ಜರ್ಮನಿಯ ಮ್ಯೂನಿಚ್​ನಲ್ಲಿ ಕರ್ನಾಟಕ ಮೂಲದ ದಂಪತಿಗೆ ಚೂರಿ ಇರಿತ, ಪತಿ ಸಾವು

ನವದೆಹಲಿ: ಜರ್ಮನಿಯ ಮ್ಯೂನಿಚ್​ನಲ್ಲಿ ವಲಸಿಗನೊಬ್ಬ ಕರ್ನಾಟಕ ಮೂಲದ ದಂಪತಿಗೆ ಚೂರಿಯಿಂದ ಇರಿದಿದ್ದು, ಪತಿ ಮೃತಪಟ್ಟಿದ್ದಾರೆ. ಪತ್ನಿ ಗಾಯಗೊಂಡಿದ್ದು, ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​, ಭಾರತೀಯ ದಂಪತಿ ಪ್ರಶಾಂತ್​ ಮತ್ತು ಸ್ಮಿತಾ ಬಸ್ರೂರು ಎಂಬವರಿಗೆ ಅಪರಿಚಿತ ವಲಸಿಗನೊಬ್ಬ ಚೂರಿಯಿಂದ ಇರಿದಿದ್ದಾನೆ. ಪ್ರಶಾಂತ್​ ಮೃತಪಟ್ಟಿದ್ದು, ಸ್ಮಿತಾ ಬಸ್ರೂರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಶಾಂತ್​ ಅವರ ಸಹೋದರನನ್ನು ಮ್ಯೂನಿಚ್​ಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಶಾಂತ್​ ಮತ್ತು ಸ್ಮೀತಾ ದಂಪತಿ 15 ವರ್ಷಗಳಿಂದ ಮ್ಯೂನಿಚ್​ನಲ್ಲಿ ನೆಲೆಸಿದ್ದರು. ಇವರಿಗೆ ಒಬ್ಬ ಪುತ್ರಿ ಮತ್ತು ಒಬ್ಬ ಪುತ್ರನಿದ್ದಾನೆ. ಸ್ಮಿತಾ ಸಿದ್ದಾಪುರ ಮೂಲದವರಾದರೆ, ಪ್ರಶಾಂತ್​ ಬಸ್ರೂರು ಮೂಲದವರು.

ಪ್ರಶಾಂತ್​ ಕುಟುಂಬದವರು ಮ್ಯೂನಿಚ್​ ತಲುಪುವವರೆಗೂ ದಂಪತಿಯ ಇಬ್ಬರು ಮಕ್ಕಳ ಆರೈಕೆ ಮಾಡುವಂತೆ ಜರ್ಮನಿಯಲ್ಲಿರುವ ಭಾರತೀಯ ದೂತವಾಸದ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)