ದುಬೈನ ಪ್ರಸಿದ್ಧ ಬೀಚ್​​ನಲ್ಲಿ ಈಜುತ್ತಿದ್ದ ಬೆಂಗಳೂರಿನವ ಇದ್ದಕ್ಕಿದ್ದಂತೆ ಕುಟುಂಬದ ಮುಂದೆಯೇ ಶವವಾದ!

ದುಬೈ: ತನ್ನ ಕುಟುಂಬದೊಂದಿಗೆ ಪ್ರವಾಸದಲ್ಲಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬ ಯುನೈಟೆಡ್​​ ಅರಬ್​ ಎಮಿರೇಟ್ಸ್​(ಯುಎಇ)ನ ಪ್ರಸಿದ್ಧ ಬೀಚ್​ ಜುಮೇರಾದಲ್ಲಿ ಈಜುವಾಗ ಹೃದಾಯಾಘಾತ ಸಂಭವಿಸಿ, ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಭಾನುವಾರ ವರದಿಯಾಗಿದೆ.

ಮೃತರನ್ನು ಜಾನ್​ ಪ್ರೀತಂ ಪೌಲ್ ಎಂದು ಗುರುತಿಸಲಾಗಿದೆ. ಈತ ಬೆಂಗಳೂರು ಮೂಲದವರಾಗಿದ್ದು, ಶನಿವಾರ ಘಟನೆ ನಡೆದ ಸಮಯದಲ್ಲಿ ತನ್ನ ಮೂವರು ಮಕ್ಕಳು ಹಾಗೂ ಸಂಬಂಧಿಕರೊಂದಿಗೆ ಇದ್ದ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ತನ್ನ ದೇಹದಲ್ಲಿ ಅಂಟಿಕೊಂಡಿದ್ದ ಮರಳನ್ನು ಶುಚಿಗೊಳಿಸುವ ಸಲುವಾಗಿ ಮೃತ ಪೌಲ್​, ಬೀಚ್​​ಗೆ ಇಳಿದು ಈಜುತ್ತಿದ್ದಾಗ ಘಟನೆ ಸಂಭವಿಸಿದೆ.​

ಘಟನೆ ಕುರಿತು ಮಾತನಾಡಿರುವ ಮೃತ ಪೌಲ್​ ಪತ್ನಿ ಎವಿಲೈನ್​, ಅವರು ಮತ್ತೆ ಬೀಚ್​ಗೆ ಇಳಿಯುವ ಮುನ್ನ ನಾವು ಆ ಸ್ಥಳವನ್ನು ಬಿಟ್ಟು ಸ್ವಲ್ಪ ದೂರ ಬಂದಿದ್ದೆವು. ಕೆಲವೇ ಕ್ಷಣಗಳಲ್ಲಿ ಅವರ ಮೃತದೇಹ ಬೀಚ್​​ನಲ್ಲಿ ತೇಲುತ್ತಿರುವುದನ್ನು ನಮ್ಮ ಕುಟುಂಬ ನೋಡಿತು. ಈ ಘಟನೆ ಹೇಗೆ ನಡೆಯಿತು ಎಂಬುದು ನನಗೆ ಈಗಲೂ ತಿಳಿಯುತ್ತಿಲ್ಲ. ಅವರೊಬ್ಬ ಒಳ್ಳೆಯ ಈಜುಪಟುವಾಗಿದ್ದರು. ಆದರೆ, ನೀರಿನಲ್ಲಿ ಮುಳುಗಿದ್ದಾಗ ಅವರು ಹೃದಯಾಘಾತದಿಂದ ಬಳಲಿದ್ದರು ಎಂದು ಪೊಲೀಸರು ತಿಳಿಸಿದರು ಎಂದು ಹೇಳಿದ್ದಾರೆ.

ಪೌಲ್​ ಹೃದಯಾಘಾತದಿಂದಲೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಾಹಿತಿ ಖಚಿತಪಡಿಸಿರುವುದಾಗಿ ಪೌಲ್​ ಅವರ ಮಾಜಿ ಬಾಸ್​ ಜಿಜೋ ಜಲಾಲ್​ ಅವರು ಕೂಡ ತಿಳಿಸಿದ್ದಾರೆ.

ಪೌಲ್​ ಅವರು ಯುಎಇ ಮೂಲದ ರೆಡಿಯೋ ಸ್ಟೇಷನ್​ನಲ್ಲಿ ಸೇಲ್ಸ್​ ಹೆಡ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 14 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಸದ್ಯ ಪೌಲ್​ ಮೃತದೇಹವನ್ನು ಅಲ್ ಕುಸೈಸ್​ನಲ್ಲಿರುವ ಶವಗಾರದಲ್ಲಿ ಇರಿಸಲಾಗಿದೆ. ಭಾನುವಾರ ಮೃತದೇಹವನ್ನು ನಮ್ಮ ವಶಕ್ಕೆ ನೀಡುತ್ತಾರೆ ಎಂದು ತಿಳಿಸಿರುವ ಪೌಲ್​ ಪತ್ನಿ, ಅಂತಿಮ ಕಾರ್ಯಕ್ಕೆ ಬೆಂಗಳೂರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *