ಮಾತೃವಾತ್ಸಲ್ಯಕ್ಕೆ ಸಾಕ್ಷಿಯಾದ ಭಾರತೀಯ ಸಂಸ್ಕೃತಿ ಉತ್ಸವ

| ಹೀರಾನಾಯ್ಕ ಟಿ. ವಿಜಯಪುರ

ಅಮ್ಮಂದಿರಿಂದ ಮಕ್ಕಳಿಗೆ ಕೈತುತ್ತು. ಮಕ್ಕಳಿಂದ ತಾಯಂದಿರಿಗೆ ಪಾದಪೂಜೆ, ಮಾತೃದೇವೋಭವ ಎಂಬ ನಮನ. ಇವು ವಿಜಯಪುರದ ಕಗ್ಗೋಡದಲ್ಲಿ ಹಮ್ಮಿಕೊಂಡಿರುವ ಭಾರತೀಯ ಸಂಸ್ಕೃತಿ ಉತ್ಸವದ ಎರಡನೇ ದಿನ ನಡೆದ ಮಾತೃಸಂಗಮ ಕಾರ್ಯಕ್ರಮದಲ್ಲಿ ಕಂಡು ಬಂದ ಅವಿಸ್ಮರಣೀಯ ದೃಶ್ಯಗಳು.

ಮಾತೃಸಂಗಮಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದಲ್ಲದೆ ಬೇರೆ ಜಿಲ್ಲೆಗಳಿಂದಲೂ ಬುತ್ತಿ ಕಟ್ಟಿಕೊಂಡು ಬಂದಿದ್ದರು. ಸಾವಿರಾರು ಮಕ್ಕಳು-ಮಹಿಳೆಯರು ಪೂರ್ವತಯಾರಿಯೊಂದಿಗೆ ಉತ್ಸವಕ್ಕೆ ಆಗಮಿಸಿದ ಪರಿ ವಿಶೇಷವಾಗಿತ್ತು.

ಕೈತುತ್ತು ಸವಿದ ಮಕ್ಕಳು: ತಾಯಿಯ ಕೈ ತುತ್ತಿಗೆ ಬಹಳಷ್ಟು ಮಹತ್ವ ಇದೆ ಎನ್ನುವುದಕ್ಕೆ ಭಾರತೀಯ ಸಂಸ್ಕೃತಿ ಉತ್ಸವ ಸಾಕ್ಷಿಯಾಗಿತ್ತು. ಕ್ರಿಸ್​ವುಸ್ ಪ್ರಯುಕ್ತ ಶಾಲಾ-ಕಾಲೇಜುಗಳಿಗೆ ರಜೆ ಇದ್ದಿದ್ದರಿಂದ ಮಕ್ಕಳು ತಾಯಂದಿರನ್ನು ಕರೆದುಕೊಂಡು ಬಂದಿದ್ದು ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಮನೆಯಿಂದ ಕಟ್ಟಿಕೊಂಡು ಬಂದಿದ್ದ ಚಿತ್ರಾನ್ನ, ಅವಲಕ್ಕಿ, ಶೇಂಗಾ ಹೋಳಿಗೆ, ರೊಟ್ಟಿ ಇನ್ನಿತರ ತಿಂಡಿಗಳನ್ನು ಮಕ್ಕಳು ಸವಿದರು. ತಾಯ್ತನದ ಜವಾಬ್ದಾರಿಗಳಿಂದ ವಿಮುಖರಾಗುತ್ತಿರುವ ತಾಯಂದಿರಿಗೆ ತಾಯ್ತನದ ಕರ್ತವ್ಯ ಹಾಗೂ ಪರಿವಾರದ ಮಹತ್ವ ತಿಳಿಸುವ ಸದುದ್ದೇಶದಿಂದ ಮಾತೃವಾತ್ಸಲ್ಯಕ್ಕೆ ಅರ್ಥ ಕಲ್ಪಿಸುವ ‘ಮಾತೃಸಂಗಮ’ ಆಯೋಜಿಸಿದ್ದು ಅರ್ಥ ಪೂರ್ಣವಾಗಿತ್ತು. ಸ್ವಾಮಿ ವಿವೇಕಾನಂದ, ಭಾರತಾಂಬೆ, ಕೃಷ್ಣ, ಯಶೋಧರೆ, ಶಿವ ಮತ್ತಿತರ ವೇಷಗಳಲ್ಲಿ ಮಕ್ಕಳು ಆಗಮಿಸಿದ್ದು ವಿಶೇಷವಾಗಿತ್ತು. ವಿಜಯಪುರದ ಅನಾಥಾಶ್ರಮದ ಮಕ್ಕಳಿಗೆ ಮೊದಲು ಕೈತುತ್ತು ನೀಡುವ ಮೂಲಕ ತಾಯಂದಿರು ಮಾತೃಸಂಗಮಕ್ಕೆ ಮೆರಗು ನೀಡಿದರು. ಇದು ತಾಯಿಪ್ರೀತಿಯ ಕೊರತೆಯಿಂದ ಕಂಗೆಟ್ಟಿದ್ದ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿತು. ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರೂ ಸನಾತನ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದು, ಕೆಲವರು ಮಕ್ಕಳನ್ನು ಹಾಸ್ಟೆಲ್​ನಲ್ಲಿ ಬಿಡುತ್ತಿದ್ದಾರೆ. ಇದರಿಂದಾಗಿ ಮಕ್ಕಳು ಮಾತೃವಾತ್ಸಲ್ಯದಿಂದ ದೂರವಾಗುತ್ತಿದ್ದಾರೆ ಎಂದು ಮಹಿಳೆ ಸಂಗೀತಾ ನಾಯ್ಕ ಅಭಿಪ್ರಾಯಪಟ್ಟರು.

ಸಿಎಂ ಎಚ್​ಡಿಕೆ ಉದ್ಘಾಟನೆ: ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಪೂರ್ವಿಕರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದು ಮಾತೃಸಂಗಮವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯ ಪರಂಪರೆ ಜಗತ್ತಿನಲ್ಲೇ ವಿಶಿಷ್ಟವಾದದ್ದು, ಭೂಮಿಯನ್ನು ತಾಯಿ ಎಂದು ಭಾವಿಸಿರುವ ಸಂಸ್ಕೃತಿ ನಮ್ಮದು. ಮಾತೃದೇವೋಭವ ಎಂಬ ಶ್ರೇಷ್ಠ ನಂಬಿಕೆಯ ದೇಶ ಭಾರತ ಎಂದರು.

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ಗದಗಿನ ಶ್ರೀ ನಿರ್ಭಯಾನಂದ ಸ್ವಾಮೀಜಿ, ಮೌಂಟ್ ಅಬುವಿನ ಬ್ರಹ್ಮಕುಮಾರಿ ಉಷಾ ಅಕ್ಕ, ಭಾರತೀಯ ವಿಕಾಸ ಸಂಗಮದ ಸಂಸ್ಥಾಪಕ ಕೆ.ಎನ್. ಗೋವಿಂದಾಚಾರ್ಯ, ಸಂರಕ್ಷಕ ಬಸವರಾಜ ಪಾಟೀಲ ಸೇಡಂ, ಖ್ಯಾತ ವೈದ್ಯೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಇನ್ನಿತರರು ಉಪಸ್ಥಿತರಿದ್ದರು.

ಜವಾರಿ ಊಟಕ್ಕೆ ಮನಸೋತ ಜನತೆ: ಮಾತೃಸಂಗಮಕ್ಕೆ ಆಗಮಿಸಿದ ಸಾವಿರಾರು ಜನರು ಉತ್ತರ ಕರ್ನಾಟಕ ಶೈಲಿಯ ಖಡಕ್ ರೊಟ್ಟಿ, ಶೇಂಗಾ ಹೋಳಿಗೆ, ಶೇಂಗಾ ಚಟ್ನಿ, ಲಾಡು, ಹುಗ್ಗಿ, ಅನ್ನ, ಸಾಂಬಾರ್ ಸವಿದದ್ದು ವಿಶೇಷವಾಗಿತ್ತು. ರಾಜ್ಯದ ಬೆಳಗಾವಿ, ಕಲಬುರಗಿ, ಗದಗ, ಧಾರವಾಡ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ ಸೇರಿ ಇತರ ಜಿಲ್ಲೆಗಳಿಂದ ಜನರು ಆಗಮಿಸಿದ್ದರು. ಇನ್ನು ಮಹಾರಾಷ್ಟ್ರದ ಜತ್, ಸಾಂಗ್ಲಿ, ಮಿರಜ್ ಮತ್ತಿತರ ಕಡೆಗಳಿಂದ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇಂದು ಜ್ಞಾನ ಸಂಗಮ

ಉತ್ಸವದ ಮೂರನೇ ದಿನವಾದ ಡಿ. 26ರಂದು ಜ್ಞಾನ ಸಂಗಮ ನಡೆಯಲಿದೆ. ಆದಿಚುಂಚನಗಿರಿ ಸಂಸ್ಥಾನಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ಕೇಂದ್ರ ಸಚಿವ ಪ್ರಕಾಶ ಜಾವಡೆಕರ್, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ, ಶಾಸಕ ಮುರುಗೇಶ ನಿರಾಣಿ ಇನ್ನಿತರರು ಭಾಗವಹಿಸಲಿದ್ದಾರೆ. ಸಂಜೆ ಮೂಡಬಿದರೆಯ ಆಳ್ವಾಸ್ ನುಡಿಸಿರಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ದಕ್ಷಿಣಕನ್ನಡದ ಮೋಹನ್ ಆಳ್ವ ಸೇರಿ 7 ಜನ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.