ಮಂಡ್ಯದಲ್ಲಿ ಸೇನಾ ನೇಮಕಾತಿ ರ‌್ಯಾಲಿ ನಾಳೆಯಿಂದ 7 ದಿವಸ

ಮಂಡ್ಯ: ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅ.13ರಿಂದ 19ರ ವರೆಗೆ ಭಾರತೀಯ ಸೇನೆಗೆ ನೇಮಕಾತಿ ರ‌್ಯಾಲಿ ನಡೆಯಲಿದ್ದು, ಈ ಸಂಬಂಧ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಂಡ್ಯ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ಕೋಲಾರ, ತುಮಕೂರು, ಮೈಸೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಬಳ್ಳಾರಿ, ಹಾಸನ, ಕೊಡಗು ಹಾಗೂ ಚಿತ್ರದುರ್ಗ ಜಿಲ್ಲೆಯಿಂದ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.

11 ಸಾವಿರ ಅಭ್ಯರ್ಥಿಗಳು

ಈಗಾಗಲೇ ಆನ್‌ಲೈನ್ ಮುಖಾಂತರ ನೋಂದಣಿ ಮಾಡಿಕೊಂಡಿರುವ 11 ಸಾವಿರ ಅಭ್ಯರ್ಥಿಗಳು ಹಾಗೂ ವಿವಿಧ ಸ್ಥರದ 100 ಸೇನಾ ಸಿಬ್ಬಂದಿ ರ‌್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ರ‌್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ಕ್ರೀಡಾಂಗಣಕ್ಕೆ ನಿರಂತರ ವಿದ್ಯುತ್ ಸರಬರಾಜು, ಅಗ್ನಿಶಾಮಕ ವಾಹನದ ವ್ಯವಸ್ಥೆಗಳನ್ನು ಸಂಬಂಧಪಟ್ಟ ಇಲಾಖೆಗಳ ವತಿಯಿಂದ ಮಾಡಲಾಗಿದೆ.

ಅಭ್ಯರ್ಥಿಗಳಿಗೆ ಕುಡಿಯುವ ನೀರು, ಶೌಚಗೃಹ ಮತ್ತು ವೈದ್ಯಕೀಯ ವ್ಯವಸ್ಥೆ ಮಾಡಲಾಗಿರುತ್ತದೆ. ಅ.13ರಿಂದ 19ರ ವರೆಗೆ ಬೆಳಗ್ಗೆ 4ರಿಂದ ಮಧ್ಯಾಹ್ನ 2 ಗಂಟೆವರೆಗೆ ರ‌್ಯಾಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅ.20ರ ವರೆಗೆ ಸಾರ್ವಜನಿಕರಿಗೆ, ಕ್ರೀಡಾಪಟುಗಳಿಗೆ ಕ್ರೀಡಾಂಗಣದ ಒಳಗೆ ಪ್ರವೇಶಾವಕಾಶ ಇರುವುದಿಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೂರ್ವಭಾವಿ ಸಭೆ 

ದೊಡ್ಡಮಟ್ಟದ ರ‌್ಯಾಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಜಿಲ್ಲಾಡಳಿತದಿಂದ ಪೂರ್ವಭಾವಿ ಸಭೆ ನಡೆಸಲಾಗಿತ್ತು. ಪೊಲೀಸ್ ಇಲಾಖೆಯಿಂದ ಕ್ರೀಡಾಂಗಣದ ಸುತ್ತ ಭದ್ರತೆ ಒದಗಿಸಬೇಕು. ಅಭ್ಯರ್ಥಿಗಳ ದೈಹಿಕ ಫಿಟ್ನೆಸ್ ಪರೀಕ್ಷಿಸಲು 1.6 ಕಿ.ಮೀ. ಓಟ ಸೇರಿದಂತೆ ಇತರೆ ಪರೀಕ್ಷೆಯನ್ನು ಸ್ವತಂತ್ರ ಅಧಿಕಾರಿಗಳ ತಂಡದಿಂದ ನಡೆಸಲಾಗುತ್ತಿದ್ದು, ಆರ್ಮಿಯ ವೈದ್ಯಕೀಯ ತಂಡದ ವೈದ್ಯರಿಂದ ದೈಹಿಕ ಮಾಪನ ಪರೀಕ್ಷೆ ನಡೆಯಲಿದೆ. ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗೆ ಆಯ್ಕೆಯಾಗಲಿದ್ದಾರೆ.

Leave a Reply

Your email address will not be published. Required fields are marked *