ಮೀನುಗಾರರ ನಾಪತ್ತೆಗೆ ನೌಕಾಪಡೆ ಕಾರಣ: ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ

ಉಡುಪಿ: ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಭಾರತೀಯ ನೌಕಾಪಡೆಯೇ ಕಾರಣ. ನೌಕಾಪಡೆಯ ಹಡಗು ಬೋಟ್‌ಗೆ ಅಪಘಾತ ಮಾಡಿದ್ದು, ಇದನ್ನು ಮುಚ್ಚಿಟ್ಟು ನೌಕಾಸೇನೆ ಹುಡುಕುವ ನಾಟಕ ಮಾಡಿದೆ. ಚುನಾವಣೆ ಮುಗಿಯುವವರೆಗೆ ಸತ್ಯ ಮರೆಮಾಚುವ ಪ್ರಯತ್ನ ನಡೆಯುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸುವಾಗ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬರುತ್ತಿದ್ದು, ಮೀನುಗಾರರು ಕಾಣೆಯಾದ ಬಗ್ಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು.

ನನ್ನ ಮೇಲೆ ಆರೋಪ ಮಾಡುತ್ತಿರುವ ಟಿ.ಜೆ.ಅಬ್ರಹಾಂ ಓರ್ವ ಬ್ಲ್ಯಾಕ್‌ಮೇಲರ್. ಸ್ಥಳೀಯ ಬಿಜೆಪಿಯವರು ಆತನನ್ನು ನನ್ನ ಹಿಂದೆ ಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಮುಖರಾದ ಯು.ಆರ್.ಸಭಾಪತಿ, ವಿಶ್ವಾಸ್ ಅಮೀನ್, ಪ್ರಖ್ಯಾತ್ ಶೆಟ್ಟಿ, ನರಸಿಂಹಮೂರ್ತಿ, ಜಿ.ಎ.ಬಾವ, ಎಂ.ಎ. ಗಫೂರ್, ಯತೀಶ್ ಕರ್ಕೇರ, ಸತೀಶ್ ಅಮೀನ್ ಪಡುಕೆರೆ, ಸ್ವಪ್ನ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿದ್ದರು.

ನಾನು ಮೈತ್ರಿ ಅಭ್ಯರ್ಥಿ: ನೀವು ಜೆಡಿಎಸ್ ಸೇರಿದ್ದೀರ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಮೋದ್, ನಾನು ಕಾಂಗ್ರೆಸ್- ಜೆಡಿಎಸ್‌ನ ಮೈತ್ರಿ ಅಷ್ಟೇ, ಇದಕ್ಕಿಂತ ಒಂದು ಮಾತು ಹೆಚ್ಚು ಹೇಳಲ್ಲ ಎಂದರು. ನಾನು ಸ್ಪರ್ಧೆ ಮಾಡುವ ಚಿಹ್ನೆ ಜೆಡಿಎಸ್. ತಾಂತ್ರಿಕ ವಿಷಯ ಜೆಡಿಎಸ್ ನೋಡಿಕೊಳ್ಳುತ್ತದೆ, ಎರಡೂ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಸೋಲಿಸಲು ಪಣ ತೊಟ್ಟಿದ್ದಾರೆ ಎಂದರು.