ಭಾರತೀಯ ಸೇನೆ ಉದ್ಯೋಗ ಒದಗಿಸುವ ಸಂಸ್ಥೆಯಲ್ಲ ಎಂದು ಎಚ್ಚರಿಸಿದ ಜನರಲ್ ಬಿಪಿನ್​ ರಾವತ್​

ಪುಣೆ: ಭಾರತೀಯ ಸೇನೆಯನ್ನು ಉದ್ಯೋಗ ಒದಗಿಸುವ ಸಂಸ್ಥೆಯನ್ನಾಗಿ ಯಾರೂ ನೋಡಬೇಡಿ ಎಂದು ಸೇನಾ ಮುಖ್ಯಸ್ಥ, ಜನರಲ್​ ಬಿಪಿನ್​ ರಾವತ್​ ಗುರುವಾರ ಹೇಳಿದ್ದಾರೆ. ಅಲ್ಲದೆ, ಅಶಕ್ತ, ಅನಾರೋಗ್ಯದ ನೆಪ ಹೇಳಿ ಕೆಲಸವನ್ನು ತಪ್ಪಿಸಿಕೊಳ್ಳುವ, ಸೌಕರ್ಯಗಳ ಲಾಭ ಪಡೆಯುವ ಸೇನಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

2018 ಅನ್ನು “ಕರ್ತವ್ಯದಲ್ಲಿದ್ದಾಗ ಅಂಗವೈಕಲ್ಯಕ್ಕೀಡಾದ ಯೋಧರ ವರ್ಷ” ಎಂದು ಭಾರತೀಯ ಸೇನೆ ಘೋಷಿಸಿದ್ದು, ತನ್ನಿಮಿತ್ತ ಪುಣೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಿವೃತ್ತ ಮತ್ತು ಕರ್ತವ್ಯ ನಿರತ ಅಂಗವಿಕಲ ಯೋಧರ ಸಮಾವೇಶದಲ್ಲಿ ಮಾತನಾಡಿ, ಸೇನೆಯೆಂದರೆ ಕೆಲಸ ಕೊಡುವ ಸಂಸ್ಥೆ ಎಂದು ಹಲವರು ಭಾವಿಸಿದ್ದಾರೆ. ಹಾಗೇನಾದರೂ ಅಂದುಕೊಂಡರೆ ಮೊದಲು ತಲೆಯಿಂದ ತೆಗೆದುಹಾಕಿ. ಯಾರು ಸೈನ್ಯಕ್ಕೆ ಸೇರಲು ಬಯಸುತ್ತಾರೋ ಅವರು ಕಡ್ಡಾಯವಾಗಿ ದೈಹಿಕ, ಮಾನಸಿಕ ಶಕ್ತಿಯನ್ನು ಸಾಬೀತುಪಡಿಸಲೇಬೇಕು. ಎದುರಾಗುವ ಸವಾಲುಗಳನ್ನು ಮೆಟ್ಟಲು ಸಾಮರ್ಥ್ಯ ಹೊಂದಿರಲೇಬೇಕು. ಕೆಲಸ ಬೇಕಿದ್ದರೆ ರೈಲ್ವೆ ಇಲಾಖೆಗೋ ಮತ್ತೆಲ್ಲೋ ಹೋಗಿ, ಇಲ್ಲದಿದ್ದರೆ ನಿಮ್ಮ ಸ್ವಂತ ವ್ಯಾಪಾರ ಶುರು ಮಾಡಿ ಎಂದು ಹೇಳಿದ್ದಾರೆ.

ಹಲವು ಯೋಧರು, ಅಧಿಕಾರಿಗಳು ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದು ಅವರೆಲ್ಲ ತಮ್ಮನ್ನು ತಾವು ಅಶಕ್ತರು ಎಂದು ಕರೆದುಕೊಂಡು, ಕಷ್ಟವಿದೆ ಎಂದು ಹೇಳಿ ಪರಿಹಾರ ಪಡೆಯುವುದನ್ನೂ ನೋಡುತ್ತಿದ್ದೇನೆ. ದೈಹಿಕ, ಮಾನಸಿಕವಾಗಿ ಅವರೆಲ್ಲ ತುಂಬ ದುರ್ಬಲರು. ಯಾವುದೇ ಒತ್ತಡಗಳನ್ನೂ ಸಹಿಸುಕೊಳ್ಳುವುದಿಲ್ಲ. ವೀಲ್​ಚೇರ್​ ಮೇಲೆ ಕುಳಿತಿದ್ದರೂ ಮಾನಸಿಕ ಸದೃಢತೆಯಿಂದ ಕೆಲಸ ನಿರ್ವಹಿಸುವ ಯೋಧರನ್ನು ನೋಡಿದ ಮೇಲಾದರೂ ಅವರಲ್ಲಿ ಸ್ಫೂರ್ತಿ ಬರಲಿ ಎಂದು ಆಶಿಸುತ್ತೇನೆ ಎಂದರು.

ನಿಜಕ್ಕೂ ಅಂಗವೈಕಲ್ಯ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಹಣಕಾಸಿನ ಸಹಾಯವನ್ನೂ ನಾವು ನೀಡುತ್ತೇವೆ. ಆದರೆ, ಯಾರು ಸುಳ್ಳು ಹೇಳಿ ಪರಿಹಾರ ಪಡೆಯುತ್ತಿದ್ದಾರೋ ಅಂಥವರ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.