ಅಫ್ಘಾನಿಸ್ತಾನದಲ್ಲಿ ಭಾರತೀಯ ವ್ಯಕ್ತಿಯನ್ನು ಅಪಹರಿಸಿ ಕೊಂದ ಉಗ್ರರು

ಕಾಬುಲ್​: ಅಫ್ಘಾನಿಸ್ತಾನದಲ್ಲಿ ಉಗ್ರರು ಭಾರತೀಯ ವ್ಯಕ್ತಿ ಸೇರಿದಂತೆ ಮೂವರು ವಿದೇಶಿ ಪ್ರಜೆಗಳನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ.

ಉಗ್ರರು ಗುರುವಾರ ಬೆಳಗ್ಗೆ ಕಾಬುಲ್​ ನಗರದಿಂದ ಓರ್ವ ಭಾರತೀಯ, ಓರ್ವ ಮಲೇಷ್ಯಾ ಪ್ರಜೆ ಮತ್ತು ಓರ್ವ ಮೆಸಿಡೋನಿಯನ್ ಪ್ರಜೆಯನ್ನು ಅಪಹರಿಸಿದ್ದರು. ಆ ನಂತರ ಅವರ ಮೃತದೇಹಗಳು ಕಾಬುಲ್​ ಪ್ರಾಂತ್ಯದ ಮುಸ್ಸಹಿ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಕಾಬೂಲ್​ ಪೊಲೀಸ್​ ಇಲಾಖೆಯ ವಕ್ತಾರ ಹಸ್ಮತ್​ ಸ್ಟಾನೆಕ್ಜಾಯ್ ತಿಳಿಸಿದ್ದಾರೆ.

ಈ ಮೂವರೂ ಸೆಡೆಕ್ಸೋ ಎಂಬ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇವರನ್ನು ಅಪಹರಣ ಮಾಡಿದ ಉಗ್ರರ ಗುರುತು ಪತ್ತೆಯಾಗಿಲ್ಲ. ಇದುವರೆಗೂ ಯಾವುದೇ ಉಗ್ರ ಸಂಘಟನೆ ಹತ್ಯೆಯ ಹೊಣೆ ಹೊತ್ತುಕೊಂಡಿಲ್ಲ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)