ವಿಶ್ವಬ್ಯಾಂಕ್​ ಅಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಇಂದ್ರಾ ನೂಯಿ ಹೆಸರು ಪರಿಗಣನೆ?

ನ್ಯೂಯಾರ್ಕ್​: ಜಿಮ್​ ಯಂಗ್​ ಕಿಮ್​ ಅವರ ನಿರ್ಗಮನದಿಂದ ತೆರವಾಗಿರುವ ವಿಶ್ವಬ್ಯಾಂಕ್​ ಅಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ, ಪೆಪ್ಸಿಕೋ ಮಾಜಿ ಸಿಇಒ ಇಂದ್ರಾ ನೂಯಿ ಅವರನ್ನು ವೈಟ್​ಹೌಸ್​ ಪರಿಗಣಿಸಿರುವುದಾಗಿ ನ್ಯೂಯಾರ್ಕ್​ ಟೈಮ್​ ವರದಿ ಮಾಡಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪುತ್ರಿ ಇವಾಂಕಾ ಟ್ರಂಪ್​ ವಿಶ್ವಬ್ಯಾಂಕ್​ ಅಧ್ಯಕ್ಷ ಸ್ಥಾನಕ್ಕೆ ಇಂದ್ರಾ ನೂಯಿ ಅವರ ಹೆಸರನ್ನು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಇಂದ್ರಾ ನೂಯಿ ಅವರು ಒಪ್ಪಿಕೊಂಡಿದ್ದಾರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ.

ಇಂದ್ರಾ ನೂಯಿ ಭಾರತ ಮೂಲದವರು. ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಆಹಾರ ಮತ್ತು ಪಾನೀಯ ಸಂಸ್ಥೆ ಪೆಪ್ಸಿಕೋದಲ್ಲಿ 12 ವರ್ಷ ಸಿಇಒ ಚುಕ್ಕಾಣಿ ಹಿಡಿದಿದ್ದರು. ಒಟ್ಟು 24ವರ್ಷ ಪೆಪ್ಸಿಕೋ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದ್ದ ಇಂದ್ರಾ 2018ರ ಅಕ್ಟೋಬರ್​ನಲ್ಲಿ ನಿವೃತ್ತರಾಗಿದ್ದರು. ನಂತರ ಚೇರ್​ಮನ್​ ಆಗಿ ಮುಂದುವರಿದಿದ್ದರು. ಸದ್ಯ ಲುಗುರ್ಟಾ ಪೆಪ್ಸಿಕೋದ ಸಿಇಒ ಆಗಿದ್ದಾರೆ.

ವಿಶ್ವಬ್ಯಾಂಕ್​ ಅಧ್ಯಕ್ಷಸ್ಥಾನದಿಂದ ಕಿಮ್​ ನಿರ್ಗಮಿಸಿದ ಬಳಿಕ ಟ್ರಂಪ್​ ಪುತ್ರಿ ಇವಾಂಕಾ ಟ್ರಂಪ್​ ಸೇರಿ ಹಲವರು ರೇಸ್​ನಲ್ಲಿದ್ದರು. ಇವಾಂಕಾ ಟ್ರಂಪ್ ಈಗ ಇಂದ್ರಾ ನೂಯಿ ಅವರನ್ನು ಬೆಂಬಲಿಸಿದ್ದಾರೆ ಎಂದು ಅಲ್ಲಿನ ಪತ್ರಿಕೆಗಳು ವರದಿ ಮಾಡಿವೆ.