ನ್ಯೂಜಿಲೆಂಡ್​ ವಿರುದ್ಧ ಭಾರತಕ್ಕೆ 90 ರನ್​ಗಳ ಭರ್ಜರಿ ಗೆಲವು

* ನ್ಯೂಜಿಲೆಂಡ್​ನಲ್ಲಿ ಭಾರತಕ್ಕೆ ಸಿಕ್ಕ ಅತಿದೊಡ್ಡ ಅಂತರದ ಜಯ

ಮೌಂಟ್ ಮೌನ್​ಗುನೈ: ಸ್ಪಿನ್ನರ್​ ಕುಲದೀಪ್​ ಯಾದವ್​​ (49ಕ್ಕೆ 4) ಅವರ ಭರ್ಜರಿ ಬೌಲಿಂಗ್​ ಬೆನ್ನೇರಿದ ಪ್ರವಾಸಿ ಭಾರತ ತಂಡ ನ್ಯೂಜಿಲೆಂಡ್​ ವಿರುದ್ಧ 90 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ತನ್ಮೂಲಕ ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಗಳಿಸಿಕೊಂಡಿದ್ದು, 70ನೇ ಗಣರಾಜ್ಯೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಟಾಸ್​ ಗೆದ್ದು ಮೊದಲಿಗೆ ಬ್ಯಾಟಿಂಗ್​ ಮಾಡಿದ ಭಾರತ ಆರಂಭಿಕರಾದ ರೋಹಿತ್​ ಶರ್ಮ ಮತ್ತು ಶಿಖರ್ ಧವನ್​ ಅವರ ಭರ್ಜರಿ ಅರ್ಧಶತಕದ ನೆರವಿನಿಂದ 50 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 324 ರನ್​ ಗಳಿಸಿತ್ತು.
ಬ್ಯಾಟಿಂಗ್​ಗೆ ಸಹಕರಿಸುತ್ತಿದ್ದ ಪಿಚ್​ನಲ್ಲೂ ಕುಲದೀಪ್​ ಯಾದವ್​​ ತೋರಿದ ಕೈಚಳಕದ ಮೋಡಿಗೆ ಸಿಲುಕಿದ ಆತಿಥೇಯರು 234ಕ್ಕೆ ಸರ್ವಪತನ ಕಂಡರು. ಭುವನೇಶ್ವರ್​, ಯಜುವೇಂದರ್​ ಚಹಾಲ್​, ಕೇದಾರ್ ಜಾಧವ್​​ ಮತ್ತು ಮೊಹಮ್ಮದ್​ ಶಮಿ​ ತಲಾ ಒಂದೊಂದು ವಿಕೆಟ್​ ಪಡೆದುಕೊಂಡರು.

ಅಜರುದ್ದೀನ್​ ದಾಖಲೆ ಸರಿಗಟ್ಟಿದ ಧೋನಿ: ನ್ಯೂಜಿಲೆಂಡ್​ ವಿರುದ್ಧದ ಶನಿವಾರದ ಪಂದ್ಯ ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಪಾಲಿಗೆ 334ನೇ ಪಂದ್ಯವಾಗಿತ್ತು. ತನ್ಮೂಲಕ ಅವರು ಭಾರತದ ಪರ ಅತಿಹೆಚ್ಚು ಪಂದ್ಯವಾಡಿದ 3ನೇ ಆಟಗಾರನೆಂಬ ಶ್ರೇಯವನ್ನು ಟೀಮ್​ ಇಂಡಿಯಾದ ಮತ್ತೊಬ್ಬ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್​ ಅವರೊಂದಿಗೆ ಹಂಚಿಕೊಂಡರು. ಸಚಿನ್​ ತೆಂಡುಲ್ಕರ್​ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರು ಒಟ್ಟು 463 ಪಂದ್ಯಗಳನ್ನು ಆಡಿದ್ದಾರೆ. 340 ಪಂದ್ಯಗಳಲ್ಲಿ ನೀಲಿ ಸಮವಸ್ತ್ರ ಧರಿಸಿರುವ ಕರ್ನಾಟಕದ ರಾಹುಲ್​ ದ್ರಾವಿಡ್​ 2ನೇ ಸ್ಥಾನದಲ್ಲಿದ್ದಾರೆ.