ಮೊಬೈಲಲ್ಲೇ ಹಾಲು ಪರೀಕ್ಷೆ

ಹೈದರಾಬಾದ್: ಹಾಲಿನ ಗುಣಮಟ್ಟವನ್ನು ಸ್ಮಾರ್ಟ್​ಫೋನ್ ಮೂಲಕ ಪರೀಕ್ಷಿಸಿ, ಸುಲಭವಾಗಿ ತಿಳಿದುಕೊಳ್ಳುವ ಸೌಲಭ್ಯ ಶೀಘ್ರದಲ್ಲೇ ಲಭ್ಯವಾಗಲಿದೆ. ಹೈದರಾಬಾದ್ ಐಐಟಿಯ ಸಂಶೋಧಕರು ಈ ತಂತ್ರಜ್ಞಾನ ಕುರಿತು ಸಂಶೋಧನೆ ನಡೆಸುತ್ತಿದ್ದು, ಪರೀಕ್ಷೆ ಅಂತಿಮ ಘಟ್ಟದಲ್ಲಿದೆ. ಮೊದಲ ಹಂತದಲ್ಲಿ ಸೆನ್ಸರ್​ಚಿಪ್ ಆಧಾರಿತ ವ್ಯವಸ್ಥೆಯಲ್ಲಿ ಹಾಲಿನ ಪಿಎಚ್​ನ್ನು ಪರೀಕ್ಷಿಸುವ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ಹಾಲಿಗೆ ನಾನಾ ಬಗೆಯ ವಸ್ತುಗಳನ್ನು ಬೆರೆಸಿ, ಪರೀಕ್ಷಿಸಿದಾಗ ಮಾಹಿತಿ ನೀಡಿಕೆಯಲ್ಲಿ ಶೇ.99.71 ನಿಖರತೆ ಸಾಧಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹಾಲಿನ ಕಲೆಬೆರಕೆ ಪತ್ತೆ ಮಾಡಲು ಸಂಶೋಧಕರು ಎಲೆಕ್ಟ್ರಓಸ್ಪಿನ್ನಿಂಗ್ ಎಂಬ ನ್ಯಾನೋ ನೈಲಾನ್​ನ ಸೂಕ್ಷ್ಮ ಎಳೆಗಳನ್ನು ಒಳಗೊಂಡ ಹಾಳೆಯಂತಹ ವಸ್ತುವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹಾಳೆ ಮೂರು ಡೈಗಳನ್ನು ಒಳಗೊಂಡಿದೆ. ಹಾಲಿನಲ್ಲಿರುವ ಆಮ್ಲೀಯ ಅಂಶವನ್ನು ಆಧರಿಸಿ ಡೈಗಳ ಬಣ್ಣ ಬದಲಾಗುತ್ತದೆ. ಜತೆಗೆ ಸ್ಮಾರ್ಟ್​ಪೋನ್​ಗೆ ಅಗತ್ಯವಾದ ಅಲ್ಗಾರಿದಂನ್ನು ಸಂಶೋಧಕರು ರೂಪಿಸಿದ್ದಾರೆ. ಹಾಲಿನಲ್ಲಿ ಅದ್ದಿದ ಬಳಿಕ ಬಣ್ಣ ಬದಲಿಸುವ ಹಾಳೆಯ ಚಿತ್ರವನ್ನು ಕ್ಯಾಮರಾದಲ್ಲಿ ತೆಗೆದುಕೊಂಡು, ಫೋನ್​ನಲ್ಲಿ ಮೊದಲೇ ಅಳವಡಿಸಿರುವ ಬಣ್ಣಗಳೊಂದಿಗೆ ತಾಳೆ ಹಾಕಿದರೆ ಗುಣಮಟ್ಟ ತಿಳಿಯಲಿದೆ. ಪ್ರೊ. ಶಿವ್​ಗೋವಿಂದ್ ಸಿಂಗ್ ನೇತೃತ್ವದಲ್ಲಿ ಅಸೋಸಿಯೇಟ್ ಪ್ರೊಫೆಸರ್​ಗಳಾದ ಸೌಮ್ಯ , ಶಿವರಾಮಕೃಷ್ಣ ಈ ಸಂಶೋಧನೆ ಕೈಗೊಂಡಿದ್ದಾರೆ.