ಭಾರತಕ್ಕೆ ಕಿವೀಸ್ ನೆಲದಲ್ಲಿ ಕಾದಿದೆ ಬಿಗ್ ಟೆಸ್ಟ್

ಆಕ್ಲೆಂಡ್: ಏಕದಿನ ವಿಶ್ವಕಪ್​ಗೆ ಪೂರ್ವಭಾವಿಯಾಗಿ ಆಸ್ಟ್ರೇಲಿಯಾದಲ್ಲಿ ಪ್ರಚಂಡ ಗೆಲುವು ದಾಖಲಿಸಿ ಬೀಗಿರುವ ಭಾರತ ತಂಡ, ನ್ಯೂಜಿಲೆಂಡ್ ನೆಲದ ಸವಾಲಿಗೆ ಸಜ್ಜಾಗಿದೆ. ಏಕದಿನ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾಕ್ಕಿಂತ ಬಲಿಷ್ಠವೆನಿಸಿರುವ ಮತ್ತು ತವರಿನಲ್ಲಿ ಸದ್ಯ ಭರ್ಜರಿ ಫಾಮರ್್​ನಲ್ಲಿರುವ ಕಿವೀಸ್ ತಂಡ ವಿರಾಟ್ ಕೊಹ್ಲಿ ಪಡೆಗೆ ಕಠಿಣ ಸವಾಲಾಗುವ ನಿರೀಕ್ಷೆ ಇದೆ. ವಿಶ್ವಕಪ್​ಗೆ ಮುನ್ನ ತನ್ನ ಅಸಲಿ ಸಾಮರ್ಥ್ಯ ತಿಳಿದುಕೊಳ್ಳಲು ಮತ್ತು ತಂಡದಲ್ಲಿ ಸಮತೋಲನ ಕಂಡುಕೊಳ್ಳಲು ಕಿವೀಸ್ ಪ್ರವಾಸ ಭಾರತಕ್ಕೆ ಮಹತ್ವದ್ದೆನಿಸಿದೆ.

ಆಸೀಸ್ ತಂಡ ತನ್ನದೇ ಆಂತರಿಕ ಸಮಸ್ಯೆಗಳಿಂದಾಗಿ ಪರದಾಡುತ್ತಿದ್ದರೆ, ನ್ಯೂಜಿಲೆಂಡ್ ವಿಶ್ವಕಪ್​ಗೆ ಮುನ್ನ ಭರ್ಜರಿ ಲಯದಲ್ಲಿದೆ. ಕಿವೀಸ್ ಕ್ರೀಡಾಂಗಣಗಳು ಕಿರಿದಾಗಿರುವುದರಿಂದ ಭಾರತದ ಬೌಲರ್​ಗಳಿಗೆ ವಿಶಿಷ್ಟ ರೀತಿಯ ಸವಾಲು ಎದುರಾಗಲಿದೆ. ಕೇನ್ ವಿಲಿಯಮ್ಸನ್ ಸಾರಥ್ಯದ ತಂಡಕ್ಕೆ ರಾಸ್ ಟೇಲರ್, ಮಾರ್ಟಿನ್ ಗುಪ್ಟಿಲ್ ಅನುಭವಿ ಬ್ಯಾಟಿಂಗ್ ವಿಭಾಗವೆನಿಸಿದ್ದರೆ, ಟಾಮ್ ಲಾಥಮ್ ಹೆನ್ರಿ ನಿಕೋಲ್ಸ್​ರಂಥ ಯುವ ಬ್ಯಾಟ್ಸ್​ಮನ್​ಗಳ ಬಲವೂ ಇದೆ. ಬೌಲಿಂಗ್​ನಲ್ಲೂ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಫರ್ಗ್ಯುಸನ್ ಭರ್ಜರಿ ಲಯದಲ್ಲಿದ್ದಾರೆ. ಜಿಮ್ಮಿ ನೀಶಾಮ್ ಆಲ್ರೌಂಡರ್ ಆಗಿ ಸಮತೋಲನ ತಂದಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕ್ಲೀನ್​ಸ್ವೀಪ್ ಸಾಧನೆ ಮಾಡಿದ ವಿಶ್ವಾಸವೂ ಕಿವೀಸ್ ತಂಡದಲ್ಲಿದೆ. ಕಿವೀಸ್ ತಂಡ ಕಳೆದ 19 ಏಕದಿನ ಪಂದ್ಯಗಳಲ್ಲಿ 14ರಲ್ಲಿ ಜಯಿಸಿದ್ದು, 4ರಲ್ಲಿ ಮಾತ್ರ ಸೋತಿದೆ. 1 ಪಂದ್ಯ ರದ್ದುಗೊಂಡಿದೆ. 2014ರಲ್ಲಿ ಕೊನೆಯ ಬಾರಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದಾಗ ಭಾರತ ತಂಡ ಏಕದಿನ ಸರಣಿಯಲ್ಲಿ 0-4 ಅಂತರದಿಂದ ಸೋಲು ಕಂಡಿತ್ತು. 1 ಪಂದ್ಯ ಟೈಗೊಂಡಿತ್ತು. -ಏಜೆನ್ಸೀಸ್

ಕಿವೀಸ್​ನಲ್ಲಿ ಕೊಹ್ಲಿ ಟೀಮ್

ಆಸ್ಟ್ರೇಲಿಯಾದಲ್ಲಿ ದಿಗ್ವಿಜಯ ಸಾಧಿಸಿರುವ ಟೀಮ್ ಇಂಡಿಯಾ, ನ್ಯೂಜಿಲೆಂಡ್ ನೆಲದ ಸವಾಲು ಎದುರಿಸಲು ಆಕ್ಲೆಂಡ್ ತಲುಪಿದೆ. ವಿರಾಟ್ ಕೊಹ್ಲಿ ನೇತೃತ್ವದ ತಂಡದ ಆಟಗಾರರು ಭಾನುವಾರ ಆಸ್ಟ್ರೇಲಿಯಾದಿಂದ ನೇರವಾಗಿ ಕಿವೀಸ್​ಗೆ ಪ್ರಯಾಣಿಸಿದರು. ಭಾರತ ತಂಡದ ಆಟಗಾರರು ಆಕ್ಲೆಂಡ್ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ವಿಡಿಯೋವನ್ನು ಬಿಸಿಸಿಐ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ. ಇದೇ ವೇಳೆ ಆಟಗಾರರು ಅಭಿಮಾನಿಗಳಿಗೆ ಹಸ್ತಾಕ್ಷರಗಳನ್ನು ನೀಡಿದರು. ಬುಧವಾರ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕಾಗಿ ಭಾರತ ತಂಡ ಸೋಮವಾರ ನೇಪಿಯರ್​ಗೆ ಪ್ರಯಾಣಿಸಲಿದೆ. ಭಾರತ ಏಕದಿನ ತಂಡ: ಕೊಹ್ಲಿ (ನಾಯಕ), ರೋಹಿತ್ ಶರ್ಮ, ಧವನ್, ರಾಯುಡು, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಧೋನಿ, ಕುಲದೀಪ್, ಚಾಹಲ್, ಜಡೇಜಾ, ಭುವನೇಶ್ವರ್, ಸಿರಾಜ್, ಖಲೀಲ್, ಶಮಿ, ವಿಜಯ್ ಶಂಕರ್, ಶುಭಮಾನ್ ಗಿಲ್; ಟಿ20 ಸರಣಿಗೆ ರಿಷಭ್ ಪಂತ್, ಸಿದ್ಧಾರ್ಥ್ ಕೌಲ್, ಕೃನಾಲ್ ಪಾಂಡ್ಯ ಸೇರ್ಪಡೆ; ರಾಯುಡು, ಜಡೇಜಾ, ಸಿರಾಜ್, ಶಮಿ ಟಿ20 ಸರಣಿಗೆ ಇಲ್ಲ.