ಭಾರತಕ್ಕೆ ಚಾರಿತ್ರಿಕ ದಿಗ್ವಿಜಯ ನಿಶ್ಚಿತ

ಸಿಡ್ನಿ: ಮಳೆ, ಮಂದಬೆಳಕಿನ ಅಡಚಣೆಯ ನಡುವೆ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ತವರು ನೆಲದಲ್ಲಿಯೇ 31 ವರ್ಷಗಳ ಬಳಿಕ ಫಾಲೋಆನ್ ಅವಮಾನ ಮಾಡಿರುವ ಭಾರತ ತಂಡ, ಸರಣಿ ಗೆಲುವಿನ ಐತಿಹಾಸಿಕ ಸಾಧನೆಗೆ ಕ್ಷಣಗಣನೆ ಆರಂಭಿಸಿದೆ. ನಾಲ್ಕನೇ ದಿನದಾಟದಲ್ಲಿ ಅಲ್ಪ ಅವಧಿಯ ಆಟದಲ್ಲೂ ಮೇಲುಗೈ ಮುಂದುವರಿಸಿದ ವಿರಾಟ್ ಕೊಹ್ಲಿ ಟೀಮ್ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಗೆಲುವಿನ ಹೋರಾಟದಲ್ಲಿದೆ. ಅಂತಿಮ ದಿನ ಆತಿಥೇಯರ 10 ವಿಕೆಟ್ ಕಬಳಿಸುವಲ್ಲಿ ಸಫಲವಾದರೆ ಭಾರತ ಸರಣಿ ಗೆಲುವಿನ ಅಂತರವನ್ನು 3-1ಕ್ಕೆ ವಿಸ್ತರಿಸಿಕೊಳ್ಳಲಿದೆ.

ತವರಿನಲ್ಲಿ ಕಳೆದ ಸತತ 172 ಪಂದ್ಯಗಳಿಂದ ಯಾವುದೇ ಎದುರಾಳಿ ತಂಡದಿಂದ ಫಾಲೋ ಆನ್ ಎದುರಿಸದೆ ಪ್ರಾಬಲ್ಯ ಮೆರೆದಿದ್ದ ಆಸೀಸ್, ಸಿಡ್ನಿಯಲ್ಲಿ ಕೊನೆಗೂ ಫಾಲೋಆನ್ ಬಲೆಗೆ ಬಿತ್ತು. ಭಾನುವಾರ 6 ವಿಕೆಟ್​ಗೆ 236 ರನ್​ಗಳಿಂದ 4ನೇ ದಿನದಾಟ ಮುಂದುವರಿಸಿದ ಆಸೀಸ್, ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್​ಗೆ 5 ವಿಕೆಟ್ ಗೊಂಚಲು ಒಪ್ಪಿಸಿ 300 ರನ್​ಗೆ ಮೊದಲ ಇನಿಂಗ್ಸ್ ಮುಗಿಸಿತು. ಇದರಿಂದ 322 ರನ್​ಗಳ ಬೃಹತ್ ಮುನ್ನಡೆ ಪಡೆದ ವಿರಾಟ್ ಕೊಹ್ಲಿ ಪಡೆ, ಆಸೀಸ್ ತಂಡಕ್ಕೆ ಫಾಲೋ ಆನ್ ಹೇರಿ ಮತ್ತೆ ಬ್ಯಾಟಿಂಗ್ ಆಹ್ವಾನಿಸಿತು. ದ್ವಿತೀಯ ಸರದಿಯಲ್ಲಿ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದ್ದಾಗ ಮತ್ತೆ ಮೋಡ ಹಾಗೂ ಮಂದ ಬೆಳಕು ಅಡ್ಡಿಯಾಗಿದ್ದರಿಂದ ದಿನದಾಟ ಬೇಗನೆ ಸ್ಥಗಿತಗೊಂಡಿತು. 4ನೇ ದಿನ ಕೇವಲ 25.2 ಓವರ್​ಗಳ ಆಟ ನಡೆಯಿತು. ಇನ್ನೂ 316 ರನ್​ಗಳ ಹಿನ್ನಡೆಯಲ್ಲಿರುವ ಆಸೀಸ್, ಅಂತಿಮ ದಿನ ಸೋಲಿನಿಂದ ಪಾರಾಗಲಷ್ಟೇ ಹೋರಾಡಬೇಕಿದೆ. ಅಕಸ್ಮಾತ್ ಸೋಮವಾರವೂ ಮಂದ

ಬೆಳಕಿನ ಸಮಸ್ಯೆ ಎದುರಾಗಿ ಡ್ರಾ ಫಲಿತಾಂಶ ಕಂಡರೂ, 2-1 ಮುನ್ನಡೆ ಯಲ್ಲಿರುವ ಭಾರತದ 71 ವರ್ಷಗಳ ಕನಸು ಸಾಕಾರಗೊಳ್ಳಲಿದೆ. -ಏಜೆನ್ಸೀಸ್

ಬಾಲಂಗೋಚಿಗಳನ್ನು ನಿಯಂತ್ರಿಸಿದ ಭಾರತ

ಟೀಮ್ ಇಂಡಿಯಾ ಬೌಲರ್​ಗಳು ಈ ಬಾರಿ ಆಸೀಸ್ ಬಾಲಂಗೋಚಿಗಳಿಗೆ ಪ್ರತಿರೋಧ ನೀಡಲು ಅವಕಾಶ ಕೊಡಲಿಲ್ಲ. ಕೊನೇ ವಿಕೆಟ್​ಗೆ ಜೋಸ್ ಹ್ಯಾಸಲ್​ವುಡ್(21 ರನ್, 45 ಎಸೆತ, 2 ಬೌಂಡರಿ) ಮತ್ತು ಮಿಚೆಲ್ ಸ್ಟಾರ್ಕ್ (29*ರನ್, 55 ಎಸೆತ, 3 ಬೌಂಡರಿ) ಒಂದು ಜೀವದಾನದ ಲಾಭದಿಂದ 42 ರನ್ ಜತೆಯಾಟವಾಡಿದ್ದು ಬಿಟ್ಟರೆ ಉಳಿದವರೆಲ್ಲರೂ ವಿಫಲರಾದರು. 3ನೇ ದಿನದ ಕೊನೆಯಲ್ಲಿ ಪ್ರತಿರೋಧ ಒಡ್ಡಿದ್ದ ಪ್ಯಾಟ್ ಕಮ್ಮಿನ್ಸ್(25) ಮತ್ತು ಪೀಟರ್ ಹ್ಯಾಂಡ್ಸ್​ಕೊಂಬ್(37) ಜೋಡಿಯನ್ನು 4ನೇ ದಿನದ ಆರಂಭದಲ್ಲೇ ಭಾರತ ಬೇರ್ಪಡಿಸಿತು. 2ನೇ ಹೊಸ ಚೆಂಡಿನೊಂದಿಗೆ ದಾಳಿ ನಡೆಸಿದ ಶಮಿ ಅನಿರೀಕ್ಷಿತ ತಳಮಟ್ಟದ ಎಸೆತಕ್ಕೆ ಕಮ್ಮಿನ್ಸ್ ರನ್ನು ಬೌಲ್ಡ್ ಮಾಡಿದರು. ನಂತರ ಬುಮ್ರಾ ಪಂದ್ಯದಲ್ಲಿ ತಮ್ಮ ಮೊದಲ ವಿಕೆಟ್ ಆಗಿ ಹ್ಯಾಂಡ್ಸ್​ಕೊಂಬ್​ರನ್ನು ಪೆವಿಲಿಯನ್​ಗೆ ಅಟ್ಟಿದರು. ನಾಥನ್ ಲ್ಯಾನ್ ಬಂದಷ್ಟೇ ವೇಗದಲ್ಲಿ ನಿರ್ಗಮಿಸಿದರು. ನಂತರ ಹನುಮ ವಿಹಾರಿ ಮಿಡ್​ಆನ್​ನಲ್ಲಿ ಹ್ಯಾಸಲ್​ವುಡ್​ರ ಸುಲಭ ಕ್ಯಾಚ್ ಕೈಚೆಲ್ಲಿದ್ದರಿಂದ ಭಾರತಕ್ಕೆ ಅಲ್ಪ ಹಿನ್ನಡೆಯಾಯಿತು. ಇದರಿಂದ ಈ ಜೋಡಿ ತಂಡದ ಮೊತ್ತವನ್ನು 300 ಗಡಿ ದಾಟಿಸಿತು.

31 ವರ್ಷಗಳ ಆಸೀಸ್ ಪ್ರಾಬಲ್ಯಕ್ಕೆ ಬ್ರೇಕ್!

ಟೆಸ್ಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಅದರದ್ದೇ ನೆಲದಲ್ಲಿ ಪ್ರವಾಸಿ ತಂಡವೊಂದು ಕೊನೇ ಬಾರಿ ಫಾಲೋ ಆನ್ ಹೇರಿದ್ದು 1988ರಲ್ಲಿ. 31 ವರ್ಷಗಳ ನಂತರ ಆ ಸಾಧನೆಯನ್ನು ಭಾರತ ತಂಡ ಮಾಡಿತು. 1988ರಲ್ಲಿ ಆಸೀಸ್ ಕೊನೇ ಬಾರಿ ಇಂಗ್ಲೆಂಡ್ ತಂಡದಿಂದ ಫಾಲೋ ಆನ್ ಎದುರಿಸಿತ್ತು. ಇನ್ನು ಭಾರತ ಕೂಡ ಆಸೀಸ್ ನೆಲದಲ್ಲಿ 33 ವರ್ಷಗಳ ಬಳಿಕ ಫಾಲೋ ಆನ್ ಹೇರಿತು. 1986ರಲ್ಲಿ ಸಿಡ್ನಿಯಲ್ಲೇ ದಿಗ್ಗಜ ಕಪಿಲ್ ದೇವ್ ಸಾರಥ್ಯದಲ್ಲಿ ಫಾಲೋ ಆನ್ ಹೇರಿತ್ತು. ಒಟ್ಟಾರೆ ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡ ಆಸೀಸ್​ಗೆ 4ನೇ ಬಾರಿ ಫಾಲೋ ಆನ್ ಹೇರಿತು. ಆಸೀಸ್​ನಲ್ಲಿ 2 ಸಲ ಹಾಗೂ 1979-80ರಲ್ಲಿ ದೆಹಲಿ ಮತ್ತು ಮುಂಬೈಯಲ್ಲಿ ತಲಾ ಒಮ್ಮೆ ಫಾಲೋ ಆನ್ ಹೇರಿತ್ತು.

71 ವರ್ಷಗಳ ಕಾಯುವಿಕೆ ಇಂದು ಅಂತ್ಯ!

ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಕ್ರಿಕೆಟ್ ಸರಣಿಗಾಗಿ ಮೊದಲ ವಿದೇಶ ಪ್ರವಾಸ ಮಾಡಿದ್ದು ಆಸ್ಟ್ರೇಲಿಯಾಕ್ಕೆ. 1947-48ರಿಂದ ಆರಂಭವಾಗಿ 2014-15ರವರೆಗೆ 11 ಬಾರಿ ಪೂರ್ಣಪ್ರಮಾಣದ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ, 2 ಬಾರಿ ಸರಣಿ ಸಮಬಲ ಸಾಧಿಸಿದ್ದೇ ಶ್ರೇಷ್ಠ ಸಾಧನೆ ಎನಿಸಿತ್ತು. ಆದರೆ ಈಗ 12ನೇ ಪ್ರವಾಸದಲ್ಲಿ ಕೊನೆಗೂ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಸರಣಿ ಗೆಲುವಿನ ಇತಿಹಾಸ ಬರೆಯುತ್ತಿದೆ. ಭಾರತದ 71 ವರ್ಷಗಳ ಕಾಯುವಿಕೆ ಸೋಮವಾರ ಅಂತ್ಯಗೊಳ್ಳುವುದು ಖಚಿತವೆನಿಸಿದೆ. ಭಾರತ 2-1ರಿಂದ ಸರಣಿ ಗೆಲ್ಲುವುದೇ ಅಥವಾ ಅದನ್ನು 3-1ಕ್ಕೆ ವಿಸ್ತರಿಸಿಕೊಳ್ಳುವುದೇ ಎಂಬುದಷ್ಟೇ ಸದ್ಯ ಉಳಿದಿರುವ ಕುತೂಹಲವಾಗಿದೆ.

ಕಳೆದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಪ್ರವಾಸದ ಸರಣಿಯಲ್ಲಿ ನಮಗೆ ಇದೇ ಬೌಲಿಂಗ್ ಶಕ್ತಿಯಿಂದ ಗೆಲ್ಲುವ ಅವಕಾಶ ಇತ್ತು. ಆದರೆ ನಮ್ಮ ಕೆಲವು ತಪ್ಪುಗಳು ಹಿನ್ನಡೆ ತಂದಿದ್ದವು. ಈ ಸಲ ಯಶಸ್ಸಿನ ಹಾದಿಯಲ್ಲಿದ್ದೇವೆ. ಅಂತಿಮ ದಿನ ಆಸ್ಟ್ರೇಲಿಯಾ ತಂಡವನ್ನು ಆಲೌಟ್ ಮಾಡಲು ವಾತಾವರಣ ಸಾಥ್ ನೀಡಬೇಕು. ಆಗ ಸರಣಿಯಲ್ಲಿ 3-1 ಗೆಲುವಿನ ಕನಸು ನನಸಾಗಲಿದೆ.

| ಭರತ್ ಅರುಣ್ ಭಾರತದ ಬೌಲಿಂಗ್ ಕೋಚ್