ವಿಂಡೀಸ್ ವಿರುದ್ಧ ಭಾರತದ ಪಾರಮ್ಯ: ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡ ಟೀಂ ಇಂಡಿಯಾ

ಮುಂಬೈ: ಭಾರತ ನೀಡಿದ 377 ರನ್​ಗಳ ಬೃಹತ್​ ಮೊತ್ತವನ್ನು ಬೆನ್ನತ್ತಲಾಗದ ವಿಂಡೀಸ್​ ತಂಡ ಕೇವಲ 153 ರನ್​ಗಳಿಗೆ ಸೋತು ಶರಣಾಗಿದೆ. ಭಾರತ 224 ರನ್​ಗಳ ಅತಿ ದೊಡ್ಡ ಜಯಗಳಿಸಿ ಸಂಭ್ರಮಿಸಿದೆ.

ಭಾರತ ಮತ್ತು ವಿಂಡೀಸ್ ನಡುವಿನ ನಾಲ್ಕನೇ ಏಕದಿನ ಪಂದ್ಯ ಇಂದು ಮುಂಬೈನಲ್ಲಿ ನಡೆಯಿತು. ಟಾಸ್​ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಭಾರತ ತಂಡ ರೋಹಿತ್​ ಶರ್ಮಾ 162 ಮತ್ತು ಅಂಬಟ್ಟಿ ರಾಯುಡು ಅವರ 100 ರನ್​ಗಳ ನೆರವಿನೊಂದಿಗೆ 377 ರನ್​ಗಳ ಬೃಹತ್​ ಮೊತ್ತವನ್ನು ಕಲೆ ಹಾಕಿತು.

ಈ ಸವಾಲಿನ ಮೊತ್ತವನ್ನು ಬೆನ್ನು ಹತ್ತಿದ ವಿಂಡೀಸ್​ ತಂಡ ಯಾವುದೇ ಹಂತದಲ್ಲಿಯೂ ಪ್ರತಿರೋಧ ತೋರಲಿಲ್ಲ. ಅಂತಿಮವಾಗಿ 36.2 ಓವರ್​ಗಳಿಗೆ ಕೇವಲ 153  ರನ್​ಗಳಿಸಿ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು ಭಾರತಕ್ಕೆ ಶರಣಾಯಿತು.

ವಿಂಡೀಸ್​ ಪರ ಹೋಲ್ಡ್​ರ್​ 54 (70) ಗಳಿಸಿದ್ದು ಬಿಟ್ಟರೆ ಮತ್ತ್ಯಾರಿಂದಲೂ ಉತ್ತಮ ರನ್​ಗಳು ಬರಲೇ ಇಲ್ಲ.

ಇನ್ನು ಭಾರತದ ಇಂದಿನ ಜಯದ ಹಿಂದೆ ಆಲ್ರೌಂಡ್​ ಆಟ ಕೆಲಸ ಮಾಡಿತು ಎಂದರೆ ತಪ್ಪಲ್ಲ. ಬ್ಯಾಟಿಂಗ್​ನಲ್ಲಿ ಮಾತ್ರ ಗುಡುಗದ ಭಾರತ, ಬೌಲಿಂಗ್​ನಲ್ಲಿ ಮಿಂಚಿತು. ಭಾರತದ ಪರ ಕೆಕೆ ಅಹ್ಮದ್​ 3, ಕುಲದೀಪ್​ ಯಾದವ್​ 3, ಭುವನೇಶ್ವರ್​ ಕುಮಾರ್​ 1, ಜಡೇಜಾ 1 ವಿಕೆಟ್​ ಕಬಳಿಸಿ ಸಂಭ್ರಮಿಸಿದರು.

ಕಳೆದ ಪಂದ್ಯದಲ್ಲಿ ಸೋತಿದ್ದ ಭಾರತ ಈ ಪಂದ್ಯದಲ್ಲಿ ದೊಡ್ಡ ವಿಜಯವನ್ನು ಸಾಧಿಸುವ ಮೂಲಕ ಸೇಡು ತೀರಿಸಿಕೊಂಡು ಗೆಲುವಿನೊಂದಿಗೆ ಬೀಗಿದೆ. ಈ ಮೂಲಕ ಭಾರತ ಸರಣಿಯಲ್ಲಿ 2-1 ಅಂತರದ ಮುನ್ನಡೆ ಸಾಧಿಸಿಕೊಂಡಿದೆ.