VIDEO: ಭಾರತದ ಮೌಕಾ, ಮೌಕಾ… ಜಾಹೀರಾತಿಗೆ ಪಾಕ್​ ಸೆಡ್ಡು: ವಿಂಗ್​ ಕಮಾಂಡರ್​ ಅಭಿನಂದನ್​ ತದ್ರೂಪಿ ಬಳಸಿ ಪ್ರತಿ ಜಾಹೀರಾತು!

ನವದೆಹಲಿ: ಕ್ರಿಕೆಟ್​ ವಿಶ್ವಕಪ್​ ಇರಲಿ ಅಥವಾ ಇನ್ನಾವುದೇ ಟೂರ್ನಿ, ಟೆಸ್ಟ್​ ಮ್ಯಾಚ್​ಗಳಿರಲಿ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಗಳು ಎಂದರೆ ಅಲ್ಲಿ ರೋಚಕತೆ, ಕುತೂಹಲ ಇದ್ದೇ ಇರುತ್ತದೆ. ಈ ಬಾರಿಯ ಕ್ರಿಕೆಟ್​ ವಿಶ್ವಕಪ್​ನಲ್ಲಿ ಕೂಡ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಆದರೆ ಭಾರತ-ಪಾಕ್​ ನಡುವಿನ ಮೈದಾನದ ಮೇಲಿನ ಪೈಪೋಟಿ ಈಗ ಟಿವಿ ಮಾಧ್ಯಮಗಳಿಗೂ ಲಗ್ಗೆ ಇಟ್ಟಿದೆ. ಉಭಯ ರಾಷ್ಟ್ರಗಳು ತಮ್ಮ ತಮ್ಮ ರಾಷ್ಟ್ರೀಯ ತಂಡವನ್ನು ಬೆಂಬಲಿಸಿ ಜಾಹೀರಾತುಗಳನ್ನು ಬಿಡುಗಡೆ ಮಾಡಿವೆ. ಭಾರತ ಮೌಕಾ, ಮೌಕಾ.. ಎಂಬ ಜಾಹೀರಾತನ್ನು ಬಿಡುಗಡೆ ಮಾಡಿ, ವಿಶ್ವಕಪ್​ ಟೂರ್ನಿಯಲ್ಲಿ ಪಾಕ್​ ವಿರುದ್ಧ ಮತ್ತೊಂದು ಗೆಲುವು ದಾಖಲಿಸುವಂತೆ ತಂಡವನ್ನು ಹುರಿದುಂಬಿಸುತ್ತಿದೆ.

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತವನ್ನು ಅದರಲ್ಲೂ ವಿಶೇಷವಾಗಿ ತನ್ನ ಯುದ್ಧವಿಮಾನಗಳು ಭಾರತದ ವಾಯುಗಡಿಯನ್ನು ಉಲ್ಲಂಘಿಸಿದಾಗ ಅವುಗಳನ್ನು ಬೆನ್ನಟ್ಟಿ ಬಂದು ಪಾಕ್​ನ ಎಫ್​-16 ಯುದ್ಧವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ವೀರಯೋಧ ಅಭಿನಂದನ್​ ಅವರನ್ನು ಲೇವಡಿ ಮಾಡುವ ಜಾಹೀರಾತನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.

ಪಾಕಿಸ್ತಾನದ ಜಾಜ್​ ಟಿವಿಯ ಈ ಜಾಹೀರಾತಿಗೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್​ ಮಾಡುತ್ತಿದ್ದಾರೆ.

ಈ ಜಾಹೀರಾತನ್ನು ಗಮನಿಸಿರುವ ಭಾರತದ ಟ್ರೋಲಿಗರು, ಪಾಕಿಸ್ತಾನಕ್ಕೆ ಚಹಾ ಮಾಡಲು, ಚಹಾ ಕಪ್​ ಅನ್ನು ಇಸಿದುಕೊಳ್ಳಲಷ್ಟೇ ಶಕ್ತಿ ಇದೆ ಎಂದು ಲೇವಡಿ ಮಾಡಿದ್ದಾರೆ. ಇನ್ನು ಕೆಲವರು ಈ ಬಾರಿ ಭಾರತ ವಿಶ್ವಕಪ್​ ಗೆಲ್ಲುತ್ತೆ ಎಂಬ ದೃಢನಂಬಿಕೆ ಪಾಕಿಸ್ತಾನಕ್ಕೂ ಇದೆ ಎಂದಾಯಿತು ಎಂದು ಹೇಳಿದ್ದಾರೆ.

ಜಾಹೀರಾತಿನಲ್ಲಿ ಏನಿದೆ?
ಜಾಹೀರಾತಿನ ಆರಂಭದಲ್ಲಿ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರ ತದ್ರೂಪಿ ನೀಲಿ ಬಣ್ಣದ ಟೀಶರ್ಟ್​ ಹಾಕಿಕೊಂಡು ಚಹಾ ಹೀರುತ್ತಾ ಕುಳಿತಿರುವುದು ಕಂಡುಬರುತ್ತದೆ. ಬಳಿಕ ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿ ಟಾಸ್​ ಆದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸುತ್ತಾನೆ. ಅದಕ್ಕಿ ಅಭಿನಂದನ್​ ತದ್ರೂಪಿ ‘ಅದನ್ನು ಹೇಳುವಂತಿಲ್ಲ..’ ಎಂದು ಉತ್ತರಿಸುತ್ತಾನೆ. ನಂತರ ಆಡುವ ಹನ್ನೊಂದರ ಬಳಗದಲ್ಲಿ ಯಾರು ಇರುತ್ತಾರೆ ಎಂದು ಹಿನ್ನೆಲೆ ಧ್ವನಿ ಪ್ರಶ್ನಿಸುತ್ತದೆ. ಅದಕ್ಕೂ ತದ್ರೂಪಿ ‘ಅದನ್ನು ಹೇಳುವಂತಿಲ್ಲ…’ ಎನ್ನುತ್ತಾನೆ. ಬಳಿಕ ಚಹಾ ಹೇಗಿದೆ ಎಂಬ ಹಿನ್ನೆಲೆಯ ಧ್ವನಿಯ ಪ್ರಶ್ನೆಗೆ ತುಂಬಾ ಚೆನ್ನಾಗಿದೆ ಎಂದು ತದ್ರೂಪಿ ಉತ್ತರಿಸುತ್ತಾನೆ.

ಆನಂತರದಲ್ಲಿ ಹೋಗುವಂತೆ ಹಿನ್ನೆಲೆ ಧ್ವನಿ ಅಭಿನಂದನ್​ ತದ್ರೂಪಿಗೆ ಸೂಚಿಸುತ್ತದೆ. ಅದರಂತೆ ಕಪ್​ ಸಹಿತ ಎದ್ದುಹೋಗುತ್ತಿರುವ ತದ್ರೂಪಿಯನ್ನು ಕೈಯಿಂದ ತಡೆಯುವ ಹಿನ್ನೆಲೆ ಧ್ವನಿ, ಕಪ್​ ಅನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೀಯಾ ಎಂದು ಪ್ರಶ್ನಿಸುತ್ತಾ, ಅದನ್ನು ಕಸಿದುಕೊಳ್ಳುತ್ತದೆ.

 

Leave a Reply

Your email address will not be published. Required fields are marked *