ಧವನ್​, ಪಂತ್​ ಭರ್ಜರಿ ಆಟ: ಟಿ20 ಸರಣಿ ಕ್ಲೀನ್​ಸ್ವೀಪ್​

ಚೆನ್ನೈ: ಶಿಖರ್​ ಧವನ್​ (92) ಮತ್ತು ಯುವ ಆಟಗಾರ ರಿಷಭ್​ ಪಂತ್​ (58) ಗಳಿಸಿದ ಭರ್ಜರಿ ಅರ್ಧಶತಕಗಳ ನೆರವಿನಿಂದ ಅತಿಥೇಯ ಟೀಂ ಇಂಡಿಯಾ ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 6 ವಿಕೆಟ್​ಗಳ ರೋಚಕ ಜಯ ದಾಖಲಿಸಿದ್ದು, ಸರಣಿಯನ್ನು ಕ್ಲೀನ್​ ಸ್ವೀಪ್​ ಮಾಡಿದೆ.

ವೆಸ್ಟ್​ ಇಂಡೀಸ್​ ನೀಡಿದ್ದ 182 ರನ್​ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ 20 ಓವರ್​ಗಳಲ್ಲಿ ಕೇವಲ 4 ವಿಕೆಟ್​ ಕಳೆದುಕೊಂಡು 182 ರನ್​ ಗಳಿಸಿ ಗೆಲುವಿನ ದಡ ಸೇರಿತು. ಈ ಮೂಲಕ ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಸರಣಿಯಲ್ಲಿ 3-0 ಅಂತರದಿಂದ ಗೆಲುವು ಸಾಧಿಸಿತು.

ಆರಂಭಿಕ ಆಟಗಾರ ರೋಹಿತ್​ ಶರ್ಮಾ ಕೇವಲ 4 ರನ್​ ಗಳಿಸಿ ಔಟಾದರು. ಕೆ.ಎಲ್​. ರಾಹುಲ್​ (17) ರನ್​ ಗಳಿಸಿದರು. ನಂತರ ಜತೆಯಾದ ಧವನ್​ ಮತ್ತು ಪಂತ್​ ಜೋಡಿ ಮೂರನೇ ವಿಕೆಟ್​ಗೆ 130 ರನ್​ ಕಲೆ ಹಾಕಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದಿತು. ಪಂತ್​ ತಂಡದ ಗೆಲುವಿಗೆ 7 ರನ್​ ಬೇಕಾಗಿದ್ದಾಗ ಔಟಾದರು. ಧವನ್​ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ವೆಸ್ಟ್​ ಇಂಡೀಸ್​ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 181 ರನ್​ ಗಳಿಸಿತು. ಆರಂಭಿಕರಾದ ಶೈ ಹೋಪ್(24) ಮತ್ತು ಶಿಮ್ರೋನ್ ಹೆಟ್ಮೆಯರ್(26) ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ 51 ರನ್​ ಕಲೆ ಹಾಕಿತು. ಈ ಜೋಡಿ ಔಟಾದ ನಂತರ ಒಂದಾದ ಡರೇನ್​ ಬ್ರಾವೋ (43) ಮತ್ತು ನಿಕೋಲಸ್​ ಪೂರನ್​ (53) ರನ್​ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಭಾರತದ ಪರ ಯಜುವೇಂದ್ರ ಚಾಹಲ್​ 28 ಕ್ಕೆ 2 ಮತ್ತು ವಾಷಿಂಗ್ಟನ್​ ಸುಂದರ್​ 33 ಕ್ಕೆ 1 ವಿಕೆಟ್‌ ಪಡೆದರು. (ಏಜೆನ್ಸೀಸ್​)