More

  ಭಾರತಕ್ಕೆ ಸಾಹಸಿಕ ಚೇಸಿಂಗ್ ಗೆಲುವು; ಮಿಂಚಿದ ರಾಹುಲ್​, ಶ್ರೇಯಸ್​

  ಆಕ್ಲೆಂಡ್: ಕೊನೆಯ ಬಾರಿಗೆ ಭಾರತ ಹಾಗೂ ನ್ಯೂಜಿಲೆಂಡ್ ತಂಡ ಮುಖಾಮುಖಿ ಆಗಿದ್ದು ಕಳೆದ ವರ್ಷ ಏಕದಿನ ವಿಶ್ವಕಪ್​ನ ಸೆಮಿಫೈನಲ್ ಪಂದ್ಯದಲ್ಲಿ. ಮಾರ್ಟಿನ್ ಗುಪ್ಟಿಲ್ ಅಂದು ಎಸೆದ ಸ್ಮರಣೀಯ ಥ್ರೋನಲ್ಲಿ ಎಂಎಸ್ ಧೋನಿ ರನೌಟ್ ಆಗುವುದರೊಂದಿಗೆ ಭಾರತದ ವಿಶ್ವಕಪ್ ಆಸೆಯೂ ಭಗ್ನಗೊಂಡಿತ್ತು. ಆರು ತಿಂಗಳ ಬಳಿಕ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮಾರ್ಟಿನ್ ಗುಪ್ಟಿಲ್ ಅಂಥದ್ದೇ ಒಂದು ಸಾಹಸ ಮಾಡಿದರು. 204 ರನ್​ಗಳ ಚೇಸಿಂಗ್ ವೇಳೆ 32 ಎಸೆತಗಳಲ್ಲಿ 45 ರನ್ ಬಾರಿಸಿ ಲಯದಲ್ಲಿದ್ದ ವಿರಾಟ್ ಕೊಹ್ಲಿಯನ್ನು ಡೈವಿಂಗ್ ಕ್ಯಾಚ್ ಪಡೆದು ಔಟ್ ಮಾಡಿದರು. ಇನ್ನೊಂದೆಡೆ ಲೆಗ್​ಸ್ಪಿನ್ನರ್ ಇಶ್ ಸೋಧಿ ಕೂಡ ಭಾರತವನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದ್ದರು. ಹಾಗಿದ್ದರೂ ಕನ್ನಡಿಗ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಸ್ಪೋಟಕ ಅರ್ಧಶತಕದಿಂದ ಇನ್ನೂ ಒಂದು ಓವರ್ ಬಾಕಿ ಇರುವಂತೆ 6 ವಿಕೆಟ್ ಗೆಲುವು ಸಾಧಿಸಿದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಗೇರಿತು.

  ಶ್ರೇಯಸ್ ಅಯ್ಯರ್ ಹಾಗೂ ಮನೀಷ್ ಪಾಂಡೆ ಕ್ರೀಸ್​ನಲ್ಲಿ ಜತೆಯಾದಾಗ ಭಾರತಕ್ಕೆ 40 ಎಸೆತಗಳಲ್ಲಿ ಗೆಲುವಿಗೆ 62 ರನ್ ಬೇಕಿದ್ದವು. ಈ ಜತೆಯಾಟದಲ್ಲಿ 48 ರನ್ ಬಾರಿಸಿದ ಶ್ರೇಯಸ್ ಅಯ್ಯರ್, 26 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ನ್ಯೂಜಿಲೆಂಡ್ ವಿರುದ್ಧ ಭಾರತದ ಶ್ರೇಷ್ಠ ಚೇಸಿಂಗ್​ಗೆ ಕಾರಣರಾದರು.

  ಶುಕ್ರವಾರ ಈಡನ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 5 ವಿಕೆಟ್​ಗೆ 203 ರನ್​ಗಳ ದೊಡ್ಡ ಮೊತ್ತ ಪೇರಿಸಿತು. ಪ್ರತಿಯಾಗಿ ಭಾರತ ತಂಡ ರಾಹುಲ್ (56 ರನ್, 27 ಎಸೆತ, 4 ಬೌಂಡರಿ, 3 ಸಿಕ್ಸರ್), ಶ್ರೇಯಸ್ ಅಯ್ಯರ್ (58*ರನ್, 29 ಎಸೆತ,5 ಬೌಂಡರಿ, 3 ಸಿಕ್ಸರ್) ಸ್ಪೋಟಕ ಇನಿಂಗ್ಸ್​ನ ನೆರವಿನಿಂದ 19 ಓವರ್​ಗಳಲ್ಲಿ 4 ವಿಕೆಟ್​ಗೆ 204 ರನ್ ಬಾರಿಸಿ ಗೆಲುವು ಕಂಡಿತು. ನಾಯಕ ವಿರಾಟ್ ಕೊಹ್ಲಿ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಇದ್ದ 45 ರನ್ ಬಾರಿಸಿ ಗೆಲುವಿಗೆ ಕಾಣಿಕೆ ನೀಡಿದರು. ಅದರೊಂದಿಗೆ ಭಾರತ ತಂಡ ಅಂತಾರಾಷ್ಟ್ರೀಯ ಟಿ20ಯಲ್ಲಿ 4ನೇ ಬಾರಿಗೆ 200 ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಚೇಸ್ ಮಾಡಿದ ಸಾಧನೆ ಮಾಡಿತು. ಆಸ್ಟ್ರೇಲಿಯಾ 2 ಬಾರಿ ಈ ಸಾಧನೆ ಮಾಡಿದ್ದರೆ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಕತಾರ್ ತಂಡಗಳು ಒಮ್ಮೆ ಈ ಸಾಧನೆ ಮಾಡಿವೆ. -ಏಜೆನ್ಸೀಸ್

  01: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ 5 ಅರ್ಧಶತಕಗಳು ದಾಖಲಾಗಿರುವುದು ಇದೇ ಮೊದಲು. ಈ ಪಂದ್ಯದಲ್ಲಿ ಕಾಲಿನ್ ಮನ್ರೊ (59), ಕೇನ್ ವಿಲಿಯಮ್ಸನ್ (51), ರಾಸ್ ಟೇಲರ್ (54*), ಕೆಎಲ್ ರಾಹುಲ್ (56) ಹಾಗೂ ಶ್ರೇಯಸ್ ಅಯ್ಯರ್ (58*) ಅರ್ಧಶತಕ ಸಿಡಿಸಿದರು.

  ಚೇಸಿಂಗ್​ಗೆ ಬಲ ತುಂಬಿದ ರಾಹುಲ್-ಕೊಹ್ಲಿ

  ದೊಡ್ಡ ಮೊತ್ತದ ಚೇಸಿಂಗ್ ವೇಳೆ ಭಾರತ ನಿರೀಕ್ಷೆ ಮಾಡಿದ್ದ ಆರಂಭ ಸಿಗಲಿಲ್ಲ. ಮಿಚೆಲ್ ಸ್ಯಾಂಟ್ನರ್​ರ 2ನೇ ಓವರ್​ನಲ್ಲಿ ಆಕರ್ಷಕ ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮ (7) ಮರು ಎಸೆತದಲ್ಲಿಯೇ ಔಟಾದರು. ಆಗ ಜತೆಯಾದ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬಿರುಸಿನ ರನ್ ಪೇರಿಸುವ ಮೂಲಕ ಚೇಸಿಂಗ್​ಗೆ ಬಲ ತುಂಬಿದರು. ನಿರಂತರವಾಗಿ ಬೌಂಡರಿಗಳನ್ನು ಬಾರಿಸುತ್ತ 23 ಎಸೆತಗಳಲ್ಲೇ ರಾಹುಲ್ ಅರ್ಧಶತಕ ಪೂರೈಸಿಕೊಂಡರು. ಮೊದಲ ಓವರ್ ಹೊರತಾಗಿ, ನಂತರದ 8 ಓವರ್​ಗಳಲ್ಲೂ ಭಾರತ ಕನಿಷ್ಠ 1 ಬೌಂಡರಿಯನ್ನಾದರೂ ಬಾರಿಸಿತ್ತು. ರಾಹುಲ್ 27 ರನ್ ಬಾರಿಸಿದ ವೇಳೆ, ಒಂದೇ ಸಮಯದಲ್ಲಿ ಎರಡು ಬಾರಿ ಅವರನ್ನು ರನೌಟ್ ಮಾಡುವ ಅವಕಾಶ ಕಿವೀಸ್​ಗೆ ಲಭ್ಯವಾಗಿತ್ತು. ಇದನ್ನು ಕಿವೀಸ್ ಬಳಸಿಕೊಳ್ಳಲಿಲ್ಲ. ಅದರ ಬೆನ್ನಲ್ಲಿಯೇ ಕೊಹ್ಲಿ 33 ರನ್ ಬಾರಿಸಿದ್ದ ವೇಳೆ ಇಶ್ ಸೋಧಿ ಸುಲಭ ಕ್ಯಾಚ್ ಕೈಚೆಲ್ಲಿದರು. ಆದರೆ, ನಂತರದ ಓವರ್​ನಲ್ಲಿ ಟಿಮ್ ಸೌಥಿ ಉತ್ತಮ ಕ್ಯಾಚ್ ಪಡೆಯುವ ಮೂಲಕ ರಾಹುಲ್ ಹೊರನಡೆಯುವಂತೆ ಮಾಡಿದರೆ, ಮಾರ್ಟಿನ್ ಗುಪ್ಟಿಲ್ ಕಠಿಣ ಕ್ಯಾಚ್​ಅನ್ನು ಪಡೆದುಕೊಳ್ಳುವ ಮೂಲಕ ಕೊಹ್ಲಿ ನಿರ್ಗಮನಕ್ಕೆ ಕಾರಣರಾದರು.

  ಕಿವೀಸ್​ಗೆ ಮೂವರ ಅರ್ಧಶತಕದಾಸರೆ

  ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡ ಕಾಲಿನ್ ಮನ್ರೊ (59ರನ್, 42 ಎಸೆತ, 6 ಬೌಂಡರಿ, 2 ಸಿಕ್ಸರ್), ಕೇನ್ ವಿಲಿಯಮ್ಸನ್ (51 ರನ್, 26 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ರಾಸ್ ಟೇಲರ್ (54*ರನ್, 27 ಎಸೆತ, 3 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಮೂಲಕ ದೊಡ್ಡ ಮೊತ್ತ ಪೇರಿಸಿತು. ಕಾಲಿನ್ ಮನ್ರೊ ಹಾಗೂ ಮಾರ್ಟಿನ್ ಗುಪ್ಟಿಲ್ (30) ಮೊದಲ ವಿಕೆಟ್​ಗೆ 80 ರನ್ ಜತೆಯಾಟವಾಡಿ ಬೇರ್ಪಟ್ಟರು. ಶಿವಂ ದುಬೆ ಎಸೆತದಲ್ಲಿ ಗುಪ್ಟಿಲ್ ನೀಡಿದ ಕ್ಯಾಚ್​ಅನ್ನು ಬೌಂಡರಿ ಲೈನ್​ನಲ್ಲಿ ರೋಹಿತ್ ಶರ್ಮ ಆಕರ್ಷಕವಾಗಿ ಪಡೆದುಕೊಂಡರು. ಬಳಿಕ ಮನ್ರೊಗೆ ಜತೆಯಾದ ನಾಯಕ ವಿಲಿಯಮ್ಸನ್ ತಂಡದ ಮೊತ್ತವನ್ನು 115ರ ಗಡಿ ದಾಟಿಸಿದರು. ಈ ವೇಳೆ ಮನ್ರೊ, ಶಾರ್ದೂಲ್ ಠಾಕೂರ್​ಗೆ ವಿಕೆಟ್ ಒಪ್ಪಿಸಿದರು. ಆಲ್ರೌಂಡರ್ ಕಾಲಿನ್ ಡಿ ಗ್ರಾಂಡ್​ಹೋಮ್ ಎದುರಿಸಿದ 2ನೇ ಎಸೆತದಲ್ಲಿಯೇ ಔಟಾದರು. ಬಳಿಕ ವಿಲಿಯಮ್ಸನ್ ಹಾಗೂ ಟೇಲರ್ 61 ರನ್ ಜತೆಯಾಟವಾಡಿ ಮೊತ್ತವನ್ನು 178ಕ್ಕೇರಿಸಿದ್ದರು. ಈ ಹಂತದಲ್ಲಿ ವಿಲಿಯಮ್ಸನ್ ನಿರ್ಗಮಿಸಿದರೆ, ಸ್ಲಾಗ್ ಓವರ್​ಗಳಲ್ಲಿ ಬುಮ್ರಾ ಹಾಗೂ ಶಮಿ ಕಡಿವಾಣ ಹಾಕಿದರು. ಬುಮ್ರಾ ಎಸೆದ 18ನೇ ಓವರ್​ನಲ್ಲಿ ಕೇವಲ 4 ರನ್ ಬಿಟ್ಟುಕೊಟ್ಟರೆ, ಶಮಿಯ 19ನೇ ಓವರ್​ನ ಮೊದಲ ಎಸೆತವನ್ನೇ ಟೇಲರ್ ಬೌಂಡರಿಗಟ್ಟಿದರು. ಬಳಿಕ ತಿರುಗೇಟು ನೀಡಿದ ಶಮಿ ಆ ಓವರ್​ನಲ್ಲಿ ಕೇವಲ 9 ರನ್ ನೀಡಿದರು. ಅಂತಿಮ ಓವರ್ ವೇಳೆ ಬುಮ್ರಾ ಕಾಲು ಟ್ವಿಸ್ಟ್ ಮಾಡಿಕೊಂಡ ನಡುವೆಯೂ ಬೌಲಿಂಗ್ ನಡೆಸಿದ್ದರಿಂದ 12 ರನ್ ಬಿಟ್ಟುಕೊಟ್ಟರು. ಇದರಿಂದಾಗಿ ಕಿವೀಸ್ 200ರ ಗಡಿ ದಾಟಲು ಯಶ ಕಂಡಿತ್ತು.

  ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೀಪಿಂಗ್ ಮಾಡುತ್ತಿರುವುದು ಹೊಸ ಅನುಭವವನ್ನು ನೀಡುತ್ತಿದೆ. ನಾನಿದನ್ನು ಆನಂದಿಸುತ್ತಿದ್ದೇನೆ. ವಿಕೆಟ್ ಹಿಂದೆ ನಿಂತು ಪಿಚ್ ವರ್ತನೆ ಅರಿಯುತ್ತಿದ್ದೇನೆ. ಇದು ನನ್ನ ಬ್ಯಾಟಿಂಗ್​ಗೂ ನೆರವಾಗುತ್ತಿದೆ.

  | ಕೆಎಲ್ ರಾಹುಲ್

  ಜಯ ತಂದ ಅಯ್ಯರ್

  ಸೌಥಿಯ ಲೆಂಥ್ ಬಾಲ್ ಎಸೆತಗಳ ಯೋಜನೆಯನ್ನು ತಲೆಕೆಳಗು ಮಾಡಿದ ಶ್ರೇಯಸ್ ಅಯ್ಯರ್, ಬಿರುಸಿನ ಬ್ಯಾಟಿಂಗ್ ಮೂಲಕ ಗೆಲುವನ್ನು ಸುಲಭವಾಗಿಸಿದರು. ಟಿಮ್ ಸೌಥಿ ಹಾಗೂ ಹ್ಯಾಮಿಶ್ ಬೆನ್ನೆಟ್​ರಿಂದ ಎದುರಿಸಿದ 17 ಎಸೆತಗಳಲ್ಲಿ 40 ರನ್​ಗಳನ್ನು ಚಚ್ಚಿದರು. ಇನ್ನೊಂದು ತುದಿಯಲ್ಲಿದ್ದ ಮನೀಷ್ ಪಾಂಡೆ (14) ಸ್ಟ್ರೈಕ್ ರೊಟೇಟ್ ಮಾಡುವ ಮೂಲಕ ಶ್ರೇಯಸ್ ಅಯ್ಯರ್​ರ ಆಟಕ್ಕೆ ನೆರವಾದರು. ಸೌಥಿ ಎಸೆತವನ್ನು ಮಿಡ್​ವಿಕೆಟ್​ನತ್ತ ಬೃಹತ್ ಸಿಕ್ಸರ್​ಗಟ್ಟುವ ಮೂಲಕ ಶ್ರೇಯಸ್ ತಂಡಕ್ಕೆ ಗೆಲುವು ತಂದರು.

  08: ಟಿ20 ಪಂದ್ಯದ ಚೇಸಿಂಗ್ ವೇಳೆ ಭಾರತ 8ನೇ ಬಾರಿಗೆ 200ಪ್ಲಸ್ ಮೊತ್ತ ಪೇರಿಸಿತು. ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಇಂಗ್ಲೆಂಡ್ 4 ಬಾರಿ ಈ ಸಾಧನೆ ಮಾಡಿದೆ.

  ನ್ಯೂಜಿಲೆಂಡ್: 5 ವಿಕೆಟ್​ಗೆ 203

  ಗುಪ್ಟಿಲ್ ಸಿ ರೋಹಿತ್ ಬಿ ಶಿವಂ ದುಬೆ 30

  ಕಾಲಿನ್ ಮನ್ರೊ ಸಿ ಚಾಹಲ್ ಬಿ ಶಾರ್ದೂಲ್ 59

  ವಿಲಿಯಮ್ಸನ್ ಸಿ ಕೊಹ್ಲಿ ಬಿ ಚಾಹಲ್ 51

  ಗ್ರಾಂಡ್​ಹೋಮ್ ಸಿ ದುಬೆ ಬಿ ಜಡೇಜಾ 0

  ರಾಸ್ ಟೇಲರ್ ಅಜೇಯ 54

  ಸೀಫರ್ಟ್ ಸಿ ಶ್ರೇಯಸ್ ಬಿ ಬುಮ್ರಾ 1

  ಮಿಚೆಲ್ ಸ್ಯಾಂಟ್ನರ್ ಔಟಾಗದೆ 2

  ಇತರ: 6. ವಿಕೆಟ್ ಪತನ: 1-80, 2-116, 3-117, 4-178, 5-181. ಬೌಲಿಂಗ್: ಜಸ್​ಪ್ರೀತ್ ಬುಮ್ರಾ 4-0-31-1, ಶಾರ್ದೂಲ್ ಠಾಕೂರ್ 3-0-44-1, ಮೊಹಮದ್ ಶಮಿ 4-0-53-0, ಯಜುವೇಂದ್ರ ಚಾಹಲ್ 4-0-32-1, ಶಿವಂ ದುಬೆ 3-0-24-1, ರವೀಂದ್ರ ಜಡೇಜಾ 2-0-18-1.

  ಭಾರತ: 19 ಓವರ್​ಗಳಲ್ಲಿ 4 ವಿಕೆಟ್​ಗೆ 204

  ರೋಹಿತ್ ಶರ್ಮ ಸಿ ಟೇಲರ್ ಬಿ ಸ್ಯಾಂಟ್ನರ್ 7

  ಕೆಎಲ್ ರಾಹುಲ್ ಸಿ ಸೌಥಿ ಬಿ ಸೋಧಿ 56

  ಕೊಹ್ಲಿ ಸಿ ಗುಪ್ಟಿಲ್ ಬಿ ಟಿಕ್ನರ್ 45

  ಶ್ರೇಯಸ್ ಅಯ್ಯರ್ ಅಜೇಯ 58

  ಶಿವಂ ದುಬೆ ಸಿ ಸೌಥಿ ಬಿ ಇಶ್ ಸೋಧಿ 13

  ಮನೀಷ್ ಪಾಂಡೆ ಔಟಾಗದೆ 14

  ಇತರ: 11. ವಿಕೆಟ್ ಪತನ: 1-16, 2-115, 3-121, 4-142. ಬೌಲಿಂಗ್: ಟಿಮ್ ಸೌಥಿ 4-0-48-0, ಸ್ಯಾಂಟ್ನರ್ 4-0-50-1, ಬೆನ್ನೆಟ್ 4-0-36-0, ಟಿಕ್ನರ್ 3-0-34-1, ಇಶ್ ಸೋಧಿ 4-0-36-2.

  ಪಂದ್ಯಶ್ರೇಷ್ಠ: ಶ್ರೇಯಸ್ ಅಯ್ಯರ್

  ಎರಡನೇ ಟಿ20 ಪಂದ್ಯ: ಯಾವಾಗ: ಜನವರಿ 26, ಭಾನುವಾರ, ಎಲ್ಲಿ: ಆಕ್ಲೆಂಡ್ ಆರಂಭ: ಮ.12.20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts