ಕೊಲಂಬೊ: ಗೆಲುವಿನ ಸುವರ್ಣಾವಕಾಶವನ್ನು ಕೈಚೆಲ್ಲಿದ ಭಾರತ ತಂಡ ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಚಕ ಟೈಗೆ ತೃಪ್ತಿಪಟ್ಟಿದೆ. ನಾಯಕ ರೋಹಿತ್ ಶರ್ಮ (58 ರನ್, 47 ಎಸೆತ, 7 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟ ನಡುವೆಯೂ ವಾನಿಂದು ಹಸರಂಗ (58ಕ್ಕೆ 3) ಹಾಗೂ ಅರೆಕಾಲಿಕ ಬೌಲರ್ ಚರಿತ್ ಅಸಲಂಕಾ (30ಕ್ಕೆ 3) ಸ್ಪಿನ್ ದಾಳಿಗೆ ಲಯ ತಪ್ಪಿದ ಟೀಮ್ ಇಂಡಿಯಾ ಗೆಲುವಿನ ಹೊಸ್ತಿಲಲ್ಲಿ ಎಡವಿತು.
ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಪಥುಮ್ ನಿಸ್ಸಂಕ (56 ರನ್, 75 ಎಸೆತ, 9 ಬೌಂಡರಿ) ಹಾಗೂ ಆಲ್ರೌಂಡರ್ ದುನಿತ್ ವೆಲ್ಲಲಾಗೆ (67*ರನ್, 65 ಎಸೆತ, 7 ಬೌಂಡರಿ, 2 ಸಿಕ್ಸರ್) ಆಸರೆಯಲ್ಲಿ 8 ವಿಕೆಟ್‌ಗೆ 230 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಚೇಸಿಂಗ್‌ನಲ್ಲಿ ನಾಯಕ ರೋಹಿತ್ ಶರ್ಮ (58 ರನ್, 47 ಎಸೆತ, 7 ಬೌಂಡರಿ, 3 ಸಿಕ್ಸರ್) ಒದಗಿಸಿದ ಬಿರುಸಿನ ಆರಂಭ ನಡುವೆಯೂ ಭಾರತ 132 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಜತೆಯಾದ ಕನ್ನಡಿಗ, ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ (31) ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ (33 ರನ್, 57 ಎಸೆತ, 2 ಬೌಂಡರಿ, 1 ಸಿಕ್ಸರ್) ಹೋರಾಟದ ನಡುವೆಯೂ 47.5 ಓವರ್‌ಗಳಲ್ಲಿ 230 ರನ್‌ಗಳಿಗೆ ಆಲೌಟ್ ಆಯಿತು. ಕೊನೇ 15 ಎಸೆತಗಳಲ್ಲಿ 1 ರನ್ ಬೇಕಿದ್ದಾಗ ಶಿವಂ ದುಬೆ (25) ಹಾಗೂ ಅರ್ಷದೀಪ್ ಸಿಂಗ್ (0) ಸತತ 2 ಎಸೆತಗಳಲ್ಲಿ ಔಟಾದರು.
ರೋಹಿತ್ ಬಿರುಸಿನ ಆರಂಭ: ಒಂದು ತಿಂಗಳ ಬಳಿಕ ಮರಳಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮ ಬಿರುಸಿನ ಆರಂಭ ಒದಗಿಸಿದರು. ಟಿ20 ಆಟ ನೆನಪಿಸಿದ ರೋಹಿತ್ ಸಿಕ್ಸರ್ ಮೂಲಕ ಖಾತೆ ತೆರೆದರೆ, ಇವರಿಗೆ ಉಪನಾಯಕ ಸಾಥ್ ನೀಡಿದರು. ರೋಹಿತ್- ಶುಭಮಾನ್ ಗಿಲ್ (16) ಮೊದಲ ವಿಕೆಟ್‌ಗೆ 76 ಎಸೆತಗಳಲ್ಲಿ 75 ರನ್‌ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಏಕಾಂಗಿಯಾಗಿ ಅಬ್ಬರಿಸಿದ ರೋಹಿತ್ ಇದರಲ್ಲಿ ಒಬ್ಬಂಟಿಯಾಗಿ 55 ರನ್ ಕಸಿದರು. 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ರೋಹಿತ್ ಉತ್ತಮ ಆರಂಭ ನೀಡಿದರು. ಗಿಲ್ ನಿರ್ಗಮನ ಬೆನ್ನಲ್ಲೇ ರೋಹಿತ್ ಸಹ ಔಟಾದರೆ, ಬಡ್ತಿ ಪಡೆದ ವಾಷಿಂಗ್ಟನ್ ಸುಂದರ್ (5)ನಿರಾಸೆ ತಂದರು.
ರಾಹುಲ್-ಅಕ್ಷರ್ ಪ್ರತಿರೋಧ: 87 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಭಾರತದ ಚೇಸಿಂಗ್‌ಗೆ ವಿರಾಟ್ ಕೊಹ್ಲಿ (24) ಹಾಗೂ ಶ್ರೇಯಸ್ ಅಯ್ಯರ್ (23) ಬಲ ತುಂಬಿದರು. ಇವರಿಬ್ಬರು 4ನೇ ವಿಕೆಟ್‌ಗೆ 45 ಎಸೆತಗಳಲ್ಲಿ 43 ರನ್‌ಗಳಿಸಿದರು. 2 ರನ್ ಅಂತರದಲ್ಲಿ ಇವರಿಬ್ಬರು ಔಟಾಗುವುದರೊಂದಿಗೆ ಭಾರತ ಒತ್ತಡಕ್ಕೆ ಸಿಲುಕಿತು. ಆಗ ಜತೆಯಾದ ರಾಹುಲ್-ಅಕ್ಷರ್ 6ನೇ ವಿಕೆಟ್‌ಗೆ 92 ಎಸೆತಗಳಲ್ಲಿ 57 ರನ್ ಕಸಿದು ಗೆಲುವಿನ ಆಸೆ ಮೂಡಿಸಿದರು. ಆದರೆ ಪಿಚ್ ಲಾಭವೆತ್ತಿದ ಲಂಕಾ ಸ್ಪಿನ್ನರ್‌ಗಳು ಕೆಳ ಕ್ರಮಾಂಕಕ್ಕೆ ಕಡಿವಾಣ ಹೇರಿದರು. 5 ರನ್ ಬೇಕಿದ್ದಾಗ ಬೌಂಡರಿ ಗಳಿಸಿ ಮೊತ್ತ ಸಮಬಲಗೊಳಿಸಿದ ಶಿವಂ ದುಬೆ ಮರು ಎಸೆತದಲ್ಲಿ ಔಟಾಗಿ ನಿರಾಸೆ ಮೂಡಿಸಿದರು. 9ನೇ ವಿಕೆಟ್‌ಗೆ ದುಬೆ- ಸಿರಾಜ್ (5*) 19 ರನ್ ಗಳ ಉಪಯುಕ್ತ ಆಟವೂ ವ್ಯರ್ಥಗೊಂಡಿತು.