ವಿದೇಶಿ ಪ್ರವಾಸಿಗನ ಮೇಲೆ ಕಾಡುಕೋಣ ದಾಳಿ

ಕಾರ್ಕಳ: ಬಜಗೋಳಿ- ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಕಾಡುಕೋಣ ದಾಳಿಗೆ ಜರ್ಮನ್ ಮೂಲದ ಪ್ರವಾಸಿಗರೊಬ್ಬರು ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜರ್ಮನ್‌ನ ಫ್ರಾಂಕ್(50) ಗಾಯಗೊಂಡವರು. ದೆಹಲಿಯಿಂದ ಬೈಕ್‌ಮೂಲಕ ಕನ್ಯಾಕುಮಾರಿಗೆ ಹೋಗಿ ಅಲ್ಲಿಂದ ಮಂಗಳೂರಿಗೆ ಬರುತ್ತಿದ್ದ ಅವರು ಗುರುವಾರ ಸಾಯಂಕಾಲ 4.30ಕ್ಕೆ ಕುದುರೆಮುಖಕ್ಕೆ ಹೋಗುತ್ತಿದ್ದಾಗ ಮಾಳ ಎಸ್.ಕೆ.ಬಾರ್ಡರ್‌ನಲ್ಲಿ ಈ ಘಟನೆ ನಡೆದಿದೆ.
ಕಾಡುಕೋಣ ರಸ್ತೆ ದಾಟುವ ಭರದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಫ್ರಾಂಕ್ ಗಾಯಗೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರು ಧಾವಿಸಿದ್ದು, ಗಾಯಾಳುವನ್ನು ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ದೇವಳದಿಂದ ನೆರವು: ಗಾಯಾಳು ಫ್ರಾಂಕ್ ಅವರನ್ನು ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ದಾಖಲಿಸುವಲ್ಲಿ ಶ್ರೀ ವೆಂಕಟರಮಣ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಉಲ್ಲಾಸ್ ಶೆಣೈ ಮುಂದಾಗಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿ ಗಾಯಾಳುವನ್ನು ದಾಖಲಿಸಿದ್ದು, ಆಸ್ಪತ್ರೆಯ ಕೀಲು ತಜ್ಞ ಡಾ. ರಾಮದಾಸ್ ಚಿಕಿತ್ಸೆ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅಗತ್ಯವೆನ್ನಿಸಿದರೆ ಚಿಕಿತ್ಸೆ ವೆಚ್ಚವನ್ನು ಶ್ರೀಕ್ಷೇತ್ರವೇ ಭರಿಸಲಿದೆ ಎಂದು ಶ್ರೀ ವೆಂಕಟರಮಣ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಉಲ್ಲಾಸ್ ಶೆಣೈ ವಿಜಯವಾಣಿಗೆ ತಿಳಿಸಿದ್ದಾರೆ.