ವಿಜಯಪುರದಲ್ಲಿ ಭಾರತೀಯ ಸಂಸ್ಕೃತಿ ಅನಾವರಣ

| ಹೀರಾನಾಯ್ಕ ಟಿ. ವಿಜಯಪುರ

ಇಲ್ಲಿನ ಕಗ್ಗೋಡದಲ್ಲಿ ಡಿ.31ರವರೆಗೆ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವ ವಿಜಯಪುರ ನಗರದಲ್ಲಿ ಸೋಮವಾರ ಉದ್ಘಾಟನೆಯಾಗಿದ್ದು, ಮೊದಲ ದಿನ ನಡೆದ ಬೃಹತ್ ಶೋಭಾ ಯಾತ್ರೆಯಲ್ಲಿ ಭಾರತೀಯ ಪಾರಂಪರಿಕ, ವೈವಿಧ್ಯಮಯ ಕಲಾ ಸಂಸ್ಕೃತಿಗಳು ಅನಾವರಣಗೊಂಡವು.

ಪಾರಂಪರಿಕ ಸಾಂಸ್ಕೃತಿಕ ಕಲೆಗಳಾದ ಸುಗಮ ಸಂಗೀತ, ಭರತ ನಾಟ್ಯ, ಚೌಡಕಿ ಪದ, ಸಂಪ್ರದಾಯ ಹಾಡುಗಳು, ಜನಪದ ಗೀತೆ, ಬಂಜಾರ ನೃತ್ಯ, ವಚನ ಸಂಗೀತ, ದಾಸ ವಾಣಿ, ರಂಗಗೀತೆಗಳು, ಹಂತಿ ಪದಗಳು, ಭಜನೆ, ಗೊಂದಲಿ ಹಾಡು, ಕೊಳಲು ವಾದನ, ಶ್ರೀಕೃಷ್ಣ ಪಾರಿಚಾತ ರೂಪಕ, ದೊಡ್ಡಾಟ ರಂಗಗೀತೆಗಳು, ಹಿಂದಿ ದೇಶಭಕ್ತಿ ಗೀತೆಗಳು, ಗೀಗೀ ಪದ, ಶಾಸ್ತ್ರೀಯ ಸಂಗೀತ, ಸಮೂಹ ಗೀತೆ ಹಾಗೂ ಇನ್ನೂ ಹಲವಾರು ಕಲಾಪ್ರಕಾರಗಳು ಪ್ರೇಕ್ಷಕರ ಗಮನ ಸೆಳೆದವು.

ಸ್ತಬ್ಧ ಚಿತ್ರಗಳ ವೈಭವ: ಶೋಭಾ ಯಾತ್ರೆಯಲ್ಲಿ ಮಕ್ಕಳಿಂದ ಯೋಗ ಪ್ರದರ್ಶನ, ಹಂಡೆ ವಜೀರ್ ಸಮಾಜದ ಇತಿಹಾಸ ದರ್ಶನ, ಮುಳವಾಡದ ಶಾಲಾ ಮಕ್ಕಳಿಂದ ಆಧ್ಯಾತ್ಮಿಕ ಸ್ತಬ್ಧ ಚಿತ್ರ, ಕಲಬುರಗಿ ಜಿಲ್ಲೆ ಶಿರನೂರ ಬಸವೇಶ್ವರ ವಿದ್ಯಾಕೇಂದ್ರದಿಂದ ಶರಣ ಬಸವೇಶ್ವರ ರೂಪಕ, ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯದಿಂದ ಚೈತನ್ಯ ಮಂಟಪ, ಶ್ರೀರಾಮಕೃಷ್ಣ ವಸತಿ ಶಾಲೆಯಿಂದ ರಾಮಕೃಷ್ಣ ಪರಮಹಂಸ, ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಸ್ತಬ್ಧ ಚಿತ್ರ, ಬಿಎಲ್​ಡಿಇ ಹಾಗೂ ಬಿವಿವಿ ಸಂಸ್ಥೆಯಿಂದ ಶೈಕ್ಷಣಿಕ ರೂಪಕ ಗಮನ ಸೆಳೆದವು. ಇನ್ನು ಟಾಂಗಾ ಗಾಡಿಗಳಿಂದ ಮೆರವಣಿಗೆ, ಡೋಲಿ, ಪತಂಜಲಿ ಯೋಗ ಸಮಿತಿಯಿಂದ ಸ್ತಬ್ಧ ಚಿತ್ರ, ಭಾರತಾಂಬೆ, ಕಿತ್ತೂರುರಾಣಿ ಚನ್ನಮ್ಮ, ಒನಕೆ ಓಬವ್ವ, ಛತ್ರಪತಿ ಶಿವಾಜಿ, ಸುಭಾಸ್ ಚಂದ್ರಬೋಸ್ ಸೇರಿ ರಾಷ್ಟ್ರಕ್ಕಾಗಿ ತ್ಯಾಗ, ಬಲಿದಾನಗೈದ ಸಾಧಕರ ಭಾವಚಿತ್ರಗಳ ಮೆರವಣಿಗೆ ಆಕರ್ಷಣೀಯವಾಗಿತ್ತು.

 ಶ್ರೀ ಮುರುಘಾ ಶರಣರಿಂದ ಚಾಲನೆ

ಶೋಭಾ ಯಾತ್ರೆಗೆ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾಶರಣರು ಚಾಲನೆ ನೀಡಿದರು. ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಮಹಾರಾಷ್ಟ್ರದ ಕನ್ಹೇರಿ ಮಠದ ಶ್ರೀಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಬಾಲಗಾಂವ್​ನ ಗುರುದೇವಾಶ್ರಮದ ಶ್ರೀ ಅಮೃತಾನಂದ ಸ್ವಾಮೀಜಿ, ಭಾರತ ವಿಕಾಸ ಸಂಗಮದ ಸಂಸ್ಥಾಪಕ ಕೆ.ಎನ್. ಗೋವಿಂದಾಚಾರ್ಯ, ಸಂರಕ್ಷಕ ಬಸವರಾಜ ಪಾಟೀಲ ಸೇಡಂ, ಸಿದ್ಧೇಶ್ವರ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಎಂಎಲ್​ಸಿ ಸುನೀಲ್ ಗೌಡ ಪಾಟೀಲ್ ಇನ್ನಿತರರು ಉಪಸ್ಥಿತರಿದ್ದರು.

 ಒಂದು ಲಕ್ಷ ತಾಯಂದಿರಿಂದ ಮಕ್ಕಳಿಗೆ ಕೈತುತ್ತು

ಮಕ್ಕಳಿಗೆ ಕೈತುತ್ತು ನೀಡುವ ಮಾತೃಸಂಗಮದಲ್ಲಿ ಸುಮಾರು 1 ಲಕ್ಷ ತಾಯಂದಿರು ಪಾಲ್ಗೊಳ್ಳಲಿದ್ದಾರೆ. ಜತೆಗೆ ಮಕ್ಕಳಿಂದ ಪಾದಪೂಜೆ ನಡೆಯಲಿದೆ. ಇದಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಅಮ್ಮನ ಕೈತುತ್ತು ತಿನ್ನಲು ಮಕ್ಕಳು ತಯಾರಾಗಿದ್ದಾರೆ. ಈಗಾಗಲೇ 50 ಸಾವಿರ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ಮಕ್ಕಳಿಗೆ ಕೈತುತ್ತು ನೀಡಲು ಒಂದು ಲಕ್ಷ ಹೋಳಿಗೆ, ಖಡಕ್ ರೊಟ್ಟಿಗಳು ತಯಾರಾಗಿವೆ. ಡಿ.25ರಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತೃಸಂಗಮಕ್ಕೆ ಚಾಲನೆ ನೀಡಲಿದ್ದಾರೆ. ಗದಗಿನ ಶ್ರೀ ನಿರ್ಭಯಾನಂದ ಸ್ವಾಮೀಜಿ , ಮೌಂಟ್ ಅಬುವಿನಿಂದ ಬ್ರಹ್ಮಕುಮಾರಿ ಉಷಾ ಅಕ್ಕನವರು, ವಿಜಯನಗರ ರಾಜಮನೆತನದ ಶ್ರೀಕೃಷ್ಣದೇವರಾಯ, ಇಂಗ್ಲೆಂಡ್​ನ ಲ್ಯಾಂಬೆಥ್​ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ, ಸಚಿವೆ ಡಾ. ಜಯಾಮಾಲಾ ಇನ್ನಿತರರು ಭಾಗವಹಿಸಲಿದ್ದಾರೆ.

 6 ಸಾಧಕರಿಗೆ ಪ್ರಶಸ್ತಿ

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಆರು ಸಾಧಕರಿಗೆ ಮಾತೃಸಂಗಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಉಡುಪಿಯ ಸ್ವರ್ಣಾ ಭಟ್, ಶಿಕ್ಷಣ ಕ್ಷೇತ್ರದಲ್ಲಿ ಬಾಗಲಕೋಟೆಯ ಎನ್.ಜಿ. ಕರೂರ ಅವರಿಗೆ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಇನ್ನು ಬಾಗಲಕೋಟೆಯ ಮಾಲತಿ ಸರದೇಶಪಾಂಡೆ (ಕಿರುತೆರೆ), ಧಾರವಾಡದ ಹುತಾತ್ಮ ಹನುಮಂತಪ್ಪ ಕೊಪ್ಪದ (ಹುತಾತ್ಮ ಯೋಧ), ಬೆಂಗಳೂರಿನ ವೈ.ಎಸ್. ಪವಿತ್ರಾ (ವಿಪ್ರೊ ಸಂಸ್ಥೆ), ಬೆಳಗಾವಿಯ ನಾಗರತ್ನ (ಆರೋಗ್ಯ) ಅವರಿಗೆ ರಾಜ್ಯ ಪ್ರಶಸ್ತಿ ನೀಡಲಾಗುತ್ತದೆ.