ಪಾಕ್​ನಿಂದ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೆ ಕಿರುಕುಳ

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಪಾಕಿಸ್ತಾನ ಕಿರುಕುಳ ನೀಡುತ್ತಿದೆ ಎಂದು ಭಾರತ ಪ್ರತಿಭಟನೆ ನಡೆಸಿದ್ದು, ಈ ಸಂಬಂಧ ಪಾಕ್​ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ.

ಪಾಕಿಸ್ತಾನದ ಗುಪ್ತಚರ ದಳ ಅಧಿಕಾರಿಗಳು ಭಾರತೀಯ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳಾದ ಉಪ ರಾಯಭಾರಿ ಜೆ.ಪಿ. ಸಿಂಗ್​ ಮತ್ತು ಅಜಯ್​ ಬಿಸಾರಿಯಾ ಅವರು ಡಿ. 4 ರಂದು ಇಸ್ಲಾಮಾಬಾದ್​ನಲ್ಲಿ ಮದುವೆ ಸಮಾರಂಭಕ್ಕೆ ತೆರಳಿದ್ದಾಗ ಕೆಲವರು ಇವರನ್ನು ಹಿಂಬಾಲಿಸಿದ್ದಾರೆ. ಜತೆಗೆ ಪಾಕ್​ ಸರ್ಕಾರ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳ ಸಾಮಾಜಿಕ ಜಾಲತಾಣ ಖಾತೆಗಳನ್ನು ಹ್ಯಾಕ್​ ಮಾಡಲು ಪ್ರಯತ್ನಿಸಿದೆ ಎಂದು ಭಾರತ ಸರ್ಕಾರ ಆರೋಪಿಸಿದೆ.

ಕಳೆದ ಭಾನುವಾರ ಭಾರತದಲ್ಲಿರುವ ಪಾಕ್​ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ದೆಹಲಿಯಲ್ಲಿ ಮಹಿಳೆಯೊಬ್ಬರೊಂದಿಗೆ ವಾಗ್ವಾದ ನಡೆಸಿದ್ದರು. ಈ ಸಂಬಂಧ ಮಹಿಳೆ ಸ್ಥಳೀಯ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಅಧಿಕಾರಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಈ ಘಟನೆ ನಡೆದ ಮರುದಿನ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಗೆ ಕಿರುಕುಳ ನೀಡಿರುವ ವರದಿ ಪಾಕಿಸ್ತಾನದಿಂದ ಬಂದಿದೆ. (ಏಜೆನ್ಸೀಸ್​)