ್ದಾರೆ ಎಂದು ಹೇಳಿಕೊಂಡಿದ್ದ.

ಆದರೆ, ತನಿಖೆ ವೇಳೆ ಸ್ವತಃ ಪತಿಯೇ​ ಪತ್ನಿಯ ಕೈಯನ್ನು ಟೇಪ್​ನಿಂದ ಕಟ್ಟಿ ಹಾಕಿ, ಆಕೆಗೆ ಇನ್ಸುಲಿನ್​ ಕೊಟ್ಟು, ಪ್ಲಾಸ್ಟಿಕ್​ ಬ್ಯಾಗ್​ ಅನ್ನು ಮುಖಕ್ಕೆ ಸುತ್ತಿ ಉಸಿರುಗಟ್ಟಿಸಿ ಕೊಂದಿರುವುದು ತಿಳಿದು ಬಂದಿದೆ.

ಟೀಸೈಡ್​ ಕ್ರೌನ್​ ಕೋರ್ಟ್​ನ ನ್ಯಾಯಮೂರ್ತಿ ಜೇಮ್ಸ್​ ಗಾಸ್, ಆರೋಪಿಗೆ ಜೀವಾವಧಿ ಶಿಕ್ಷೆ ನೀಡುವುದು ಕಡ್ಡಾಯ ಎಂದು ತೀರ್ಪು ನೀಡಿದ್ದಾರೆ. (ಏಜೆನ್ಸೀಸ್)